ಬೆಂಗಳೂರು: ನವೆಂಬರ್ 11 ರಂದು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಂದ 108 ಅಡಿ ಎತ್ತರದ ನಾಡಪ್ರಭು ಕೆಂಪೇಗೌಡರ ಕಂಚಿನ ಪ್ರತಿಮೆ ಲೋಕಾರ್ಪಣೆ ಮಾಡಲಾಗುವುದು. ಈ ಹಿನ್ನೆಲೆಯಲ್ಲಿ, ಅ.21ರಿಂದ ನ.7ರವರೆಗೆ ರಾಜ್ಯಾದ್ಯಂತ ನಡೆಯಲಿರುವ ಪವಿತ್ರ ಮೃತ್ತಿಕಾ ಸಂಗ್ರಹಣಾ ಅಭಿಯಾನ ನಡೆಯಲಿದೆ. ಇದಕ್ಕೆ ಸಿದ್ಧವಾಗಿರುವ 20 ‘ನಾಡಪ್ರಭು ಕೆಂಪೇಗೌಡ ರಥ’ಗಳಿಗೆ ಇದೇ 21ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧಾನಸೌಧದ ಮುಂಭಾಗದಿಂದ ಚಾಲನೆ ನೀಡಲಿದ್ದಾರೆ ಎಂದು ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ತಿಳಿಸಿದ್ದಾರೆ.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇದಕ್ಕಾಗಿ ಜಿಲ್ಲಾ ಮಟ್ಟದಲ್ಲಿ ಸೂಕ್ತ ಸಮಿತಿಗಳನ್ನು ರಚಿಸಲಾಗಿದೆ. ಈ ರಥಗಳು ಆಯಾಯ ಪ್ರದೇಶ/ಜಿಲ್ಲೆಗಳನ್ನು ಪ್ರವೇಶಿಸಿದಾಗ ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಗುವುದು ಎಂದರು.
ಈ ಅಭಿಯಾನದ ಅಂಗವಾಗಿ ರಾಜ್ಯದ ಪ್ರತಿಯೊಂದು ಗ್ರಾಮದ ಕೆರೆಕಟ್ಟೆ, ಕಲ್ಯಾಣಿ, ನದಿ, ಪುಷ್ಕರಿಣಿ, ಪುಣ್ಯಪುರುಷರ ಸಮಾಧಿ ಸ್ಥಳಗಳಿಂದ ಪವಿತ್ರವಾದ ಮಣ್ಣನ್ನು ಸಂಗ್ರಹಿಸಲಾಗುವುದು. ಪ್ರತಿಯೊಂದು ರಥದ ಮಾರ್ಗನಕ್ಷೆಯನ್ನೂ ಸಿದ್ಧಪಡಿಸಲಾಗಿದೆ. ಆಯಾಯ ಜಿಲ್ಲೆಗಳಲ್ಲಿ ಧಾರ್ಮಿಕ ಮುಖಂಡರು, ಚುನಾಯಿತ ಪ್ರತಿನಿಧಿಗಳು, ಸಾಹಿತಿಗಳು, ಪ್ರಗತಿಪರ ರೈತರು, ಸ್ವಸಹಾಯ ಸಂಘಗಳ ಸದಸ್ಯರು, ಹಿರಿಯ ನಾಗರಿಕರು, ಹಾಲು ಉತ್ಪಾದಕರ ಒಕ್ಕೂಟಗಳು, ಕೈಗಾರಿಕಾ ಸಂಘಗಳು ಇದರಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಅವರು ವಿವರಿಸಿದರು.

ಪವಿತ್ರ ಮೃತ್ತಿಕೆಯನ್ನು ವಿಮಾನ ನಿಲ್ದಾಣ ಆವರಣದಲ್ಲಿ ಅಭಿವೃದ್ಧಿಪಡಿಸುತ್ತಿರುವ 23 ಎಕರೆ ವಿಶಾಲವಾದ ಕೆಂಪೇಗೌಡ ಥೀಮ್ ಪಾರ್ಕ್‌ನಲ್ಲಿ ಬಳಸಿಕೊಳ್ಳಲಾಗುವುದು. ಇಡೀ ಕಾರ್ಯಕ್ರಮ ಮತ್ತು ಅಭಿಯಾನಗಳು ಪಕ್ಷಾತೀತವಾದ ಕಾರ್ಯಕ್ರಮವಾಗಿರಲಿದೆ. ಇಂಥದೊಂದು ಭವ್ಯ ಪ್ರತಿಮೆಯನ್ನು ಸ್ಥಾಪಿಸಬೇಕು ಎನ್ನುವ ಬೇಡಿಕೆ ಹಲವು ವರ್ಷಗಳಿಂದ ಇತ್ತು ಎಂದು ಅವರು ನುಡಿದರು.
ಕೆಂಪೇಗೌಡರು ಕಟ್ಟಿದ ಬೆಂಗಳೂರು ಇಂದು ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ. ಅವರಿಗಿದ್ದ ದೂರದೃಷ್ಟಿಯನ್ನು ಗೌರವಿಸಿ, 108 ಅಡಿ ಎತ್ತರದ ಪ್ರತಿಮೆಗೆ ‘ಪ್ರಗತಿ ಪ್ರತಿಮೆ’ ಎಂದು ನಾಮಕರಣ ಮಾಡಲಾಗಿದೆ. ಜಗತ್ತಿನ ಯಾವ ನಗರದ ವಿಮಾನ ನಿಲ್ದಾಣದಲ್ಲೂ ಅಲ್ಲಿಯ ಸಂಸ್ಥಾಪಕರ ಪ್ರತಿಮೆ ಇಲ್ಲ. ಇನ್ನುಮುಂದೆ, ಬೆಂಗಳೂರು ವಿಮಾನ ನಿಲ್ದಾಣ ಸಮುಚ್ಚಯದಲ್ಲಿ ಕೆಂಪೇಗೌಡರ ಪ್ರತಿಮೆ ಆಕರ್ಷಣೆಯ ಕೇಂದ್ರವಾಗಲಿದೆ ಎಂದು ಅವರು ಹೇಳಿದರು.
ಕೆಂಪೇಗೌಡ: ಮೃತ್ತಿಕಾ ಸಂಗ್ರಹ ಅಭಿಯಾನಕ್ಕೆ ದೇವೇಗೌಡರಿಗೆ ಆಹ್ವಾನ ನೀಡಿದ ಸಚಿವ ಅಶ್ವತ್ಥನಾರಾಯಣ
ಕೆಂಪೇಗೌಡರ ಕಂಚಿನ ಪ್ರತಿಮೆ ಲೋಕಾರ್ಪಣೆ ಮತ್ತು ಇದಕ್ಕೆ ಪೂರ್ವಭಾವಿಯಾಗಿ ಇದೇ 21ರಂದು ನಡೆಯಲಿರುವ ಪವಿತ್ರ ಮೃತ್ತಿಕಾ ಸಂಗ್ರಹ ಅಭಿಯಾನ ಕಾರ್ಯಕ್ರಮಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷರೂ ಆದ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಅವರು ಸರಕಾರದ ಪರವಾಗಿ ಆಮಂತ್ರಿಸಿದರು.
ಮಾಜಿ ಪ್ರಧಾನಿಗಳನ್ನು ಪದ್ಮನಾಭ ನಗರದ ನಿವಾಸದಲ್ಲಿ ಬುಧವಾರ ಭೇಟಿಯಾದ ಸಚಿವರು ಗೌಡರ ಯೋಗಕ್ಷೇಮವನ್ನೂ ವಿಚಾರಿಸಿದರು. ಬೇಗ ಚೇತರಿಸಿಕೊಳ್ಳುವಂತೆ ಶುಭ ಹಾರೈಸಿದರು.
#NADAPRABHU KEMPEGOWDA STATUE #H D DEVEGOWDA #FORMER PRIME MINISTER #DR CN ASHWATHNARAYAN #PRIME MINISTER NARENDRA MODI #INNOGURATION #108 FEET #INTERNATIONAL AIRPORT




