ಬೆಂಗಳೂರು: ನಮ್ಮ ನಾಡಿನಲ್ಲಿ ಹಿಂದಿ ಭಾಷಾ ಹೇರಿಕೆಯನ್ನು ಹೇಗೆ ಒಪ್ಪಲಾಗದೋ ಹಾಗೇ ಹಿಂದುತ್ವವನ್ನು ಒಪ್ಪಲಾಗದು ಎಂದು ನಟ ಚೇತನ್ ಮತ್ತೆ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಭೂತಕೋಲ ಹಿಂದೂಗಳದ್ದಲ್ಲ ಎಂದು ಹೇಳಿಕೆ ನೀಡುವ ಮೂಲಕ ಟೀಕೆಗೆ ಗುರಿಯಾಗಿದ್ದರು. ಇದೀಗ ಅದನ್ನು ಸಮರ್ಥಿಸಿಕೊಂಡಿರುವ ಚೇತನ್, ಹಿಂದಿ ಹೇರಿಕೆಯನ್ನು ನಾವು ಒಪ್ಪಲಾಗದು. ಅದೇ ತರ ಹಿಂದುತ್ವವನ್ನು ಒಪ್ಪಲು ಸಾಧ್ಯವಿಲ್ಲ. ಬಹುತ್ವ ಭಾರತದಲ್ಲಿ ಧರ್ಮ ಹಾಗೂ ಜಾತಿಗಳ ನಡುವೆ ವಿಭಿನ್ನತೆ ಇದೆ. ಇಲ್ಲಿ ಹಿಂದೂ ಅನ್ನೋದೇ ಬೇರೆ ಹಿಂದುತ್ವ ಅನ್ನೋದೇ ಬೇರೆ. ಇಲ್ಲಿನ ಮೂಲ ನಿವಾಸಿಗಳ ಆಚರಣೆ ಭೂತಕೋಲ. ಅದನ್ನು ಒಂದು ಧರ್ಮಕ್ಕೆ ಸೀಮಿತಗೊಳಿಸುವುದು ಸಲ್ಲ. ಎಲ್ಲರೂ ಎಲ್ಲರ ಆಚರಣೆಗಳನ್ನು ಗೌರವಿಸಿ ಎಂದು ಪ್ರತಿಕ್ರಿಯಿಸಿದ್ದಾರೆ ಎಂದರು.
ಚಕ್ರವರ್ತಿ ಸೂಲಿಬೆಲೆ ಟಾಂಗ್ : ನಟ ಚೇತನ್ ಮಿತಿ ಮೀರಿದ್ದಾರೆ. ಕಾಂತಾರ ಸಿನಿಮಾ ಸಾಕಷ್ಟು ಪ್ರಭಾವ ಬೀರಿ, ಹಿಟ್ ಆಗುತ್ತಿದೆ. ಚೇತನ್ ಗೆ ಈ ಸಿನಿಮಾದ ರೀತಿಯಲ್ಲಿ ಅವರ ಸಿನಿಮಾ ಹಿಟ್ ಆಗ್ತಿಲ್ಲ ಅಂತ ಹೊಟ್ಟೆ ಉರಿ ಬಂದಿದೆ. ಅದಕ್ಕೆ ಅವರು ಹಿಂಗೆ ಆಡ್ತಿದಾರೆ ಅಂತ ಟಾಂಗ್ ಕೊಟ್ಟಿದ್ದಾರೆ.
ಚೇತನ್ ಮತ್ತು ಅವರ ಆಲೋಚನೆ ಇರುವವರು ಬುಡಕಟ್ಟು ಜನಾಂಗವನ್ನು ಹಿಂದೂ ಧರ್ಮದಿಂದ ದೂರವಿಡುವ ಕೆಲಸ ಮಾಡ್ತಿದ್ದಾರೆ. ದಲಿತರು, ಆದಿವಾಸಿಗಳು, ಹಿಂದುಳಿದ ವರ್ಗ ಸೇರಿದಂತೆ ಎಲ್ಲರೂ ಸೇರಿದರೆನೇ ಹಿಂದೂ ಧರ್ಮ ಆಗಿದೆ. ಇವರೆಲ್ಲರೂ ಮೇಲ್ಮುಖವಾಗಿ ಉಗಿಯುತ್ತಿದ್ದು, ಅದು ವಾಪಸ್ಸು ಇವರ ಮುಖಕ್ಕೆ ಬಂದು ಹೊಡೆಯುತ್ತದೆ ಎಂಬುದು ಮರೆತಿದ್ದಾರೆ ಎಂದು ಸೂಲಿಬೆಲೆ ಟೀಕಿಸಿದ್ದಾರೆ.




