RECOUNTING: ಫಲಿತಾಂಶ ಘೋಷಿಸಿದ 1 ವರ್ಷ 10 ತಿಂಗಳ ಬಳಿಕ ಮರು ಎಣಿಕೆ ಆದೇಶ ನೀಡಿದ ನ್ಯಾಯಾಲಯ

ಬೆಳಗಾವಿ : ಚುನಾವಣೆ ನಡೆದು, ಫಲಿತಾಂಶ ಘೋಷಣೆಯಾದ ಒಂದು ವರ್ಷ 10 ತಿಂಗಳ ನಂತರ ಅಕ್ಟೋಬರ್ 20 ರಂದು ಮರು ಮತ ಎಣಿಕೆಗೆ ಕೋರ್ಟ್ ಆದೇಶ ನೀಡಿರುವ ಘಟನೆ ರಾಜ್ಯದಲ್ಲಿ ನಡೆದಿದೆ.
ಆಶ್ವರ್ಯ ಎನಿಸಿದರೂ ಇದು ಸತ್ಯ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹೆಬ್ಬಾಳ ಗ್ರಾಮ ಪಂಚಾಯಿತಿಗೆ ಚುನಾವಣಾ ಆಯೋಗವು 2020 ಡಿಸೆಂಬರ್ 23 ರಂದು ಚುನಾವಣೆ ನಡೆಸಲಾಗಿತ್ತು. ಅದರ ಫಲಿತಾಂಶವನ್ನು ಡಿಸೆಂಬರ್ 30 ರಂದು ಘೋಷಣೆ ಮಾಡಲಾಗಿತ್ತು. ಅದರಲ್ಲಿ ಹೆಬ್ಬಾಳ ಗ್ರಾಮದ ವಾರ್ಡ್ ನಂ.2 ಕ್ಕೆ ಸ್ಪರ್ಧೆ ಮಾಡಿದ್ದ ಅಭ್ಯರ್ಥಿಗಳ‌‌ ನಡುವೆ ತೀವ್ರ ಪೈಪೋಟಿ ನಡೆದು, ಕೊನೆಗೆ ಒಬ್ಬರು ಕೇವಲ 1 ಮತದ ಅಂತರದಲ್ಲಿ ಜಯಿಸಿದ್ದರು. ಈ ವೇಳೆ ಸೋತ ಅಭ್ಯರ್ಥಿಯು ಮರು ಮತ ಎಣಿಕೆಗೆ ಒತ್ತಾಯಿಸಿದ್ದರು.
ಆದರೆ, ಚುನಾವಣಾಧಿಕಾರಿಗಳು ಆತನ ಮಾತಿಗೆ ಕ್ಯಾರೇ ಎನ್ನಲಿಲ್ಲ. ಇದರಿಂದ ಕೆರಳಿದ ಆತ ನ್ಯಾಯಾಲಯದ ಮೆಟ್ಟಿಲೇರಿದ್ದರು. ಇದೀಗ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಬರೋಬ್ಬರಿ 1 ವರ್ಷ, 10 ತಿಂಗಳು ಕಳೆದಿದೆ. ಇದೀಗ ಕೋರ್ಟ್ ನ ಮೂಲಕ ಮರು ಮತ ಎಣಿಕೆಗೆ ಆದೇಶ ಬಂದಿದೆ. ಈ ಹಿನ್ನೆಲೆಯಲ್ಲಿ ಇಂದು ಮರು ಮತ ಎಣಿಕೆ ಕಾರ್ಯ ನಡೆಯಲಿದ್ದು ಎಲ್ಲರ ಚಿತ್ತ ಈ ಮತ ಎಣಿಕೆ ಕಡೆಗೆ ಸಾಗಿದೆ.
ಒಂದು ಮತದ ಅಂತರದಿಂದ ಪರಾಜಿತಗೊಂಡ ಅಭ್ಯರ್ಥಿ ಪರ ವಕೀಲರು ಸಮರ್ಥ ವಾದ ಮಂಡಿಸಿದ ಹಿನ್ನೆಲೆಯಲ್ಲಿ ಕೋರ್ಟ್ ಮರು ಮತ ಎಣಿಕೆಗೆ ಮುಂದಾಗಿದೆ. ಈ ಮರು ಎಣಿಕೆ ವೇಳೆ ಪರಾರ್ಜಿತ ಅಭ್ಯರ್ಥಿಯಾದ ರಾವಸಾಹೇಬ ಪಾಟೀಲ್ ಗೆದ್ದರೆ ಮತ್ತಷ್ಟು ಗೊಂದಲ ಹಾಗೂ ಕೂತುಹಲಕ್ಕೂ ಕಾರಣವಾಗಲಿದೆ.
ಅಂದು ನಡೆದಿದ್ದ ಚುನಾವಣೆಯಲ್ಲಿ ಗೆದ್ದವರು 506 ಮತಗಳು ಮತ್ತು ಸೋತವರು 505 ಮತಗಳನ್ನು ಪಡೆದುಕೊಂಡಿದ್ದಾರೆ. ಈ ವೇಳೆ ಸೋತ ಅಭ್ಯರ್ಥಿ ರಾವ ಸಾಹೇಬ್ ಮರು ಮತ ಎಣಿಕೆ ನಡೆಸುವಂತೆ ಮನವಿ ಮಾಡಿದ್ದರು. ಆದರೆ, ಚುನಾವಣಾ ಅಧಿಕಾರಿಗಳು ಗೆದ್ದ ಅಭ್ಯರ್ಥಿಯ ಹೆಸರನ್ನು ಘೋಷಣೆ ಮಾಡಿಬಿಟ್ಟಿದ್ದಾರೆ. ಇದರಿಂದ ಬೇಸತ್ತ ಸೋತ ಅಭ್ಯರ್ಥಿ ಕೋರ್ಟ್ ಗೆ ಅರ್ಜಿ ಸಲ್ಲಿಕೆ ಮಾಡಿದ್ದರು.

More News