ಲಂಡನ್ : ಬ್ರಿಟನ್ ಪ್ರಧಾನಿಯಾಗಿ ಕೇವಲ 45 ದಿನಗಳ ಕಾಲ ಆಡಳಿತ ನಡೆಸಿರುವ ಲಿಜ್ ಟ್ರಸ್, ಆರ್ಥಿಕ ಹಿಂಜರಿಕೆಯನ್ನು ಮೆಟ್ಟಿ ನಿಲ್ಲುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಬ್ರಿಟನ್ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡುವ ತಮ್ಮ ನಿರ್ಧಾರದ ಕುರಿತು ಸ್ಪಷ್ಟನೆ ನೀಡಿರುವ ಲಿಜ್ ಟ್ರಸ್, ನನಗೆ ನೀಡಿದ ಜನಾದೇಶವನ್ನು ನಾನು ಪೂರೈಸಲು ಸಾಧ್ಯವಿಲ್ಲ ಎಂದು ನಾನು ಅರಿತುಕೊಂಡಿರುವುದಾಗಿ ಹೇಳಿದ್ದಾರೆ.

ನಾನು ಈಗಾಗಲೇ ಕಿಂಗ್ ಚಾರ್ಲ್ಸ್ ಅವರಿಗೆ ನನ್ನ ರಾಜೀನಾಮೆ ನಿರ್ಧಾರವನ್ನು ತಿಳಿಸಿದ್ದು, ದೇಶಕ್ಕೆ ನೂತನ ಪ್ರಧಾನಿಯ ಆಯ್ಕೆಯಾಗುವವರೆಗೂ ಪ್ರಧಾನಿ ಹುದ್ದೆಯಲ್ಲಿ ಮುಂದುವರೆಯುವಂತೆ ಅವರು ನನ್ನನ್ನು ಕೋರಿದ್ದಾರೆ ಎಂದು ಲಿಜ್ ಟ್ರಸ್ ಸ್ಪಷ್ಟಪಡಿಸಿದ್ದಾರೆ. ರಾಷ್ಟ್ರವನ್ನುದ್ದೇಶಿಸಿ ಮಾತನಾಡಿರುವ ಲಿಜ್ ಟ್ರಸ್, ದೇಶವು ತೀವ್ರ ಆರ್ಥಿಕ ಬಿಕ್ಕಟ್ಟಿನಿಂದ ಬಳಲುತ್ತಿರುವ ಸಂದರ್ಭದಲ್ಲಿ ನಾನು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದೆ. ಆದರೆ ದೇಶವನ್ನು ಅರ್ಥಿಕ ಹಿಂಜರಿಕೆಯಿಂದ ಮೇಲೆತ್ತುವುದು ಬಹಖ ಕಷ್ಟದ ಕೆಲಸ ಎಂಬುದನ್ನು ಕೆಲವೇ ದಿನಗಳಲ್ಲಿ ಅರಿತುಕೊಂಡೆ.

ಹೀಗಾಗಿ ಬೇರೊಬ್ಬ ಸಮರ್ಥ ನಾಯಕರು ದೇಶವನ್ನು ಮುನ್ನಡೆಸಲಿ ಎಂಬ ಆಶಯದೊಂದಿಗೆ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡುತ್ತಿರುವುದಾಗಿ ಹೇಳಿದ್ದಾರೆ. ಉಕ್ರೇನ್ ಮೇಲಿಮ ರಷ್ಯಾದ ಆಕ್ರಮಣ ಯುರೋಪ್ ಖಂಡ ಮತ್ತು ಇಂಗ್ಲೆಂಡ್‌ನ ಭದ್ರತೆಗೆ ಭಾರೀ ಅಪಾಯ ತಂದೊಡ್ಡಿದೆ. ಆರ್ಥಿಕ ಹಿಂಜರಿಕೆಯಿಂದ ದೇಶ ಸಾಕಷ್ಟು ನಷ್ಟ ಅನುಭವಿಸುತ್ತಿದ್ದು, ನನಗೆ ನೀಡಿದ ಜನಾದೇಶವನ್ನು ನಾನು ಪೂರೈಸಲು ಸಾಧ್ಯವಿಲ್ಲ ಎಂಬುದು ಗೊತ್ತಾಗಿದೆ ಎಂದು ಲಿಜ್ ಟ್ರಸ್ ತಮ್ಮ ರಾಜೀನಾಮೆ ಭಾಷಣದಲ್ಲಿ ತಿಳಿಸಿದ್ದಾರೆ. ಬೋರಿಸ್ ಜಾನ್ಸನ್ ಅವರು ಬ್ರಿಟನ್ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ ಬಳಿಕ ನಡೆದ ಕನ್ಸರ್ವೇಟಿವ್ ಪಕ್ಷದ ಆಂತರಿಕ ಚುನಾವಣೆಯಲ್ಲಿ, ಲಿಜ್ ಟ್ರಸ್ ಅವರನ್ನು ಬ್ರಿಟನ್‌ನ ನೂತನ ಪ್ರಧಾನಮಂತ್ರಿಯಾಗಿ ಆಯ್ಕೆ ಮಾಡಲಾಗಿತ್ತು. ಈ ಆಂತರಿಕ ಚುನಾವಣೆಯಲ್ಲಿ ಲಿಜ್ ಟ್ರಸ್ ಅವರು ಭಾರತೀಯ ಮೂಲದ ತಮ್ಮ ಪ್ರತಿಸ್ಪರ್ಧಿ ರಿಷಿ ಸುನಕ್ ಅವರನ್ನು ಸೋಲಿಸಿ ಪ್ರಧಾನಿ ಪಟ್ಟಕ್ಕೇರಿದ್ದರು.




