ನವೆಂಬರ್ 1ಕ್ಕೆ ವಿಯೆಟ್ನಾಂನಲ್ಲಿ ‘ಕಾಂತಾರ’ ವಿಶೇಷ ಪ್ರದರ್ಶನ

ಬೆಂಗಳೂರು : ವಿಶ್ವದಾದ್ಯಂತ ಸೌಂಡ್ ಮಾಡುತ್ತಿರುವ ಕಾಂತಾರ ಸಿನಿಮಾ ದೈವದ ಅಪ್ಪಟ ಕಥೆಗೆ ಕನ್ನಡಿಗರು ಮಾತ್ರವಲ್ಲದೇ ಪರಭಾಷೆಯ ಪ್ರೇಕ್ಷಕರು ಮಾರುಹೋಗಿದ್ದಾರೆ. ಕರಾವಳಿ ಭಾಗದ, ಜಾನಪದ ಹಿನ್ನಲೆಯುಳ್ಳ ಒಂದು ದೈವದ ಕಥೆಯನ್ನು ಕಾಡಿನೊಳಗಡೆ ರಿಷಬ್ ಶೆಟ್ಟಿ ಅವರು ಕಾಂತಾರ ಚಿತ್ರದ ಮೂಲಕ ಹೇಳಿದ್ದಾರೆ. ಈ ಚಿತ್ರಕ್ಕೆ ಕಥೆ ಬರೆದು, ನಿರ್ದೇಶನ ಮಾಡಿರುವ ರಿಷಬ್ ಶೆಟ್ಟಿ ಅವರು ಕಾಂತಾರದ ಮೂಲಕ ಸಾಕಷ್ಟು ವಿಷಯಗಳನ್ನು ಹೇಳುವ ಪ್ರಯತ್ನ ಮಾಡಿದ್ದಾರೆ. ಅದಕ್ಕೆ ಪ್ರತಿಫಲವಾಗಿ ಈ ಚಿತ್ರ ಕನ್ನಡದಲ್ಲಿ ದೊಡ್ಡ ಹಿಟ್ ಆಗಿ, ಬೇರೆ ಭಾಷೆಗಳಲ್ಲಿಯೂ ಕೂಡ ರಿಲೀಸ್ ಆಗುತ್ತಿದೆ. ಹೀಗಿದ್ದಾಗ್ಯೂ ಈ ಚಿತ್ರದ ಬಗ್ಗೆ ಕೆಲವು ನಕಾರಾತ್ಮಕ ಮಾತುಗಳು ಕೇಳಿ ಬಂದರೂ ನಿರ್ದೇಶಕ ಮತ್ತು ನಟ ರಿಷಬ್ ಶೆಟ್ಟಿ ಕೇರ್ ಎಂದಿಲ್ಲ.

ವಿಶ್ವದ ಹಲವೆಡೆ ಪ್ರದರ್ಶನ ಕಂಡಿರುವ ಕಾಂತಾರ ಸಿನಿಮಾ ನವೆಂಬರ್ 1 ರಂದು ವಿಶೇಷ ಪ್ರದರ್ಶನವನ್ನು ಆಯೋಜಿಸಲು ತೆರೆಮರೆಯಲ್ಲಿ ತಯಾರಿ ನಡೆಯುತ್ತಿದೆ. ಹೊರದೇಶದಲ್ಲೂ ಕನ್ನಡಿಗರು ಇರುವುದರಿಂದ ಕನ್ನಡಿಗರ ವಿಶೇಷ ದಿನವಾದ ಈ ದಿನದಂದು ವಿಯೆಟ್ನಾಂನ ಹೋ ಚಿ ಮಿನ್ಹ್ ಸಿಟಿಯ ಪ್ರೇಕ್ಷಕರಿಗೆ ಕಾಂತಾರ ಸಿನಿಮಾ ಪ್ರದರ್ಶನ ಆಯೋಜಿಸಲು ತೀರ್ಮಾನಿಸಲಾಗಿದೆ.

ತುಳು ಸಂಸ್ಕೃತಿಯಲ್ಲಿ ನಾಗಾರಾಧನೆ, ಭೂತಾರಾಧನೆ, ಯಕ್ಷಗಾನಗಳು ಗಮನ ಸೆಳೆಯುತ್ತವೆ. ದೈವಗಳ ಹುಟ್ಟು, ಸಾಧನೆ ಮತ್ತು ಸಾವಿಗೆ ಸಂಬಂಧಿಸಿದ ಕಥನಗಳನ್ನು ಪಾಡ್ಡನಗಳೆಂದು ಕರೆಯುತ್ತಾರೆ. ಪಾಡ್ದನಗಳು ತುಳುವಿನ ಅತ್ಯಂತ ಶ್ರೀಮಂತವಾದ ಮೌಖಿಕ ಮಹಾಕಾವ್ಯಗಳು ಎಂಬುದು ನೆನೆಯಬಹುದು. ಕಾಂತಾರ ಸಿನಿಮಾ ಈ ಆಧಾರದಲ್ಲಿ ಒಂದು ಭಾಗವಾಗಿ ಕಾಣಬಹುದಾಗಿದೆ ಎಂದಿದ್ದಾರೆ ನಿರ್ದೇಶಕ.

More News