ED Raids in Bengaluru: ಚೀನಾ ಮೂಲದ ಲೋನ್‌ ಕಂಪನಿಗಳ ಮೇಲೆ ಇಡಿ ದಾಳಿ: 78 ಕೋಟಿ ರೂ. ವಶ

ಬೆಂಗಳೂರು: ಚೀನಾ ಮೂಲದ ಲೋನ್‌ ಕಂಪನಿಗಳು ಭಾರತೀಯ ಗ್ರಾಹಕರನ್ನು ವಂಚಿಸಿ, ಶೋಷಣೆ ಮಾಡುತ್ತಿರುವ ವಿಚಾರ ಈಗಾಗಲೇ ಬಹಿರಂಗವಾಗಿರುವಂಥದ್ದು. ಈಗಾಗಲೇ ಚೀನಾ ಮೂಲದ ಲೋನ್‌ ಆಪ್‌ಗಳಿಗೆ ಕಡಿವಾಣ ಹಾಕುವ ಸಲುವಾಗಿ ಕೇಂದ್ರ ಸರ್ಕಾರ ಕ್ರಮ ತೆಗೆದುಕೊಂಡಿದೆ.

ಇದರ ಮುಂದುವರಿದ ಭಾಗವಾಗಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ತಂಡ ಬೆಂಗಳೂರು ಮಹಾನಗರದ ಐದು ಕಡೆ ಅಕ್ಟೋಬರ್‌ 19ರಂದು ದಾಳಿ ನಡೆಸಿತ್ತು. ದಾಳಿ ವೇಳೆ ಸಿಕ್ಕಿದ 78 ಕೋಟಿ ರೂಪಾಯಿ ವಶಪಡಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.

ದೋಚಿದ ಹಣವನ್ನು ಚೀನಾಕ್ಕೆ ವರ್ಗಾವಣೆ ಮಾಡುತ್ತಿದ್ದ ಕಂಪನಿಗಳು

ಕ್ಷಿಪ್ರ ಸಾಲ ನೀಡಿಕೆ ಆಪ್‌ ಮೂಲಕ ಭಾರತೀಯರಿಗೆ ಸಾಲ ನೀಡಿ ಬಳಿಕ, ಅಧಿಕ ಬಡ್ಡಿ ವಸೂಲಿ ಮಾಡುವ ದಂಧೆ ಇದಾಗಿದ್ದು, ಸಾಕಷ್ಟು ದೂರುಗಳು ದಾಖಲಾಗಿದ್ದವು. ಈ ರೀತಿ ದೋಚಿದ ಹಣವನ್ನು ಈ ಕಂಪನಿಗಳು ಚೀನಾಕ್ಕೆ ವರ್ಗಾವಣೆ ಮಾಡುತ್ತಿದ್ದವು ಎಂಬ ಮಾಹಿತಿ ಬಹಿರಂಗವಾಗಿತ್ತು.

ಸಿಐಡಿ ಸೈಬರ್ ಕ್ರೈಂ ವಿಭಾಗದಲ್ಲಿ ಈ ದಂಧೆಗೆ ಸಂಬಂಧಿಸಿ 18 FIR ದಾಖಲು

ಸಿಐಡಿ ಸೈಬರ್ ಕ್ರೈಂ ವಿಭಾಗದಲ್ಲಿ ಈ ದಂಧೆಗೆ ಸಂಬಂಧಿಸಿ 18 FIR ದಾಖಲಾಗಿದ್ದವು. ಕೇಸ್ ಆಧಾರದ ಮೇಲೆ ತನಿಖೆ ನಡೆಸಿದಾಗ ಎಲ್ಲಾ ಲೋನ್ ಆ್ಯಪ್ ಗಳ ಮೂಲ ಚೀನಾವೆಂದು ಪತ್ತೆಯಾಗಿತ್ತು. ಭಾರತೀಯ ಮೂಲದ ಉದ್ಯೋಗಿಗಳನ್ನೇ ಕಂಪನಿ ನಿರ್ದೇಶಕರನ್ನಾಗಿ ನೇಮಿಸಲಾಗಿತ್ತು. ಕ್ಷಿಪ್ರವಾಗಿ ಯಾವುದೇ ಹೆಚ್ಚಿನ ದಾಖಲೆಗಳು ಇಲ್ಲದೆ, ಕಡಿಮೆ ಸಾಲ ನೀಡಿ‌ ಅಧಿಕ ಬಡ್ಡಿ ವಸೂಲಿ ಮಾಡುವ ದಂಧೆ ಇದು. ವಸೂಲಿಯಾದ ಹಣವನ್ನ ಅಕ್ರಮವಾಗಿ ವಿದೇಶಿ ಖಾತೆಗಳಿಗೆ ವಿಶೇಷವಾಗಿ ಚೀನಾಕ್ಕೆ ವರ್ಗಾಯಿಸಲಾಗುತ್ತಿತ್ತು ಎಂಬ ಅಂಶ ಬಂಧಿತರಿಂದ ಬಹಿರಂಗವಾಗಿದೆ.

ಒಬ್ಬ ಚೈನೀಸ್ ಮತ್ತು ತೈವಾನ್ ಪ್ರಜೆ ಸೇರಿ ಹತ್ತು ಜನರ ಬಂಧನ

ಈಗ್ಗೆ ಒಂದು ವಾರದ ಹಿಂದೆ ಭಾರತ, ಚೀನಾ, ತೈವಾನ್, ಕಾಂಬೋಡಿಯಾ ಮತ್ತು ಯುಎಇಯಲ್ಲಿ 903 ಕೋಟಿ ರೂಪಾಯಿ ಮೊತ್ತದ ಚೀನಾ ಹೂಡಿಕೆ ವಂಚನೆಯನ್ನು ಹೈದರಾಬಾದ್ ಪೊಲೀಸರು ಭೇದಿಸಿದ್ದರು. ಒಬ್ಬ ಚೈನೀಸ್ ಮತ್ತು ತೈವಾನ್ ಪ್ರಜೆ ಸೇರಿ ಹತ್ತು ಜನರನ್ನು ಬಂಧಿಸಲಾಗಿತ್ತು.

More News

You cannot copy content of this page