ಬೆಂಗಳೂರು : ದೇಶದಲ್ಲಿ ಖಿನ್ನತೆ, ಹೈಪರ್ ಟೆನ್ಷನ್‌ಗೆ ಒಳಗಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಭಾರತ ಸಕ್ಕರೆ ಕಾಯಿಲೆಯಲ್ಲಿ ವಿಶ್ವಕ್ಕೆ ರಾಜಧಾನಿ ಯಾಗುತ್ತಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ
ಕೆ. ಸುಧಾಕರ್ ಕಳವಳ ವ್ಯಕ್ತಪಡಿಸಿದ್ದಾರೆ.
” ಬೆಂಗಳೂರು ಸ್ಟ್ರೋಕ್ ನರ್ಸಿಂಗ್ ಕಾನ್ ಕ್ಲೈವ್ 2022″

ವರ್ಲ್ಡ್ ಸ್ಟ್ರೋಕ್ ಡೇ ಅಂಗವಾಗಿ ಬೆಂಗಳೂರು ಮೆಡಿಕಲ್ ಕಾಲೇಜ್ ಸಭಾಂಗಣದಲ್ಲಿ ” ಬೆಂಗಳೂರು ಸ್ಟ್ರೋಕ್ ನರ್ಸಿಂಗ್ ಕಾನ್ ಕ್ಲೈವ್ 2022″ ಉದ್ಘಾಟಿಸಿ ಮಾತನಾಡಿದ ಸಚಿವ ಸುಧಾಕರ್, ಶೇ 70ರಷ್ಟು ಪ್ರಕರಣಗಳು ಬಡತನ ರೇಖೆಗಿಂತ ಕೆಳಗಡೆ, ಮಧ್ಯಮ ವರ್ಗದವರಲ್ಲಿ ಅಧಿಕ ರಕ್ತದೊತ್ತಡ ಕಾಣಿಸಿಕೊಳ್ಳುತ್ತಿದೆ.ಅಕ್ಟೋಬರ್ 29 ರಂದು ವಿಶ್ವ ಸ್ಟ್ರೋಕ್ ದಿನವನ್ನಾಚರಿಸಲಾಗುತ್ತಿದೆ. ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಈ ಸಮಸ್ಯೆ ಪರಿಹಾರ ಕಂಡುಕೊಳ್ಳುವ ಪ್ರಯತ್ನಗಳು ಸತತವಾಗಿ ನಡೆಯುತ್ತಿವೆ. ಅಚ್ಚರಿ ಅಂದರೆ ಸಾಂಕ್ರಾಮಿಕ ರೋಗಗಳಿಂದ ಉಂಟಾಗುವ ಸಾವಿಗಿಗಿಂತ ಸಕ್ಕರೆ ಕಾಯಿಲೆ, ಅಧಿಕ ರಕ್ತದೊತ್ತಡ ಸೇರಿದಂತೆ ಇತರೆ ಅಸಾಂಕ್ರಮಿಕ ರೋಗಗಳಿಂದ ಉಂಟಾಗುತ್ತಿರುವ ಸಾವು ಹೆಚ್ಚಾಗುತ್ತಿದೆ. ಇದನ್ನು ನಿಯಂತ್ರಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಾಕಷ್ಟು ಕ್ರಮಗಳನ್ನು ಕೈಗೊಂಡಿವೆ. ರೋಗ ಬಂದ ಮೇಲೆ ಚಿಕಿತ್ಸೆ ನೀಡುವುದಕ್ಕಿಂತ ರೋಗ ಬಾರದೆ ಇರುವ ಹಾಗೇ ನೋಡಿಕೊಳ್ಳುವುದೇ ಉತ್ತಮ.

ಎಷ್ಟು ರಕ್ತದೊತ್ತಡ ಕಡಿಮೆ ಮಾಡುತ್ತೇವೆಯೋ ಅಷ್ಟು ಸ್ಟ್ರೋಕ್‌ಗೆ ಒಳಗಾಗುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಸ್ಸ್ಟ್ರೋಕ್‌ಗೆ ಮೊದಲ ಕಾರಣವೇ ಹೈಪರ್ ಟೆನ್ಷನ್ ಆಗಿದೆ. ಜೀವನ ಶೈಲಿ, ಆಹಾರ ಪದ್ಧತಿ, ದೈಹಿಕ, ಮಾನಸಿಕ ಹಾಗೂ ಸಾಮಾಜಿಕವಾಗಿ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಮೂಲಕ ಸ್ಟ್ರೋಕ್‌ಗೆ ಒಳಗಾಗುವುದನ್ನು ತಪ್ಪಿಸಬಹುದು ಎಂದು ತಿಳಿಸಿದರು.

ಮುಂದುವರೆದು ಮಾತನಾಡಿದ ಅವರು, ಬಡತನ ರೇಖೆಗಿಂತ ಕೆಳಗಿರುವ, ಕಡಿಮೆ ಶಿಕ್ಷಣ ಹೊಂದಿರುವ, ಆರೋಗ್ಯ ಕ್ಷೇತ್ರದ ಬಗ್ಗೆ ಹೆಚ್ಚು ತಿಳುವಳಿಕೆ ಹೊಂದಿರದ ಗ್ರಾಮೀಣ ಜನರಿಗೆ ಆರೋಗ್ಯದ ಮಹತ್ವವನ್ನು ತಿಳಿ ಹೇಳುವುದು ದಾದಿಯರ ಪಾಲಿನ ಅತಿದೊಡ್ಡ ಕೆಲಸವಾಗಿದೆ. ಸ್ಟ್ರೋಕ್ ರೋಗಿಗೆ ವೈದ್ಯರು ಚಿಕಿತ್ಸೆ ಮಾತ್ರ ನೀಡುತ್ತಾರೆ. ಆದರೆ ಉಳಿದ ಕೆಲಸಗಳನ್ನು ಆರೈಕೆ ಮೂಲಕವೇ ಮಾಡುತ್ತಾರೆ. ಸರಿಯಾದ ಆರೈಕೆ, ಕಾಯಿಲೆ ಬಗ್ಗೆ ತಿಳಿ ಹೇಳುವುದು ಮತ್ತು ರೋಗಿಗೆ ಆತ್ಮವಿಶ್ವಾಸ ತುಂಬುವುದು ದಾದಿಯರ ಮೊದಲ ಕೆಲಸವಾಗಿದೆ. ಇದರಿಂದಲೇ ಚಿಕಿತ್ಸೆ ಪಡೆಯುತ್ತಿರುವವರಿ ಗುಣಮುಖರಾಗಲು ಸಾಧ್ಯ ಎಂದು ಹೇಳಿದರು.




