KGF BABU: ಪಕ್ಷ ಸೇರಲು ಕಾಂಗ್ರೆಸ್ ಮುಖಂಡ ಕೆಜಿಎಫ್ ಬಾಬುಗೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಆಹ್ವಾನ: ಯೋಚಿಸಿ ನಿರ್ಧಾರ ಎಂದ ಕೋಟಿ ಒಡೆಯ

ಬೆಂಗಳೂರು : ಕಾಂಗ್ರೆಸ್ ಮುಖಂಡ ಕೆಜಿಎಫ್ ಬಾಬು ಅವರನ್ನು ತಮ್ಮ ಜೆಡಿಎಸ್ ಪಕ್ಷಕ್ಕೆ ಆಹ್ವಾನ ನೀಡಲಾಗಿದೆ. ಇವರ ಪಕ್ಷ ಸೇರ್ಪಡೆ ವಿಚಾರವಾಗಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಹಾಗೂ ಹೆಚ್ ಡಿ ಕುಮಾರಸ್ವಾಮಿ ಜತೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿರುವ ಕೆಜಿಎಫ್ ಬಾಬು ಅವರ ನಿವಾಸಕ್ಕೆ ತೆರಳಿ ಸುದೀರ್ಘವಾಗಿ ಮಾತುಕತೆ ನಡೆಸಿದ ನಂತರ ಜಂಟಿ ಸುದ್ದಿಗೋಷ್ಠಿಯಲ್ಲಿ ಈ ವಿಚಾರ ತಿಳಿಸಿದ ಅವರು, ಕೆಜಿಎಫ್ ಬಾಬು ಅವರಿಗೆ ಚಿಕ್ಕಪೇಟೆಯಿಂದಲೇ ಟಿಕೇಟ್ ನೀಡುವ ಕುರಿತು ಹಿರಿಯ ನಾಯಕರು ನಿರ್ಧಾರ ಕೈಗೊಳ್ಳಲಿದ್ದಾರೆ ಎಂದರು.

ದೀಪಾವಳಿ ಹಬ್ಬ ಆರಂಭಕ್ಕೂ ಮುನ್ನ ಲಕ್ಷ್ಮೀ ಪುತ್ರರ ಭೇಟಿ ಆಗಿದೆ, ಕೆಜಿಎಫ್ ಬಾಬು ನಮ್ರತೆ, ವಿಧೇಯತೆ ಇರುವ ವ್ಯಕ್ತಿ, ಜನ ಸೇವೆ ಮಾಡಲು ಅವರಿಗೆ ಸೂಕ್ತ ಮಾರ್ಗದರ್ಶನ ಬೇಕಾಗಿದೆ, ಜೆಡಿಎಸ್ ಪಕ್ಷ ಅಂತವರಿಗೆ ಮೇಲೆತ್ತಲು ಸಿದ್ದವಿದೆ ಎಂದು ಸಿ ಎಂ ಇಬ್ರಾಹಿಂ ತಿಳಿಸಿದರು.
ಹಣ ಮಾಡಲು ರಾಜಕೀಯಕ್ಕೆ ಬರುತ್ತಾರೆ ಆದರೆ ಬಾಬು ಜನ ಸೇವೆಗೆ ಬಂದಿದ್ದಾರೆ, ಪಕ್ಷಕ್ಕೆ ಬನ್ನಿ ಎಂದು ಆಹ್ವಾನ ನೀಡಲಾಗಿದೆ. ಜೆಡಿಎಸ್ ಹಿಂದೂ ಹಾಗೂ ಮುಸ್ಲಿಂ ಪಕ್ಷ ಅಲ್ಲ, ಸರ್ವ ಜನಾಂಗದ ಶಾಂತಿಯ ತೋಟ, ಕನ್ನಡ ತಾಯಿಯ ಮಡಿಲಲ್ಲಿ ಇಂತಹ ಮಕ್ಕಳು ಹುಟ್ಟಿರೋದು ಪುಣ್ಯ ಎಂದು ಕೆಜಿಎಫ್ ಬಾಬು ಅವರ ಗುಣಗಾನ ಮಾಡಿದರು.

ಮಾರ್ಕೆಟ್ ನಲ್ಲಿ ಒಳ್ಳೆಯ ವಸ್ತು ಇದ್ರೆ ಖರೀದಿಸಲು ಎಲ್ಲರೂ ಬರುತ್ತಾರೆ ಎಂದು ಮಾರ್ಮಿಕವಾಗಿ ಉತ್ತರಿಸಿದ ಅವರು, ಚಿಕ್ಕಪೇಟೆ ಟಿಕೆಟ್ ನೀಡುವ ವಿಚಾರದಲ್ಲಿ ಸ್ಪಷ್ಟ ಮಾಹಿತಿ ನೀಡಲಿಲ್ಲ. ಬಾಬು ಅಂತವರಿಗೆ ಟಿಕೆಟ್ ಕೊಡದೇ ಇನ್ಯಾರಿಗೆ ಟಿಕೆಟ್ ನೀಡಲು ಸಾಧ್ಯ ಎಂದು ತಿಳಿಸಿದರು.
ನಂತರ ಮಾತನಾಡಿದ ಕೆಜಿಎಫ್ ಬಾಬು, ನಾನು ಯೋಚನೆ ಮಾಡಿ ಹೇಳುತ್ತೇನೆ ಎಂದು ತಿಳಿಸಿರುವುದಾಗಿ ಹೇಳಿದ ಅವರು, ಜೆಡಿಎಸ್ ಸೇರ್ಪಡೆಗೆ ಸಮಯ ಕೇಳಿದ್ದೇನೆ, ನನಗೆ ಎಲ್ಲಾ ಪಕ್ಷಗಳಿಂದಲೂ ಟಿಕೆಟ್ ಸಿಗಲಿದೆ, ನಾನು ಹುಟ್ಟಿದ ಕ್ಷೇತ್ರದಲ್ಲಿ ಬಡತನ ಇದೆ, ಆರ್ ವಿ ದೇವರಾಜ್ ಕಲಾಸಿಪಾಳ್ಯ ಪೊಲಿಸ್ ಸ್ಟೇಷನ್ ನಲ್ಲಿ ದೂರು ನೀಡಿದ್ದಾರೆ, ಗುಂಡಾಗಳನ್ನೂ ದೇವರಾಜ್ ಬಿಟ್ಟಿದ್ದಾರೆ, ನಾನು ಚಿಕ್ಕಪೇಟೆಯಲ್ಲಿ ಸ್ಪರ್ಧೆ ಮಾಡ್ತಿನಿ ಎಂದು ಹೋಗಿಲ್ಲ, ಸಹಾಯ ಮಾಡಲು ಹೋಗಿದ್ದೇನೆ, ಚಿಕ್ಕಪೇಟೆ ಋಣ ತೀರಿಸಲು ಹೋಗಿದ್ದೇನೆ ಎಂದು ಹೇಳಿದರು.
ಇದೇ ವೇಳೆ ನಾನು 350 ಕೋಟಿ ಚಿಕ್ಕಪೇಟೆಗೆ ಕೊಡೋದು ಸತ್ಯ, ಅಲ್ಲಿಯ ಬಡ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡೋದೂ ಸತ್ಯ ಎಂದು ಕೆಜಿಎಫ್ ಬಾಬು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.

#KGF BABU #CM IBRAHIM #JDS STATE PRESIDENT #CHICKPET ASSEMBLY CONSTITUENCY #CONGRESS LEADER

More News