ಚಾಮರಾಜನಗರ: ದಲಿತ ವಿಧವೆಯ ಕೆನ್ನೆಗೆ ಬಾರಿಸಿದ ಸಚಿವ ವಿ.ಸೋಮಣ್ಣ ಅವರನ್ನು ಸಂಪುಟದಿಂದ ವಜಾಗೊಳಿಸಬೇಕೆಂಬ ಕೂಗು ಎಲ್ಲೆಡೆ ಕೇಳಿಬರುತ್ತಿದೆ. ಸಮಸ್ಯೆ ಹೇಳಲು ಬಂದ ಮಹಿಳೆ ಕೆನ್ನೆಗೆ ಬಾರಿಸಿದ್ದು ಅಕ್ಷ್ಯಮ್ಯ ಅಪರಾಧ ತಕ್ಷಣ ಅವರನ್ನು ಸಂಪುಟದಿಂದ ವಜಾಗೊಳಿಸಿ ಹಾಗೆಯೇ ಪ್ರಧಾನಿ ನರೇಂದ್ರ ಮೋದಿ ಅವರು ಸೋಮಣ್ಣನ ವಿರುದ್ಧ ಕ್ರಮಕ್ಕೆ ಸೂಚಿಸಬೇಕೆಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲ ಆಗ್ರಹಿಸಿದ್ದಾರೆ.
ಚಾಮರಾಜನಗರ ಜಿಲ್ಲೆಯ ಹಂಗಳ ಗ್ರಾಮದಲ್ಲಿ ಹಕ್ಕುಪತ್ರ ವಿತರಣೆ ಸಂದರ್ಭದಲ್ಲಿ ಸಚಿವ ವಿ ಸೋಮಣ್ಣ ಮಹಿಳೆಗೆ ಕಪಾಳಮೋಕ್ಷ ಮಾಡಿರುವುದು ತಪ್ಪು ಎಂಬ ಕೂಗು ರಾಜ್ಯದ ಎಲ್ಲಾ ಕಡೆಯಿಂದಲೂ ಕೇಳಿಬರುತ್ತಿದೆ. ಇನ್ನೊಂದೆಡೆ ಈ ಘಟನೆ ಸಂಬಂಧ ವಿ ಸೋಮಣ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಕ್ಷಮೆಯಾಚಿಸಿದ ಸಚಿವ ಸೋಮಣ್ಣ
ನನ್ನ 45 ವರ್ಷ ರಾಜಕೀಯ ಜೀವನದಲ್ಲಿ ಹಲವು ಏಳುಬೀಳು ಕಂಡಿದ್ದೇನೆ. ಇದುವರೆಗೂ ನಾನು ಯಾರಿಗೂ ಅಪಚಾರ ಮಾಡಿಲ್ಲ. ಪ್ರಾಯಶಃ ಯಾರಿಗಾದರು ಈ ಘಟನೆಯಿಂದ ಮನಸ್ಸಿಗೆ ನೋವಾಗಿದ್ದಾರೆ ಕ್ಷಮೆ ಯಾಚಿಸುತ್ತೇನೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು.
ಹಂಗಳದ ಘಟನೆ ಘಟನೆಯೇ ಅಲ್ಲ ಎಂದ ಸೋಮಣ್ಣ
ಹೆಣ್ಣು ಮಗಳು ಪದೇಪದೇ ವೇದಿಕೆ ಮೇಲೆ ಬರುತ್ತಿದ್ದಳು. ತಾಯಿ ಎಷ್ಟು ಸಾರಿ ಬರ್ತೀಯ ಎಂದು ವಿಚಾರಿಸಿದೆ, ನಿನ್ನ ಸಮಸ್ಯೆ ಬಗೆಹರಿಸುತ್ತೇನೆ ಎಂದು ಕೈಯಲ್ಲಿ ಪಕ್ಕಕ್ಕೆ ಸರಿಸಿದ್ದೇನೆ. ಅಷ್ಟೇ ಬಿಟ್ಟರೆ ಇನ್ನೇನು ಉದ್ದೇಶ ಇರಲಿಲ್ಲ ಎಂದು ಸಮಜಾಯಿಸಿ ನೀಡಿದ್ದಾರೆ.

ಆದರೆ, ಅವರು ಹೊಡೆದ ದೃಶ್ಯ ಎಲ್ಲಾ ವಿಡಿಯೋ ಮಾತ್ರ ಸುಳ್ಳು ಹೇಳಲ್ಲ. ಅದು ಅವರು ಸಿಟ್ಟಿನಿಂದ ಆಕೆಗೆ ಹೊಡೆದಿದ್ದು ಅಷ್ಟೇ ಸ್ಪಷ್ಟವಾಗಿದೆ. ಆದರೆ ಅವರ ಈ ಸಮಜಾಯಿಸಿ ಮಾತ್ರ ನೆಪ ಮಾತ್ರಕ್ಕಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ಹೆಣ್ಣು ಮಕ್ಕಳ ಬಗ್ಗೆ ನನಗೆ ಅಪಾರವಾದ ಗೌರವ, ಮಮಕಾರ ಇದೆ. ನಾನು ಪ್ರತಿಯೊಬ್ಬರನ್ನು ಅಮ್ಮ, ತಾಯಿ ಎಂದೇ ಕರೆಯುತ್ತೇನೆ. ಆ ಹೆಣ್ಣು ಮಗಳಿಗೆ ಸಹ ಹಕ್ಕು ಪತ್ರ ಕೊಡಿಸಿದ್ದೇನೆ. ಯಾರಿಗಾದರೂ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಅವರು ಹೇಳಿದ್ದಾರೆ.




