ಬೆಂಗಳೂರು : ಬೆಳಕಿನ ಹಬ್ಬದಂದೇ ಸೂರ್ಯನಿಗೆ ಕತ್ತಲು ಆವರಿಸುತ್ತಿದೆ. ದೀಪಾವಳಿ ಹಬ್ಬದಂದೇ ಸಂಭವಿಸುವ ಸೂರ್ಯಗ್ರಹಣ ವೀಕ್ಷಿಸಲು ಜನ ಕಾತುರದಿಂದ ಕಾಯುತ್ತಿದ್ದಾರೆ. ಆಶ್ವಯುಜ ಮಾಸದ ಅಂತ್ಯದಲ್ಲಿ ಬರುವ ಅಮಾವಾಸ್ಯೆ ಚಂದ್ರ ಅಕ್ಟೋಬರ್ 25ರಂದು ವರ್ಷದ 2ನೇ ಸೂರ್ಯಗ್ರಹಣವಾಗಿದೆ.
ಪ್ರತಿ ಅಮವಾಸ್ಯೆಯ ದಿನ ಚಂದ್ರನು ಭೂಮಿ ಮತ್ತು ಸೂರ್ಯನ ಮಧ್ಯೆ ಹಾದು ಹೋಗುವಾಗ, ಈ ಮೂರು ಆಕಾಶಕಾಯಗಳು ಒಂದು ಸರಳರೇಖೆಯಲ್ಲಿರುವುದಿಲ್ಲ. ಚಂದ್ರನ ಭೂಮಿಯ ಸುತ್ತ ಸುತ್ತುವ ಚಲನೆಯ ಸಮತಲ ಹಾಗೂ ಸೂರ್ಯನ ಸಮತಲಗಳ ನಡುವಿನಲ್ಲಿ 5 ಡಿಗ್ರಿಗಳ ಅಂತರವಿರುವುದರಿಂದ ಪ್ರತಿ ಅಮಾವಾಸ್ಯೆಗೆ ಗ್ರಹಣ ಸಂಭಸುವುದಿಲ್ಲ. ಚಂದ್ರನು ರಾಹು ಅಥವಾ ಕೇತು ಬಿಂದುವಿನಲ್ಲಿ ಬಂದಾಗ ಮಾತ್ರ ಸೂರ್ಯಗ್ರಹಣ ಸಂಭವಿಸುತ್ತದೆ.

ಸೂರ್ಯನಿಗೆ ಚಂದ್ರ ಅಡ್ಡ ಸಂದರ್ಭದಲ್ಲಿ ಸೂರ್ಯನ ಒಂದು ಭಾಗ ಅಷ್ಟೇ ಕಾಣಿಸಿದರೆ ಅದು ಪಾರ್ಶ್ವ ಸೂರ್ಯಗ್ರಹಣ ಆಗಲಿದೆ. ಅದೇ ರೀತಿ ಚಂದ್ರನು ಸೂರ್ಯನನ್ನು ಸಂಪೂರ್ಣವಾಗಿ ಆವರಿಸಿದರೆ ಅದು ಖಗ್ರಾಸ ಸೂರ್ಯಗ್ರಹಣ. ಅ.25ರ ಸೂರ್ಯಗ್ರಹಣವು ಗೋಚರಿಸುವ ಎಲ್ಲ ಪ್ರದೇಶಗಳಲ್ಲಿ ಪಾರ್ಶ್ವ ಸೂರ್ಯ ಗ್ರಹಣವಾಗಿರುತ್ತದೆ. ಪ್ರತಿ ಸೂರ್ಯಗ್ರಹಣದ ಮೊದಲು ಅಥವಾ ನಂತರ ಬರುವ ಹುಣ್ಣಿಮೆಯ ದಿನ ಚಂದ್ರಗ್ರಹಣ ಸಂಭವಿಸುತ್ತದೆ. ಈ ಬಾರಿ ಕೂಡ ನವೆಂಬರ್ 8ರಂದು ಚಂದ್ರಗ್ರಹಣವನ್ನು ನೋಡಬಹುದು.
ಎಲ್ಲೆಲ್ಲಿ ಗ್ರಹಣ..?
ಭಾರತದ ಎಲ್ಲ ಕಡೆಗಳಲ್ಲಿ ಕಾಣಬಹುದು. ಅಲ್ಲದೆ, ಯೂರೋಪ್ ಮತ್ತು ಏಷ್ಯಾದ ಮಧ್ಯಭಾಗದ ವಿವಿಧ ದೇಶಗಳಲ್ಲಿ ಗೋಚರಿಸುತ್ತದೆ. ರಷ್ಯಾದಲ್ಲಿ ಕಾಣಿಸುವಾಗ ಚಂದ್ರನು ಸುಮಾರು ಶೇ.82ರಷ್ಟನ್ನು ಆವರಿಸಿಕೊಂಡಿರುತ್ತಾನೆ. ಭಾರತದಲ್ಲಿ ಈ ಗ್ರಹಣವು ಉತ್ತರದ ಲೇಕ್ನಲ್ಲಿ ಶೇ.54ರಷ್ಟು ಹಾಗೂ ದೆಹಲಿಯಲ್ಲಿ ಶೇ.44ರಷ್ಟು ಸೂರ್ಯನನ್ನು ಆವರಿಸಿರುವುದು ಕಂಡು ಬರುತ್ತದೆ.
ಕರ್ನಾಟಕದಲ್ಲಿ ಎಲ್ಲೆಲ್ಲಿ ನೋಡಬಹುದು..?
ರಾಜ್ಯದ ಎಲ್ಲ ಭಾಗಗಳಲ್ಲಿ ನೋಡಬಹುದು. ಸಂಜೆ 5 ರಿಂದ 6 ಗಂಟೆಗೆ ನಡೆಯಲಿರುವ ಸೂರ್ಯಾಸ್ತದವರೆಗೂ ಗೋಚರಿಸುತ್ತದೆ. ಪಶ್ಚಿಮ ಮತ್ತು ನೈಋತ್ಯದ ಕಡೆ ಕ್ಷಿತಿಜವು ಗ್ರಹಣ ವೀಕ್ಷಿಸಲು ಉತ್ತಮ ಸ್ಥಳವಾಗಿರುತ್ತದೆ. ಸಮುದ್ರ ತೀರದಲ್ಲಿ ಗ್ರಹಣ ಬಹಳ ಚೆನ್ನಾಗಿ ಕಾಣುತ್ತದೆ. ಬೆಂಗಳೂರಿನಲ್ಲಿ ಈ ಗ್ರಹಣ ಶೇ.10 ರಷ್ಟು ಮಾತ್ರ ಕಂಡುಬರುತ್ತದೆ.
ಹುಷಾರ್.. ಬರಿಗಣ್ಣಿನಿಂದ ಗ್ರಹಣ ನೋಡಬೇಡಿ
ಗ್ರಹಣ ಸಂಭವಿಸುವ ಸಂದರ್ಭದಲ್ಲಿ ಯಾರೂ ಬರಿಗಣ್ಣಿನಿಂದ ನೋಡಬಾರದು. ಟೆಲಿಸ್ಕೋಪ್, ದುರ್ಬೀನ್, ಕ್ಯಾಮೆರಾಗಳಿಂದ ಕೂಡ ಸೂರ್ಯಗ್ರಹಣವನ್ನು ನೋಡುವುದು ಹಾನಿಕಾರಕ.

ಸೂರ್ಯಗ್ರಹಣವನ್ನು ಯಾವಾಗಲೂ ವಿಶೇಷವಾದ ಗ್ರಹಣ ವೀಕ್ಷಣಾ ಕನ್ನಡಕಗಳಿಂದ ಮಾತ್ರ ನೋಡಬೇಕು ಎಂದು ವಿಜ್ಞಾನಿಗಳು ಹೇಳಿದ್ದಾರೆ.
#SOLAR ECLIPSE #DONT DEE NAKED EYES #SCIENTISTS #FULL DARK DAY