ಭಾರತದ ಕ್ರಿಕೆಟ್ ದಂತಕಥೆ, ಭಾರತದ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್.ಧೋನಿ ಕ್ರಿಕೆಟ್ ನಲ್ಲಿ ಇಡೀ ವಿಶ್ವವೇ ಭಾರತದತ್ತ ನೋಡುವಂತೆ ಮಾಡುವಲ್ಲಿ ಪ್ರಮುಖ ಪಾತ್ರವಹಿಸದವರು. ಇದೀಗ ಕ್ರೀಡೆಯಿಂದ ಸಿನಿಮಾ ರಂಗದ ಕಡೆಗೆ ಹೆಜ್ಜೆಯಿಟ್ಟಿರುವ ಅವರು, ತಮ್ಮ ನಿರ್ಮಾಣ ಸಂಸ್ಥೆ ವತಿಯಿಂದ ತಮಿಳಿನಲ್ಲಿ ಮೊದಲ ಸಿನಿಮಾ ನಿರ್ಮಿಸುವುದಾಗಿ ಘೋಷಣೆ ಮಾಡಿದ್ದಾರೆ.
ದಾಖಲೆ ಮಾಡುವ ಆಟಗಾರರ ಕೊರತೆಯನ್ನು ಕ್ರಿಕೆಟ್ ಎಂದಿಗೂ ಕಂಡಿಲ್ಲ. ದಾಖಲೆಯ ಆಟಗಾರರು ಪಂದ್ಯದುದ್ದಕ್ಕೂ ಪ್ರೇಕ್ಷಕರನ್ನು ರಂಜಿಸುವ ಸಾಮರ್ಥ್ಯವನ್ನು ಪಡೆದುಕೊಂಡಿದ್ದರು. ಅದಾಗ್ಯೂ ಕ್ರಿಕೆಟ್ ತಂಡದಲ್ಲಿ ಲೆಜೆಂಡ್‌ಗಳು ಎಂದು ಕರೆಯಿಸಿಕೊಳ್ಳುವ ಆಟಗಾರರು ಬಹಳ ಕಡಿಮೆ. ಆದರೆ ಈ ಲೆಜೆಂಡ್‌ಗಳನ್ನು ಮೀರಿಸಿ ಕ್ರಿಕೆಟ್ ಆಟದ ಕಾರ್ಯವೈಖರಿಯನ್ನು ಬದಲಿಸಿದವರಲ್ಲಿ ಜಾರ್ಖಂಡ್ ಮೂಲದ ಎಂ ಎಸ್ ಧೋನಿ ಸಹ ಒಬ್ಬರು.

ಆದರೆ, ಲಾಸ್ಟ್ ಬಾಲ್ ಫಿನಿಶರ್ ಎಂಬ ಖ್ಯಾತಿಗೆ ಭಾಜನರಾಗಿದ್ದ ಧೋನಿ, ಭಾರತದ 74 ನೇ ಸ್ವಾತಂತ್ರ್ಯ ದಿನಾಚರಣೆಯ ರಾತ್ರಿ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದರು.
ಅನಂತರ ದಿನಗಳಲ್ಲಿ ಕೇವಲ ಐಪಿಎಲ್ ನಲ್ಲಿ ಕಾಣಿಸಿಕೊಂಡ ಧೋನಿಯು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸುತ್ತಿದ್ದರು. ತಮಿಳುನಾಡಿನ ಜೊತೆಗಿನ ಸಂಬಂಧ ಹಿನ್ನೆಲೆಯಲ್ಲಿ ಅವರೇ ಮಾಡಿಕೊಂಡಿರುವ ಚಿತ್ರ ನಿರ್ಮಾಣ ಸಂಸ್ಥೆ ವತಿಯಿಂದ ತಮಿಳಿನಲ್ಲಿ ಸಿನಿಮಾ ಮಾಡಲು ತಯಾರಿ ನಡೆಸಿದ್ದಾರೆ.

ಧೋನಿ ಹಾಗೂ ಅವರ ಪತ್ನಿ ಸಾಕ್ಷಿ ಸಿಂಗ್ ಒಟ್ಟಾಗಿ 2019ರಲ್ಲಿ ಧೋನಿ ಎಂಟರ್‌ಟೈನ್‌ಮೆಂಟ್ ಸಂಸ್ಥೆಗೆ ಚಾಲನೆ ನೀಡಿದ್ದರು. ಮುಖ್ಯವಾಹಿನಿಯ ಭಾಷೆಗಳಲ್ಲಿ ಮನರಂಜನಾ ಕಾರ್ಯಕ್ರಮಗಳನ್ನು ನಿರ್ಮಿಸುತ್ತಿದ್ದು, ನಿರ್ಮಾಣ ಪ್ರಕ್ರಿಯೆ ವಿವಿಧ ಹಂತಗಳಲ್ಲಿದೆ ಎಂದು ಕಂಪನಿ ಹೇಳಿದೆ.
ಕೋವಿಡ್ ಬಳಿಕ ದೇಶದಲ್ಲಿ ಸಿನಿಮಾ ರಂಗ ಸಾಕಷ್ಟು ಚೇತರಿಸಿಕೊಂಡಿದೆ. ಹಿಂದಿ ಸಿನಿಮಾ, ಇತರ ಭಾಷೆ ಸಿನಿಮಾ ಎಂಬ ಪ್ರತ್ಯೇಕತೆ ಇಲ್ಲ. ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಸಿನಿಮಾಗಳನ್ನು ದೇಶದಾದ್ಯಂತ ಸಂಭ್ರಮಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಧೋನಿ ಎಂಟರ್ಟೈನ್ಮೆಂಟ್ ಹಲವು ಭಾಷೆಗಳಲ್ಲಿ ಮಹತ್ವದ ಯೋಜನೆಗಳನ್ನು ಕೈಗೊಳ್ಳಲು ಚಿಂತಿಸಲಾಗುತ್ತಿದೆ.

ಇನ್ನೂ ಶೀಘ್ರದಲ್ಲಿಯೇ ಸಿನಿಮಾ ನಿರ್ಮಾಣ ಆರಂಭವಾಗಲಿದೆ. ಗ್ರಾಫಿಕ್ ಕಾದಂಬರಿ ಲೇಖಕ ರಮೇಶ್ ತಮಿಳ್ ಮಣಿ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಅಲ್ಲದೇ, ಬೇರೆ ಭಾಷೆಗಳಲ್ಲಿಯೂ ನಿರ್ದೇಶಕರೊಂದಿಗೆ ಮಾತುಕತೆ ಮಾಡಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.
#m s dhoni #mahendra singh dhoni #cricketer #film produce #tamil film




