ನವದೆಹಲಿ: ದೇಶದ ಆರ್ಥಿಕತೆಯನ್ನು ಸರಿದಾರಿಗೆ ತರಲು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೇಂದ್ರ ಸರ್ಕಾರಕ್ಕೆ ಹೊಸ ಸಲಹೆಯೊಂದನ್ನು ನೀಡಿದ್ದಾರೆ. ಆರ್ಥಿಕತೆಯನ್ನು ಮರಳಿ ಹಳಿಗೆ ತರಲು ಹೊಸ ಕರೆನ್ಸಿ ನೋಟುಗಳಲ್ಲಿ ಗಣೇಶ ಮತ್ತು ಲಕ್ಷ್ಮಿ ದೇವಿಯ ಫೋಟೋವನ್ನು ಹಾಕುವಂತೆ ಮೋದಿ ಸರ್ಕಾರವನ್ನು ಕೇಜ್ರಿ ಒತ್ತಾಯಿಸಿದ್ದಾರೆ.
“ಭಾರತದ ಕರೆನ್ಸಿ ನೋಟುಗಳ ಮೇಲೆ ಗಣೇಶ ಮತ್ತು ಲಕ್ಷ್ಮೀ ದೇವಿಯ ಫೋಟೋ ಹಾಕಿ”

ಭಾರತದ ಆರ್ಥಿಕತೆಯು ಉತ್ತಮ ಸ್ಥಿತಿಯಲ್ಲಿಲ್ಲ ಎಂದು ವಿಷಾದಿಸಿರುವ ದೆಹಲಿ ಸಿಎಂ ಕೇಜ್ರಿವಾಲ್, “ನಮ್ಮ ಆರ್ಥಿಕತೆಯನ್ನು ಮರಳಿ ಹಳಿಗೆ ತರಲು ನಮಗೆ ಸಾಕಷ್ಟು ಪ್ರಯತ್ನಗಳ ಅಗತ್ಯವಿದೆ. ಆದರೆ ಇದಕ್ಕೆ ನಮಗೆ ನಮ್ಮ ದೇವರ ಆಶೀರ್ವಾದವೂ ಬೇಕು” ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
“ಭಾರತದ ಕರೆನ್ಸಿ ನೋಟುಗಳ ಮೇಲೆ ಒಂದು ಕಡೆ ಗಾಂಧೀಜಿಯವರ ಚಿತ್ರವಿದೆ. ಅದು ಹಾಗೆಯೇ ಉಳಿಯಬೇಕು. ನೋಟಿನ ಇನ್ನೊಂದು ಬದಿಯಲ್ಲಿ ಗಣೇಶ ಮತ್ತು ಲಕ್ಷ್ಮೀ ದೇವಿಯ ಫೋಟೋ ಹಾಕಿದರೆ ಇಡೀ ದೇಶವೇ ಅವರ ಆಶೀರ್ವಾದ ಪಡೆಯುತ್ತದೆ,” ಎಂದು ಅವರು ಹೇಳಿದ್ದಾರೆ.
“ಇಂಡೋನೇಷ್ಯಾ ಕರೆನ್ಸಿಯಲ್ಲಿ ಗಣೇಶನ ಚಿತ್ರವಿದೆ,”
ಈ ಬಗ್ಗೆ ಇಂಡೋನೇಷ್ಯಾದ ಉದಾಹರಣೆಯನ್ನು ಉಲ್ಲೇಖಿಸಿದ ದೆಹಲಿ ಸಿಎಂ, ಭಾರತದಲ್ಲಿ ಇದೇ ರೀತಿಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಮಾಡಿದರು. “ಇಂಡೋನೇಷ್ಯಾ ಮುಸ್ಲಿಂ ದೇಶ. 85 % ಮುಸ್ಲಿಮರು ಮತ್ತು 2 ಶೇಕಡದಷ್ಟು ಮಾತ್ರ ಹಿಂದೂಗಳಿದ್ದಾರೆ. ಆದರೆ ಅಲ್ಲಿನ ಕರೆನ್ಸಿಯಲ್ಲಿ ಗಣೇಶನ ಚಿತ್ರವಿದೆ,” ಎಂದು ಆಪ್ ನಾಯಕ ಉಲ್ಲೇಖಿಸಿದ್ದಾರೆ.

“ಹೊಸದಾಗಿ ಮುದ್ರಿಸಲಾದ ನೋಟುಗಳ ಮೇಲೂ ಲಕ್ಷ್ಮಿದೇವಿ ಮತ್ತು ಗಣೇಶನ ಚಿತ್ರಗಳನ್ನು ಹಾಕಬೇಕೆಂದು ನಾನು ಪ್ರಧಾನ ಮಂತ್ರಿಗಳಲ್ಲಿ ಮನವಿ ಮಾಡುತ್ತೇನೆ,” ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.
ಗಣೇಶನನ್ನು ವಿಘ್ನನಿವಾರಕನೆಂದು ವ್ಯಾಪಕವಾಗಿ ಪರಿಗಣಿಸಲಾಗಿದೆ. ಅಲ್ಲದೆ ಅದೃಷ್ಟವನ್ನು ತರುತ್ತಾನೆ ಎಂದು ನಂಬುತ್ತೇವೆ. ಇದೇ ವೇಳೆ ಲಕ್ಷ್ಮಿ ದೇವಿಯನ್ನು ಸಂಪತ್ತು, ಅದೃಷ್ಟ, ಶಕ್ತಿ, ಸೌಂದರ್ಯ ಮತ್ತು ಸಮೃದ್ಧಿಯ ಅಧಿದೇವತೆ ಎಂದೇ ಪೂಜಿಸಲಾಗುತ್ತದೆ.
“ಈ ಬಗ್ಗೆ ನಾಳೆ ಅಥವಾ ಮುಂದಿನ ದಿನ ನಾನು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಮನವಿ ಮಾಡುತ್ತೇನೆ. ದೇಶದ ಆರ್ಥಿಕ ಸ್ಥಿತಿಯನ್ನು ಇತ್ಯರ್ಥಪಡಿಸುವ ಪ್ರಯತ್ನಗಳ ಹೊರತಾಗಿ ನಮಗೆ ಸರ್ವಶಕ್ತ ಭಗವಂತನ ಆಶೀರ್ವಾದವೂ ಬೇಕು” ಎಂದು ಆಮ್ ಆದ್ಮಿ ಪಕ್ಷದ ಮುಖ್ಯಸ್ಥರು ಹೇಳಿದ್ದಾರೆ.




