ಬೆಂಗಳೂರು: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರಕ್ಕೆ ಬರಲೇಬೇಕೆಂದು ಪಣತೊಟ್ಟಿರುವ ರಾಜ್ಯದ ಪ್ರಾದೇಶಿಕ ಪಕ್ಷ ಜೆಡಿಎಸ್ ಈಗಿನಿಂದಲೇ ಪಂಚರತ್ನ ಸೇರಿದಂತೆ ಹಲವು ಯೋಜನೆಗಳ ರೂಪಿಸುತ್ತಿದೆ. ಸಭೆ, ಸಮಾರಂಭಗಳ ಮೂಲಕ ಪಕ್ಷಕ್ಕೆ ಚೈತನ್ಯ ತುಂಬಲು ದಳಪತಿಗಳು ಮುಂದಾಗಿದ್ದಾರೆ.
ಇದರ ನಡುವೆ ಕೊಪ್ಪಳದಲ್ಲಿ ದೀಪಾವಳಿ ಹಬ್ಬದ ನಿಮಿತ್ತ ಲಕ್ಷ್ಮಿ ಪೂಜೆ ವೇಳೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರ ಫೋಟೋ ಇಟ್ಟು 2023ರ ಚುನಾವಣೆಯಲ್ಲಿ ಹೆಚ್ಡಿಕೆ ಬೆಂಬಲಿಸಿ ಅಂತ ಪೂಜೆ ಮಾಡಲಾಗಿದೆ. ಈ ಪೊಜೆಯ ಫೋಟೋಗಳು ಹಾಗೂ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ರೈತರ ಬಗ್ಗೆ ಕಾಳಜಿ ಇರುವ ಏಕೈಕ ವ್ಯಕ್ತಿ ಅಂದರೆ ಇವರು. ಎಲ್ಲಾ ಪಕ್ಷದವರಿಗೆ ಒಂದು ಬಾರಿ ಅವಕಾಶ ಮಾಡಿಕೊಟ್ಟಿದ್ದೀರಿ. ಈ ಭಾರಿ ಪ್ರಾದೇಶಿಕ ಪಕ್ಷಕ್ಕೆ ಅವಕಾಶ ಮಾಡಿಕೊಡಿ ಎಂದು ಹೆಚ್ ಡಿಕೆ ಅಭಿಮಾನಿ ನಿಂಗಪ್ಪ ವಿ ಜಿಗೇರಿ ಎಂಬುವರು ಪೂಜೆ ಮಾಡಿದ್ದಾರೆ. ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಕಡೇಕೊಪ್ಪ ಗ್ರಾಮದಲ್ಲಿ ಪೂಜೆಯನ್ನು ಸಲ್ಲಿಸಲಾಗಿದೆ.
ಜೆಡಿಎಸ್ ಪಂಚರತ್ನ ಜನಸಂಪರ್ಕ ರಥಯಾತ್ರೆ ನವೆಂಬರ್ 1ರಿಂದ ಆರಂಭವಾಗುತ್ತಿದ್ದು ಮೊದಲ ಹಂತದ ಪಂಚರತ್ನ ರಥಯಾತ್ರೆಯ ಪಟ್ಟಿ ಬಿಡುಗಡೆ ಆಗಿದೆ. ನ.1ರಿಂದ ಕೋಲಾರ ಜಿಲ್ಲೆಯ ಮುಳಬಾಗಿಲಿನಿಂದ ರಥಯಾತ್ರೆ ಆರಂಭವಾಗಲಿದೆ. ಮೊದಲ ಹಂತದಲ್ಲಿ 35 ದಿನಗಳ ಕಾಲ ರಥಯಾತ್ರೆ ನಡೆಯಲಿದೆ.
ಹಳೇ ಮೈಸೂರು ಭಾಗಕ್ಕೆ ಮಾತ್ರ ಜೆಡಿಎಸ್ ಸೀಮಿತವಾಗಲ್ಲ. ರಾಜ್ಯದೆಲ್ಲೆಡೆ ಪಕ್ಷ ಸಂಘಟನೆ ಮಾಡಲಾಗುತ್ತಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಈಗಾಗಲೇ ಸಂಘಟನೆ ಆರಂಭಿಸಿದ್ದೇವೆ. ಉತ್ತರ ಕರ್ನಾಟಕ ಭಾಗದಲ್ಲಿ ಜೆಡಿಎಸ್ ಅಸ್ತಿತ್ವ ಏನು ಎಂಬುದನ್ನು ಈ ಕಾರ್ಯಕ್ರಮಗಳ ಮೂಲಕ ತೋರಿಸಲಾಗುತ್ತದೆ ಎಂದು ಎಚ್.ಡಿ.ಕುಮಾರಸ್ವಾಮಿ ಇತ್ತೀಚೆಗೆ ಹೇಳಿದ್ದರು.




