ಗುಜರಾತ್, ಮೊರ್ಬಿ: ಗುಜರಾತ್‍ನ ರಾಜ್ಯದ ಮೊರ್ಬಿ ಜಿಲ್ಲೆಯಲ್ಲಿ ಸಂಭವಿಸಿರುವ ತೂಗು ಸೇತುವೆ ದುರಂತದಲ್ಲಿ 132 ಮಂದಿ ಬಲಿಯಾಗಿದ್ದು, ಮೃತರ ಕುಟುಂಬಗಳಿಗೆ 2 ಲಕ್ಷ ರೂಪಾಯಿಗಳು ಪರಿಹಾರ ಘೋಷಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ದ್ರೌಪದಿ ಮುರ್ಮು ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಮಚ್ಚು ನದಿಗೆ ನಿರ್ಮಿಸಿರುವ ಮೊರ್ಬಿ ತೂಗು ಸೇತುವೆ ಭಾನುವಾರ ಕುಸಿದು ಬಿದ್ದಿದೆ. ಈ ದುರಂತದಲ್ಲಿ ನಾಪತ್ತೆಯಾದವರಿಗಾಗಿ, ರಕ್ಷಣಾ ಕಾರ್ಯ ಭರದಿಂದ ಸಾಗಿದೆ. ಎನ್‍ಡಿಆರ್‌ಎಫ್, ವಾಯುಪಡೆ, ಅಗ್ನಿಶಾಮಕ ದಳದಿಂದ ರಕ್ಷಣಾ ಕಾರ್ಯ ಮುಂದುವರಿದಿದೆ. ದೋಣಿ, ಬೋಟ್‍ಗಳ ಸಹಾಯದಿಂದ ರಕ್ಷಣಾ ಕಾರ್ಯ ನಡೆಯುತ್ತಿದೆ. ಈಗಾಗಲೇ 177ಕ್ಕೂ ಹೆಚ್ಚು ಮಂದಿಯನ್ನು ರಕ್ಷಿಸಲಾಗಿದೆ.

ಕಳೆದ ವಾರವಷ್ಟೇ ಮೋರ್ಬಿಯಲ್ಲಿರುವ 140ಕ್ಕೂ ಅಧಿಕ ವರ್ಷಗಳ ಇತಿಹಾಸ ಇರುವ ಐತಿಹಾಸಿಕ ಕೇಬಲ್ ಸೇತುವೆಯನ್ನು ನವೀಕರಿಸಲಾಗಿತ್ತು. ಅದನ್ನು ಅಕ್ಟೋಬರ್ 26 ರಂದು ಗುಜರಾತಿ ಹೊಸ ವರ್ಷದ ದಿನದಂದು ಸಾರ್ವಜನಿಕರ ಉಪಯೋಗಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರವಾಸಿಗರು ಟಿಕೆಟ್ ಖರೀದಿಸಿ ಸೇತುವೆ ವೀಕ್ಷಿಸಿ ಆಗಮಿಸಿದ್ದರು ಎನ್ನಲಾಗಿದ್ದು, ಸುಮಾರು 675 ಟಿಕೆಟ್ ಮಾರಾಟ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಅಕ್ಟೋಬರ್ 30 ರಂದು ಸಂಜೆ ಛಾತ್ ಪೂಜೆಯ ನಿಮಿತ್ತ ಕೆಲವು ವಿಧಿವಿಧಾನಗಳನ್ನು ನೆರವೇರಿಸಲು ಸೇತುವೆ ಮೇಲೆ ಬಹಳಷ್ಟು ಜನರು ಜಮಾಯಿಸಿದ್ದರು. ಕುಸಿದಾಗ ಸೇತುವೆ ಮೇಲೆ ಸುಮಾರು 500 ಜನರು ಇದ್ದರು ಎನ್ನಲಾಗಿದೆ. ಅತಿಯಾದ ಭಾರ ಇದ್ದುದರಿಂದ ಸೇತುವೆ ಕುಸಿದಿದೆ ಎನ್ನಲಾಗುತ್ತಿದೆ.

ಇನ್ನು ಶಿಥಿಲಗೊಂಡಿದ್ದ ಹಿನ್ನೆಲೆ 2 ಕೋಟಿ ರೂ. ವೆಚ್ಚದಲ್ಲಿ ನವೀಕರಿಸಲಾಗಿತ್ತು. ನವೀಕರಣಗೊಂಡ ಸೇತುವೆಯನ್ನು ಐದು ದಿನಗಳ ಹಿಂದೆ ಉದ್ಘಾಟಿಸಲಾಗಿತ್ತು. ಮೂರು ದಿನದ ಹಿಂದೆ ಜನರ ಪ್ರವೇಶಕ್ಕೆ ಮುಕ್ತಗೊಳಿಸಲಾಗಿತ್ತು. ಈಗ ಏಕಾಏಕಿ ಕುಸಿದಿರುವುದು ಅಕ್ರಮ ಕಾಮಗಾರಿ ಅನುಮಾನಕ್ಕೆ ಮತ್ತಷ್ಟು ಪುಷ್ಠಿ ನೀಡಿದೆ.
ದುರಂತಕ್ಕೆ ಕಾರಣವೇನು ಎನ್ನುವುದನ್ನು ತಿಳಿಯಲು ಗುಜರಾತ್ ಸರ್ಕಾರ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದು, ಸೇತುವೆ ಕುಸಿಯಲು ಕಾರಣ ಏನು ಎನ್ನುವುದು ತನಿಖೆಯ ಬಳಿಕ ಸತ್ಯಾಸತ್ಯತೆ ತಿಳಿಯಲಿದೆ. ಈ ದುರಂತ ಸ್ಥಳಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡುವ ಸಾಧ್ಯತೆ ಇದೆ. ಈಗಾಗಲೇ ಮೃತರ ಕುಟುಂಬಕ್ಕೆ ಸಾಂತ್ವಾನ ತಿಳಿಸಿರುವ ಅವರು ಎರಡು ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಗಾಯಾಳುಗಳಿಗೆ ಐವತ್ತು ಸಾವಿರ ಪರಿಹಾರ ಘೋಷಣೆ ಮಾಡಲಾಗಿದೆ.
#gujarat Morbi bridge #collapse #prime minister nrendra modi #death rate high #bharat jodo yathra




