ಚಿತ್ರದುರ್ಗ: ಬಿಜೆಪಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಅವರನ್ನು ಹನಿಟ್ರ್ಯಾಪ್ಗೆ ಬೀಳಿಸುವ ವಿಫಲ ಪ್ರಯತ್ನ ನಡೆದಿದೆ. ವಿಡಿಯೋ ಕಾಲ್ ಮಾಡಿ ಶಾಸಕರನ್ನು ಹನಿಟ್ರ್ಯಾಪ್ ಮಾಡಲು ಯತ್ನಿಸಲಾಗಿತ್ತು. ಆದರೆ ತತ್‌ಕ್ಷಣವೇ ಜಾಗೃತರಾದ ಅವರು ಈ ಕುರಿತು ಚಿತ್ರದುರ್ಗ ಸೈಬರ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಈ ವಿಚಾರವನ್ನು ಮಾಧ್ಯಮದವರ ಜತೆಗೆ ಹಂಚಿಕೊಂಡಿರುವ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಕೊಟ್ಟಿರುವ ವಿವರಣೆ ಹೀಗಿದೆ..

ವಿಡಿಯೋ ಕಾಲ್ ಒಂದು ಬಂತು. ಅದನ್ನು ರಿಸೀವ್ ಮಾಡಿದಾಗ ಯುವತಿಯೊಬ್ಬಳು ಅಶ್ಲೀಲವಾಗಿ ಖಾಸಗಿ ಅಂಗಾಂಗ ತೋರಿಸಿದ್ದಳು. ಬೆಚ್ಚಿಬಿದ್ದು, ಕರೆ ಕಟ್ ಮಾಡಿ ಮೊಬೈಲ್ ಪಕ್ಕಕ್ಕೆ ಇರಿಸಿದ್ದೆ. ಇದಾಗಿ, ಆ ಅಶ್ಲೀಲ ವಿಡಿಯೋವನ್ನು ವಾಟ್ಸ್‌ಆಪ್ ಮೂಲಕ ನನ್ನ ನಂಬರಿಗೆ ರವಾನಿಸಿದ್ದಾರೆ.
ಕೂಡಲೇ ಆಪ್ತರನ್ನು ಕರೆದು ವಾಟ್ಸ್‌ಆಪ್ ವಿಡಿಯೋ ಕರೆ ಬಂದ ನಂಬರ್ ಬ್ಲಾಕ್ ಮಾಡಿಸಿದ್ದೇನೆ. ನಂತರ ಸೈಬರ್ ಠಾಣೆಗೆ ದೂರು ನೀಡಲಾಗಿದೆ. ಪೊಲೀಸರು ತನಿಖೆ ಶುರುಮಾಡಿದ್ದಾರೆ. ಅದು ರಾಜಸ್ಥಾನ ಅಥವಾ ಒಡಿಶಾದಿಂದ ಬಂದ ಕರೆ ಎಂಬುದು ಪ್ರಾಥಮಿಕ ಮಾಹಿತಿ.

ಅಪರಿಚಿತ ಯುವತಿ ವಿಡಿಯೋ ಕರೆ ಮಾಡಿದ್ದಳು. ಕ್ಷೇತ್ರದ ಜನರೋ ಅಥವಾ ಇನ್ಯಾರೋ ಇರಬೇಕು ಎಂದು ಕರೆ ಸ್ವೀಕರಿಸಿದ್ದೆ. ಅವರ ಬಾಷೆ ಅರ್ಥವಾಗಿರಲಿಲ್ಲ. ಎರಡು ಸಲ ಈ ರೀತಿ ಆಗಿತ್ತು. ಕೂಡಲೇ ಪತ್ನಿಯನ್ನು ಕರೆದು ನಂಬರ್ ಬ್ಲಾಕ್ ಮಾಡಿಸಿದ್ದೆ. ಕೂಡಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೂ ಮಾಹಿತಿ ನೀಡಿದ್ದೆ.
ಈಗ ತನಿಖೆ ಎಲ್ಲಿವರೆಗೆ ಬಂದಿದೆ ಎಂಬುದು ಗೊತ್ತಿಲ್ಲ. ಆ ಕುರಿತು ವಿಚಾರಿಸಿಲ್ಲ. ಈ ಘಟನೆಯಲ್ಲಿ ನನಗೆ ಯಾರ ಮೇಲೂ ಅನುಮಾನ ಇಲ್ಲ. ನನಗೆ ಯಾರೂ ವಿರೋಧಿಗಳೂ ಇಲ್ಲ ಎಂದು ತಿಪ್ಪಾರೆಡ್ಡಿ ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.