ಕಲಬುರಗಿ ಪಾಲಿಕೆ ಅಧಿಕಾರಕ್ಕಾಗಿ ಕಸರತ್ತು : ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ ಸಚಿವ ಅಶೋಕ್

ಬೆಂಗಳೂರು : ಕಲಬುರಗಿ ಪಾಲಿಕೆಯ ಅಧಿಕಾರ ಹಿಡಿಯಲು ಕಾಂಗ್ರೆಸ್ ಹಾಗೂ ಬಿಜೆಪಿ ಭಾರಿ ಕಸರತ್ತು ನಡೆಸುತ್ತಿವೆ. ಇವೆಲ್ಲದರ ನಡುವೆ ಜೆಡಿಎಸ್ ಯಾರಿಗೆ ಬೆಂಬಲ ಸೂಚಿಸುತ್ತದೆ ಎನ್ನುವುದು ಭಾರಿ ಕುತೂಹಲ ಕೆರಳಿಸಿದೆ.

ಈ ನಡುವೆ ಇಂದು ಬಿಜೆಪಿ ಪಕ್ಷದ ಪರವಾಗಿ ಸಚಿವ ಆರ್.ಅಶೋಕ್ ಅವರು  ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರ ತೋಟದ ಮನೆಯಲ್ಲಿ ಭೇಟಿಯಾಗಿ ರಾಜ್ಯದ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ನನ್ನೊಂದಿಗೆ ಸುದೀರ್ಘವಾಗಿ ಚರ್ಚಿಸಿದರು.

ಸೋಮವಾರದಿಂದ ಆರಂಭವಾಗಲಿರುವ ವಿಧಾನಮಂಡಲ ಕಲಾಪದ ಬಗ್ಗೆಯೂ ಕುಮಾರಸ್ವಾಮಿ ಅವರೊಂದಿಗೆ ಅಶೋಕ್ ಅವರು ಸಮಾಲೋಚನೆ ನಡೆಸಿದರು. ಸೋಮವಾರ ಸಂಜೆ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ. ಅಲ್ಲಿ, ನಮ್ಮ ಶಾಸಕರ ಜತೆ ಎಲ್ಲ ಬೆಳವಣೆಗಳ ಬಗ್ಗೆ ಚರ್ಚಿಸಿದ ನಂತರ ಪಕ್ಷದ ಅಭಿಪ್ರಾಯವನ್ನು ತಿಳಿಸಲಾಗುವುದು ಎಂದು ಅವರಿಗೆ ಮನವರಿಕೆ ಮಾಡಲಾಗಿದೆ ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

ಪ್ರಸ್ತುತ, ರಾಜ್ಯದ ರೈತಾಪಿ ಜನ ಎದುರಿಸುತ್ತಿರವ ಸಮಸ್ಯೆಗಳೂ ಸೇರಿದಂತೆ ರಾಜ್ಯ ಎದುರಿಸುತ್ತಿರುವ ವಿವಿಧ ಸವಾಲುಗಳ ಬಗ್ಗೆ ಸಚಿವರ ಗಮನಕ್ಕೆ ತಂದಿದ್ದೇನೆ. ಈ ಸಂದರ್ಭದಲ್ಲಿ ಶಾಸಕರಾದ ಸಾ.ರಾ.ಮಹೇಶ್ ಉಪಸ್ಥಿತರಿದ್ದರು.

ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರನ್ನ ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಆರ್.ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷರ ಸೂಚನೆ ಮೇರೆಗೆ ಹೆಚ್.ಡಿ ಕುಮಾರಸ್ವಾಮಿ ಅವರನ್ನ ಭೇಟಿಯಾಗಿದ್ದೇನೆ. ಕಲ್ಬುರ್ಗಿ ಪಾಲಿಕೆ ಮೈತ್ರಿ ವಿಚಾರವಾಗಿ ಚರ್ಚಿಸಲಾಗಿದೆ, ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಳ್ಳಲು ಅವರು ಒಲವು ತೋರಿದ್ದು, ಸೋಮವಾರ ಸಂಜೆ ನಡೆಯುವ ಶಾಸಕಾಂಗ ಪಕ್ಷದ ಸಭೆ ಬಳಿಕ ತೀರ್ಮಾನ ತಿಳಿಸುವುದಾಗಿ ತಿಳಿಸಿದ್ದಾರೆ ಎಂದು ವಿವರಿಸಿದರು.

More News