INDIA’S FIRST VOTER:ಭಾರತದ ಮೊದಲ ಮತದಾರ ಶ್ಯಾಮ್‌ ಸರಣ್‌ ನೇಗಿ ಇನ್ನಿಲ್ಲ..!

ಕಿನ್ನೌರ್ (ಹಿಮಾಚಲ ಪ್ರದೇಶ): ಸ್ವತಂತ್ರ ಭಾರತದ ಮೊದಲ ಮತದಾರ, 106 ವರ್ಷದ ಶ್ಯಾಮ್ ಸರಣ್ ನೇಗಿ ಇಂದು ನಿಧನರಾಗಿದ್ದಾರೆ. ರಾಜ್ಯದ 14ನೇ ವಿಧಾನಸಭಾ ಚುನಾವಣೆಯಲ್ಲಿ ಕೊನೆಯ ಬಾರಿಗೆ ಮತ ಚಲಾಯಿಸಿದ ಕೆಲವೇ ದಿನಗಳಲ್ಲಿ, ಕಲ್ಪಾದಲ್ಲಿರುವ ತಮ್ಮ ನಿವಾಸದಲ್ಲಿ ಶ್ಯಾಮ್‌ ಸರಣ್‌ ನೇಗಿ ಕೊನೆಯುಸಿರೆಳೆದಿದ್ದಾರೆ. ಸಕಲ ಸರ್ಕಾರಿ ಗೌರವಗಳೊಂದಿಗೆ ನೇಗಿ ಅವರ ಅಂತ್ಯಕ್ರಿಯೆ ನೆರವೇರಿಸಲು ಹಿಮಾಚಲ ಪ್ರದೇಶದ ಸರ್ಕಾರ ನಿರ್ಧರಿಸಿದೆ.

ಸ್ವತಂತ್ರ ಭಾರತದಲ್ಲಿ ನಡೆದ ಮೊದಲ ಚುನಾವಣೆಯಲ್ಲಿ, ಶ್ಯಾಮ್‌ ಸರಣ್‌ ನೇಗಿ ಅವರು, ಅಕ್ಟೋಬರ್ 23, 1951 ರಂದು ಕಲ್ಪಾ ಮತಗಟ್ಟೆಯಲ್ಲಿ ಮೊದಲ ಮತವನ್ನು ಚಲಾಯಿಸಿದ್ದರು. ಕಳೆದ ನವೆಂಬರ್ 2ರಂದು ಹಿಮಾಚಲ ಪ್ರದೇಶ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ, 34 ನೇ ಬಾರಿ ಹಾಗೂ ಕೊನೆಯ ಬಾರಿ ಅಂಚೆ ಮತಪತ್ರದ ಮೂಲಕ ಶ್ಯಾಮ್‌ ಸರಣ್‌ ನೇಗಿ ಮತ ಚಲಯಿಸಿದ್ದಾರೆ.

ಮುಖ್ಯಮಂತ್ರಿ ಜೈರಾಮ್ ಠಾಕೂರ್ ನೇಗಿ ಅವರ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದ್ದು, ದೇಶದ ಮೊದಲ ಮತದಾರ ತನ್ನ ಕೊನೆಯ ಮತವನ್ನು ಚಲಾಯಿಸಿದ ನೆನಪು ಯಾವಾಗಲೂ ಭಾವನಾತ್ಮಕವಾಗಿರುತ್ತದೆ ಎಂದು ಕಂಬನಿ ಮಿಡಿದಿದ್ದಾರೆ.”ಸ್ವತಂತ್ರ ಭಾರತದ ಮೊದಲ ಮತದಾರ ಕಿನ್ನೌರ್‌ಗೆ ಸೇರಿದ ಶ್ಯಾಮ್ ಸರಣ್ ನೇಗಿ ಜಿ ಅವರ ನಿಧನದ ಸುದ್ದಿ ಕೇಳಿ ದುಃಖವಾಯಿತು. ಅವರು ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಲೇ ನವೆಂಬರ್ 2 ರಂದು 34 ನೇ ಬಾರಿಗೆ ವಿಧಾನಸಭಾ ಚುನಾವಣೆಗೆ ಅಂಚೆ ಮತ ಚಲಾಯಿಸಿದರು. ಈ ನೆನಪು ಯಾವಾಗಲೂ ಭಾವನಾತ್ಮಕವಾಗಿರುತ್ತದೆ” ಎಂದು ಸಿಎಂ ಠಾಕೂರ್ ಟ್ವೀಟ್ ಮಾಡಿದ್ದಾರೆ.

ಕೊನೆಯ ಬಾರಿ ಮತದಾನ ಮಾಡಿ ಮಾತನಾಡಿದ್ದ ನೇಗಿ ಅವರು , “ಯುವ ಮತದಾರರು ತಮ್ಮ ಕರ್ತವ್ಯವನ್ನು ಪರಿಗಣಿಸಿ ಮತ ಚಲಾಯಿಸಬೇಕು ಮತ್ತು ರಾಷ್ಟ್ರವನ್ನು ಬಲಪಡಿಸಲು ಕೊಡುಗೆ ನೀಡಬೇಕು” ಎಂಬ ಸಂದೇಶ ನೀಡಿದ್ದರು. ರಾಷ್ಟ್ರವನ್ನು ಮುನ್ನಡೆಸಲು ಸರಿಯಾದ ಪ್ರತಿನಿಧಿಯನ್ನು ಆಯ್ಕೆ ಮಾಡಲು ಸಹಾಯ ಮಾಡುವ ಮೂಲಕ ನಮ್ಮ ಮತದಾನದ ಹಕ್ಕಿನ ಬಗ್ಗೆ ನಾವು ಹೆಮ್ಮೆಪಡಬೇಕು ಎಂದು ನೇಗಿ ಯುವ ಪೀಳಿಗೆಗೆ ಪ್ರೇರಣಾದಾಯಕ ಸಂದೇಶವನ್ನು ನೀಡಿದ್ದರು..

More News