ನಾವು ಈಗಾಗಲೇ ಹಲವು ಜನರ ಬಯೋಪಿಕ್ ಗಳನ್ನ ಸಿನಿಮಾಗಳ ಮೂಲಕ ನೋಡಿದ್ದೇವೆ. ಆದ್ರೆ ಈಗ ಸರ್ಕಾರ ಮತ್ತು ಬ್ಯಾಂಕ್ ಗಳಿಗೆ ಕೋಟ್ಯಂತರ ರೂಪಾಯಿ ಹಣಕ್ಕೆ ಮೋಸಮಾಡಿ ದೇಶ ಬಿಟ್ಟು ಹೋಗಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ವಿಜಯ್ ಮಲ್ಯ ಸರದಿ. ಒಂದು ಕಾಲದಲ್ಲಿ ಮದ್ಯದ ದೊರೆ ಎಂದೇ ಹೆಸರುವಾಸಿಯಾಗಿದ್ದ ವಿಜಯ್ ಮಲ್ಯ ಇದೀಗ ಬೆಳ್ಳಿತೆರೆಮೇಲೆಯೂ ಕಾಣಿಸಲಿದ್ದಾರೆ. ಯೆಸ್ ವಿಜಯ್ ಮಲ್ಯ ಕುರಿತಾದ ಚಿತ್ರವೊಂದನ್ನ ಬಾಲಿವುಡ್ ನಲ್ಲಿ ಸದ್ದಿಲ್ಲದೆ ಆರಂಭವಾಗಿದೆ.

ಈ ಚಿತ್ರವನ್ನು ತಮಿಳಿನ ಖ್ಯಾತ ನಿರ್ದೇಶಕ ಶಂಕರ್ ಬಳಿ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ ಅನುಭವ ಇರುವ ಕಾರ್ತಿಕ್, ಚೊಚ್ಚಲ ಬಾಲಿವುಡ್ ಸಿನಿಮಾದ ನಿರ್ದೇಶನಕ್ಕಿಳಿದಿದ್ದಾರೆ. ಈ ಚಿತ್ರಕ್ಕೆ ‘ಫೈಲ್ ನಂ 323’ ಎಂಬ ಶೀರ್ಷಿಕೆಯೂ ಅಂತಿಮವಾಗಿದೆ. ಈ ಚಿತ್ರದಲ್ಲಿ ಕೇವಲ ವಿಜಯ್ ಮಲ್ಯ ಮಾತ್ರವಲ್ಲದೆ, ದೇಶದಿಂದ ಪಲಾಯನಗೈದ ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿಯಂತಹ ಉದ್ಯಮಿಗಳ ನಿಜಬಣ್ಣವನ್ನೂ ಈ ಸಿನಿಮಾ ಮೂಲಕ ಬಟಾ ಬಯಲು ಮಾಡಲಿದ್ದಾರಂತೆ.
ವಿಜಯ್ ಮಲ್ಯ ಪಾತ್ರದಲ್ಲಿ ಅನುರಾಗ್ ಕಶ್ಯಪ್

‘ಗ್ಯಾಂಗ್ಸ್ ಆಫ್ ವಾಸೇಪುರ್’, ‘ರಮಣ್ ರಾಘವ್’, ‘ಬ್ಲಾಕ್ ಫ್ರೈಡೇ’ ಸಿನಿಮಾ ನಿರ್ದೇಶಕ ಅನುರಾಗ್ ಕಶ್ಯಪ್, ‘ಫೈಲ್ ನಂ 323’ ಚಿತ್ರದಲ್ಲಿ ವಿಜಯ್ ಮಲ್ಯ ಪಾತ್ರ ನಿಭಾಯಿಸಲಿದ್ದಾರೆ. ನಿರ್ದೇಶನದ ಜತೆಗೆ ನಟನಯಲ್ಲಿಯೂ ಅನುರಾಗ್ ತಮ್ಮ ಕಲಾಪ್ರೌಢಿಮೆ ಮೆರೆದಿದ್ದಾರೆ. ‘ಅಕಿರಾ’, ‘ಧೂಮಕೇತು’ ಮತ್ತು ‘ಮುಕ್ಕಾಬಾಜ್’ ಚಿತ್ರಗಳಲ್ಲಿ ನಟನಾಗಿ ಕಾಣಿಸಿಕೊಂಡಿದ್ದಾರೆ. ಇದೀಗ ಅದೆಲ್ಲದಕ್ಕಿಂತ ಗಟ್ಟಿ ಪಾತ್ರವೊಂದಕ್ಕೆ ಬಣ್ಣಹಚ್ಚಲಿದ್ದಾರೆ ಎನ್ನಲಾಗುತ್ತಿದೆ. ಈಗಾಗಲೇ ಅನುರಾಗ್ ಕಶ್ಯಪ್ ಜತೆಗೆ ಒಂದು ಸುತ್ತಿನ ಮಾತುಕತೆ ನಡೆಸಿರುವ ನಿರ್ದೇಶಕ ಕಾರ್ತಿಕ್, ಈ ಚಿತ್ರವನ್ನು ದೊಡ್ಡ ಮಟ್ಟದಲ್ಲಿ ತೆರೆಗೆ ತರಲು ನಿರ್ಧರಿಸಿದ್ದಾರೆ ಎಂಬಮಾತು ಕೇಳಿಬರುತ್ತಿದೆ.
ಸಾಲದ ಸುಳಿಯಲ್ಲಿ ಸಿಲುಕಿರುವ ವಿಜಯ್ ಮಲ್ಯ ಅವರ ಜೀವನಾಧಾರಿತ ಚಿತ್ರ
ಹಲವಾರು ಬ್ಯಾಂಕ್ ಗಳು ಮತ್ತು ಸರ್ಕಾರದಿಂದ ಕೋಟ್ಯಂತರ ರೂಪಾಯಿ ಸಾಲದ ಸುಳಿಯಲ್ಲಿ ಸಿಲುಕಿರುವ ವಿಜಯ್ ಮಲ್ಯ ಅವರ ಜೀವನಾಧಾರಿತ ಫೈಲ್ ನಂಬರ್ 323 ಸಿನಿಮಾ 2023ರ ಅತಿ ದೊಡ್ಡ ಬಜೆಟ್ ಸಿನಿಮಾ ಆಗಲಿದೆ. ಯುರೋಪ್ ಮತ್ತು ಭಾರತದ ಕೆಲವು ಭಾಗಗಳಲ್ಲಿ ಚಿತ್ರದ ಚಿತ್ರೀಕರಣ ನಡೆಯಲಿದೆ. ಇದಲ್ಲದೆ, ವಿಜಯ್ ಮಲ್ಯ ವಿದೇಶದಲ್ಲಿ ಎಷ್ಟು ಆರಾಮದಾಯಕವಾಗಿದ್ದಾರೆ ಎಂಬುದನ್ನೂ ಈ ಚಿತ್ರದಲ್ಲಿ ತೋರಿಸಲಾಗುತ್ತದೆ. ನವೆಂಬರ್ 20ರಿಂದ ಈ ಸಿನಿಮಾ ಸೆಟ್ಟೇರಲಿದೆ