ಲಹರಿ ವೇಲು ಅವರಿಗೆ ಭಾರತೀಯ ಜನತಾ ಪಕ್ಷದಿಂದ ಟಿಕೆಟ್ ಬೇಕಾಗಿರಬಹುದು, ಹೀಗಾಘಿ ಅವರು ಪ್ರಯತ್ನಿಸುತ್ತಿರಬಹುದು ಆ ಕಾರಣಕ್ಕೆ ಈ ರೀತಿ ಮಾಡುತ್ತಿರುವುದು ಬೇಸರದ ಸಂಗತಿ ಎಂದು ರಮ್ಯಾ ಟ್ವೀಟ್ ಮೂಲಕ ಕಿಡಿಕಾರಿದ್ದಾರೆ. ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಸದ್ಯ ಭಾರತ್ ಜೋಡೋ ಯಾತ್ರೆಯಲ್ಲಿ ನಿರತರಾಗಿದ್ದಾರೆ. ಹೀಗಿರುವಾಗಲೇ ಕಾಂಗ್ರೆಸ್ ವಿರುದ್ಧ ಖ್ಯಾತ ಆಡಿಯೋ ಸಂಸ್ಥೆ ಕಾಪಿ ರೈಟ್ ಆಕ್ಟ್ ಪ್ರಕಾರ ದೂರು ನೀಡಿದೆ. ಅನುಮತಿ ಪಡೆಯದೆ, ‘ಕೆಜಿಎಫ್ 2’ ಚಿತ್ರದ ಹಾಡನ್ನು ಪ್ರಚಾರ ಸಂದರ್ಭದಲ್ಲಿ ಬಳಸಿಕೊಂಡಿದ್ದಕ್ಕೆ ಕೇಸ್ ದಾಖಲಿಸಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಮ್ಯಾ ಪ್ರತಿಕ್ರಿಯೆ ನೀಡಿದ್ದಾರೆ. ಇದರ ಹಿಂದೆ ಬೇರೆಯದೇ ತಂತ್ರ ಇದೆ ಎಂದಿದ್ದಾರೆ.

ಇತ್ತೀಚೆಗಷ್ಟೇ ಕಾಂಗ್ರೆಸ್ ಸೋಷಿಯಲ್ ಮೀಡಿಯಾ ಹ್ಯಾಂಡಲ್ ಕೆಜಿಎಫ್ ಚಿತ್ರದಲ್ಲಿನ ಹಾಡನ್ನು ಆಧರಿಸಿ ರಾಹುಲ್ ಗಾಂಧಿ ಅವರ ವಿಡಿಯೋ ಮಾಡಿತ್ತು. ಈ ಹಾಡನ್ನು ತನ್ನೆಲ್ಲ ಸೋಷಿಯಲ್ ಮೀಡಿಯಾ ವೇದಿಕೆಗಳಲ್ಲಿ ಹಂಚಿಕೊಂಡಿತ್ತು. ಭಾರತ್ ಜೋಡೋ ಯಾತ್ರಾ ಎಂದೂ ಅದರಲ್ಲಿ ನಮೂದಿಸಿತ್ತು. ಹೀಗಿರುವಾಗಲೇ ಕೆಜಿಎಫ್ ಚಿತ್ರದ ಹಾಡುಗಳನ್ನು ದೊಡ್ಡ ಮೊತ್ತಕ್ಕೆ ಖರೀದಿ ಮಾಡಿದ್ದ MRT ಆಡಿಯೋ ಸಂಸ್ಥೆ, ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿತ್ತು.

ರಾಹುಲ್ ಗಾಂಧಿ ಸೇರಿ, ಸೋಷಿಯಲ್ ಮೀಡಿಯಾ ಮುಖ್ಯಸ್ಥೆ ಸುಪ್ರಿಯಾ ಶ್ರೀನೆಟ್ ಮತ್ತು ಭಾರತ್ ಜೋಡೋ ಯಾತ್ರೆಯ ಉಸ್ತುವಾರಿ ವಹಿಸಿಕೊಂಡಿರುವ ಜೈರಾಮ್ ರಮೇಶ್ ವಿರುದ್ಧ ಎಂಆರ್‌ಟಿ ಆಡಿಯೋ ಸಂಸ್ಥೆ ಹಕ್ಕುಸ್ವಾಮ್ಯ ಉಲ್ಲಂಘನೆ ಪ್ರಕರಣ ದಾಖಲಿಸಿತ್ತು.
ನಟಿ ರಮ್ಯಾ ಆರೋಪವೇನು:
“ಲಹರಿ ವೇಲು ಅವರಿಗೆ ಬಿಜೆಪಿ ಟಿಕೆಟ್ ಬೇಕಾಗಿರಬಹುದು. ಅದಕ್ಕಾಗಿ ಅವರು ಪ್ರಯತ್ನಿಸುತ್ತಿರಬಹುದು. ಆ ಕಾರಣಕ್ಕೆ ಈ ರೀತಿ ಮಾಡುತ್ತಿರುವುದು ಬೇಸರದ ಸಂಗತಿ. ಇತ್ತೀಚಿನ ದಿನಗಳಲ್ಲಿ KGF ಚಿತ್ರದ ಹಾಡುಗಳನ್ನು ಎಲ್ಲರೂ ಬಳಕೆ ಮಾಡುತ್ತಿದ್ದಾರೆ. ಆದರೆ, ಇದೇ ಹಾಡನ್ನು ಕಾಂಗ್ರೆಸ್ ಬಳಕೆ ಮಾಡಿಕೊಂಡಿದ್ದೇ ಲಹರಿ ವೇಲು ಅವರಿಗೆ ಸಮಸ್ಯೆಯಾಗಿದೆ ಎಂದು ಟ್ವೀಟ್ ಮಾಡಿದ್ದಾರೆ..