ಒಳಗೆ ಸೇರಿದರೆ ಗುಂಡು.. ಹುಡುಗಿ ಆಗುವಳು ಗಂಡು.. ಅಂತ ನಾವ್ ಹೇಳ್ತಿರೋದಲ್ಲ.. ಸಮೀಕ್ಷಾ ವರದಿಯೊಂದರ ಪ್ರಕಾರ ಗಂಡಸರಿಗೆ ಸಮಾನವಾಗಿ ಮಹಿಳೆಯರು ಕುಡಿಯೋದ್ರಲ್ಲಿ ಮುಂದಿದ್ದಾರೆ ಎಂಬ ವರದಿಯೊಂದು ಹೇಳಿದೆ. ಅದರಲ್ಲಿಯೂ ಕೊರೋನ ಕಾಲಘಟ್ಟದ ನಂತರ ಮದ್ಯಸೇವನೆ ಮಾಡುವುದರಲ್ಲಿ ಮಹಿಳೆಯರ ಸಂಖ್ಯೆಯೇ ಅಧಿಕ ಎಂದು ಕಮ್ಯುನಿಟಿ ಅಗೇನ್ಸ್ಟ್ ಡ್ರಂಕನ್ ಡ್ರೈವಿಂಗ್ (CADD) ಸರ್ಕಾರೇತರ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಬಹಿರಂಗವಾಗಿದೆ.

2022 ರ ಆಗಸ್ಟ್ ನಿಂದ ಅಕ್ಟೋಬರ್ ತನಕ ಸಮೀಕ್ಷೆ ನಡೆಸಿದ್ದ ಸಿಎಡಿಡಿ ಸಂಸ್ಥೆಯು 18 ರಿಂದ 68 ನೇ ವಯಸ್ಸಿನ 5 ಸಾವಿರ ಮಹಿಳೆಯರನ್ನು ಸಮೀಕ್ಷೆಗೊಳಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಮಹಿಳೆಯರಲ್ಲಿ ಮದ್ಯ ಸೇವನೆ ಹೆಚ್ಚಾಗಿರುವುದನ್ನು ಸೂಚಿಸಿದೆ. ಮನೆಯಲ್ಲಿ ಹಾಗೂ ಮನೆಯ ಪಾರ್ಟಿಗಳಲ್ಲಿ ಕುಡಿಯುವವರು ಹೆಚ್ಚಾಗಿದ್ದಾರೆ. ಇನ್ನೂ ಕೆಲ ಮಹಿಳೆಯರು ಪಬ್‌ಗಳಿಗೆ ಹೋಗಿ ಕುಡಿಯಲು ಇಷ್ಟಪಡುತ್ತಾರೆ ಎಂಬುದನ್ನು ಸಮೀಕ್ಷೆ ಸೂಚಿಸಿದೆ.

ಈ ಬಗ್ಗೆ ಮಾತನಾಡಿರುವ ಸಂಸ್ಥೆಯ ಸಂಸ್ಥಾಪಕರಾದ ಪ್ರಿನ್ಸ್ ಸಿಂಘಾಲ್, ಬದಲಾಗುತ್ತಿರುವ ಸಂದರ್ಭಕ್ಕೆ ಅನುಗುಣವಾಗಿ ಮಹಿಳೆಯರಲ್ಲಿ ಎಣ್ಣೆ ಕುಡಿಯುವ ಅಭ್ಯಾಸ ಜಾಸ್ತಿ ಆಗ್ತಿದೆ. ಕಳೆದ 3 ವರ್ಷಗಳಲ್ಲಿ ಕುಡಿಯುವ ಮಾದರಿಗಳು ಬದಲಾಗಿದೆ. ಕೋವಿಡ್ ಕಾಲದಲ್ಲಿ ಹಲವಾರು ಒತ್ತಡಗಳ ಕಾರಣದಿಂದಾಗಿ ಮಹಿಳೆಯರು ಕುಡಿತ ಅಭ್ಯಾಸ ಮಾಡಿಕೊಂಡಿದ್ದಾರೆ. ಈ ವೇಳೆಯಲ್ಲಿ ಹೆಚ್ಚು ಮಧ್ಯಸೇವನೆ ಮಾಡಿದ್ದಾರೆ. ಕನಿಷ್ಠ ಶೇ.30 ಮಹಿಳೆಯರು ಮಧ್ಯ ಸೇವನೆಯನ್ನು ಶೇ.42.3ರಷ್ಟು ಹೆಚ್ಚಿಸಿಕೊಂಡಿದ್ದಾರೆ ಎಂದು ವರದಿಯಿಂದ ಮಾಹಿತಿ ಸಂಗ್ರಹಗೊಂಡಿದೆ. ಇನ್ನೂ, ಒತ್ತಡದಿಂದಾಗಿ ಶೇ.45.7, ಬೇಸರ ಮತ್ತು ಏಕಾಂಗಿತನದಿಂದ ಶೇ.34.4 ರಷ್ಟು ಕುಡಿತಕ್ಕೆ ಬಲಿಯಾಗ್ತಿದ್ದಾರೆ. ಇನ್ನುಳಿದಂತೆ 34 ರಷ್ಟು ಮಹಿಳೆಯರು ಎಣ್ಣೆ ಸಿಗ್ತಿರುವ ಸಲುವಾಗಿಯೇ ಕುಡೀತಿದ್ದಾರೆ ಎಂಬ ಅಂಶವು ಸಮೀಕ್ಷೆ ವೇಳೆ ಹೇಳಿಕೊಂಡಿದ್ದಾರೆ.

ಹೆಣ್ಣು ಕುಟುಂಬದ ನಿರ್ವಹಣಾ ಜವಾಬ್ದಾರಿ, ವೃತ್ತಿಪರ ಜೀವನ ನಿಭಾಯಿಸುವಿಕೆ ಹೀಗೆ ನಾನಾ ಒತ್ತಡದ ಕಾರಣಗಳಿಂದ ಕುಡಿತ ರೂಢಿಸಿಕೊಂಡಿದ್ದಾರೆ ಎಂಬುದನ್ನು ಸಮೀಕ್ಷೆ ತಿಳಿಸಿದೆ.