ಭಾರತದ 50ನೇ ಮುಖ್ಯ ನ್ಯಾಯಮೂರ್ತಿಯಾಗಿ ಧನಂಜಯ ವೈ ಚಂದ್ರಚೂಡ್ ಅವರು ಇಂದು ಪ್ರಮಾಣ ವಚನ ಸ್ವೀಕರಿಸಿದರು. ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜಸ್ಟೀಸ್ ಡಿವೈ ಚಂದ್ರಚೂಡ್ ಅವರಿಗೆ ಪ್ರಮಾಣ ವಚನ ಬೋಧಿಸಿದ್ದಾರೆ. ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರ ತಂದೆ ದಿವಂಗತ ನ್ಯಾ.ವೈವಿ ಚಂದ್ರಚೂಡ್ ಕೂಡ ಭಾರತದ ಸಿಜೆಐ ಆಗಿ ಸೇವೆ ಸಲ್ಲಿಸಿದ್ದರು..

ನ್ಯಾಯಮೂರ್ತಿ ಚಂದ್ರಚೂಡ್ ಅವರು ಎರಡು ವರ್ಷಗಳ ಕಾಲ ಸುಪ್ರೀಂ ಕೋರ್ಟ್‌ನ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಲಿದ್ದಾರೆ. ನ್ಯಾಯಮೂರ್ತಿ ಚಂದ್ರಚೂಡ್ ಅವರು 74 ದಿನಗಳ ಅಲ್ಪಾವಧಿಗೆ ಉನ್ನತ ಹುದ್ದೆಯಲ್ಲಿದ್ದ ನ್ಯಾ. ಉದಯ್ ಉಮೇಶ್ ಲಲಿತ್ ಅವರ ಉತ್ತರಾಧಿಕಾರಿಯಾಗಿದ್ದಾರೆ.

ನ್ಯಾಯಮೂರ್ತಿ ಚಂದ್ರಚೂಡ್ ಅವರು ಮೇ 13, 2016 ರಂದು ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ಬಡ್ತಿ ಪಡೆದಿದ್ದರು. ಅವರು ಅಯೋಧ್ಯೆ ಭೂ ವಿವಾದ ಮತ್ತು ಖಾಸಗಿತನದ ಹಕ್ಕು ಸೇರಿದಂತೆ ಹಲವಾರು ಐತಿಹಾಸಿಕ ತೀರ್ಪುಗಳ ಭಾಗವಾಗಿದ್ದಾರೆ. ಐಪಿಸಿಯ ಸೆಕ್ಷನ್ 377, ಆಧಾರ್ ಯೋಜನೆಯ ಸಿಂಧುತ್ವ ಮತ್ತು ಶಬರಿಮಲೆ ಸಮಸ್ಯೆ ಹಾಗೂ ಸಲಿಂಗ ಸಂಬಂಧ ಕುರಿತು ನೀಡಲಾದ ನಿರ್ಣಾಯಕ ತೀರ್ಪುಗಳಲ್ಲಿ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅತ್ಯಂತ ಮಹತ್ವದ ಪಾತ್ರ ನಿರ್ವಹಿಸಿದ್ದಾರೆ.

ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಜನರು ಎದುರಿಸುತ್ತಿರುವ ಸಂಕಷ್ಟಗಳನ್ನು ನಿವಾರಿಸಲು ನ್ಯಾಯಮೂರ್ತಿ ಚಂದ್ರಚೂಡ್ ನೇತೃತ್ವದ ಪೀಠವು ಹಲವಾರು ಆದೇಶಗಳನ್ನು ನೀಡಿತ್ತು. ತೀರಾ ಇತ್ತೀಚೆಗೆ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು, ವೈದ್ಯಕೀಯ ಮುಕ್ತಾಯದ (MTP) ಕಾಯಿದೆಯ ವ್ಯಾಪ್ತಿಯನ್ನು ವಿಸ್ತರಿಸಿದ ಪೀಠದ ಭಾಗವಾಗಿದ್ದರು.

ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು ಅತೀ ದೀರ್ಘಾವಧಿ(ಏಳು ವರ್ಷ)ವರೆಗೆ ಭಾರತದ ಮುಖ್ಯ ನ್ಯಾಯಮೂರ್ತಿ(ಸಿಜೆಐ)ಯಾಗಿದ್ದ ದಿವಂಗತ ನ್ಯಾಯಮೂರ್ತಿ ವೈವಿ ಚಂದ್ರಚೂಡ್ ಅವರ ಪುತ್ರರು ಎಂಬುದು ವಿಶೇಷ. ಕುತೂಹಲಕಾರಿ ಅಂಶವೆಂದರೆ ನ್ಯಾಯಮೂರ್ತಿ ವೈವಿ ಚಂದ್ರಚೂಡ್ ನೇತೃತ್ವದ ಪೀಠ ನೀಡಿದ್ದ ತೀರ್ಪುಗಳನ್ನು, ನ್ಯಾ. ಡಿವೈ ಚಂದ್ರಚೂಡ್ ಅವರು ಎರಡು ಬಾರಿ ರದ್ದುಗೊಳಿಸಿದ್ದಾರೆ.




