ಬೆಂಗಳೂರು: ಸಚಿವ ಸಂಪುಟಕ್ಕೆ ಕೆ.ಎಸ್.ಈಶ್ವರಪ್ಪ ಅವರನ್ನ ಪುನಃ ಸೇರಿಸಿಕೊಳ್ಳುವಂತೆ ಕುರುಬ ಸಮುದಾಯದ ಹಿರಿಯ ಮುಖಂಡ ಮುಕುಡಪ್ಪ ರಾಜ್ಯ ಸರ್ಕಾರ ಮತ್ತು ಸಿಎಂ ಬಸವರಾಜ ಬೊಮ್ಮಾಯಿ ಅವರನ್ನ ಒತ್ತಾಯಿಸಿದರು. ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿದ ಕುರುಬಸಮುದಾಯದ ಮುಖಂಡರು, ಕೆ.ಎಸ್.ಈಶ್ವರಪ್ಪ ಅವರನ್ನ ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಮತ್ತು ಸಭಾಪತಿ ರಘುನಾಥ್ ರಾವ್ ಮಲ್ಕಾಪುರೆ ಅವರು ಸಭಾಪತಿ ಆಗಿ ಮುಂದುವರೆಯ ಬೇಕು ಎಂದು ಆಗ್ರಹಿಸಿದ ಅವರು, ಕುರುಬ ಸಮಾಜ ಈಗಾಗಲೇ ಬಿಜೆಪಿ ಪರವಾದ ಒಲವು ವ್ಯಕ್ತಪಡಿಸಿದೆ.
ಈಶ್ವರಪ್ಪ ಅವರು ಮೂರು ಬಾರಿ ಬಿಜೆಪಿ ಅಧ್ಯಕ್ಷರಾಗಿ ರಾಜ್ಯ ಮೂಲೆ ಮೂಲೆ ಓಡಾಡಿ ಬಿಜೆಪಿ ಪಕ್ಷವನ್ನು ಕಟ್ಟಿ ಬೆಳೆಸಿದ್ದಾರೆ. ಹಿಂದುಳಿದ ವರ್ಗದವರಾದ ಕುರುಬರು ಎಲ್ಲಾ ಕ್ಷೇತ್ರಗಳಲ್ಲೂ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜ್ಯದ 194 ಕ್ಷೇತ್ರಗಳಲ್ಲಿ ಕುರುಬ ಸಮುದಾಯದ ಬಲವಿದೆ. ಹೀಗಾಗಿ ಬಿಜೆಪಿ ಸರ್ಕಾರ ನಮ್ಮ ನಾಯಕರಿಗೆ ಉತ್ತಮ ಅವಕಾಶ ನೀಡಿದರೆ ಬಿಜೆಪಿ ಪಕ್ಷಕ್ಕೆ ಹೆಚ್ಚು ಬಲ ಬಂದಂತಾಗುತ್ತದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಅಲ್ಲದೆ 11 ನೇ ತಾರೀಖು ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಕನಕದಾಸರ ಪ್ರತಿಮೆಗೆ ಮಾಲಾರ್ಪಣೆ ಮಾಡಬೇಕು ಎಂದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದೆ ಕುರುಬ ಸಮುದಾಯ ಇದ್ದಾರೆ ಎಂಬುದು ತಪ್ಪು ಕಲ್ಪನೆ. ಜನ ಸೇರಿಸುವುದರಿಂದ ಬಲ ಇದೆ ಎಂದಲ್ಲ. ಇಂದಿರಾಗಾಂಧಿ ಸಮಾವೇಶಕ್ಕೂ ಜನ ಸೇರಿದ್ದರು ಆದ್ರೆ ಅವರು ಚುನಾವಣೆಯಲ್ಲಿ ಸೋತಿದ್ದರು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದವರು ಏಕೆ ಮೈಸೂರಿನಲ್ಲಿ ಚುನಾವಣೆಯಲ್ಲಿ ಸೋತರು. ಸಿದ್ದರಾಮಯ್ಯ ಇದ್ದರೆ ಕಾಂಗ್ರೆಸ್ ಕುರುಬರು ಓಟ್ ಹಾಕ್ತಾರೆ ಎಂದು ಅವರ ಭ್ರಮೆಯಲ್ಲಿದ್ದಾರೆ ಎಂದು ಮುಕುಡಪ್ಪ ಹೇಳಿದರು.

ಇದೇ ವೇಳೆ ಮಾತನಾಡಿದ ಕುರುಬ ಸಂಘದ ನಿರ್ದೇಶಕ ಟಿ ಬಿ ಬಳಗಾವಿ, ನಮ್ಮ ಕುರುಬ ಸಮಾಜವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು, ಕೆ.ಎಸ್.ಈಶ್ವರಪ್ಪ ಅವರು ರಾಜ್ಯದ ಎಲ್ಲೆಡೆ ಬೆಂಬಲಿಗರನ್ನು ಹೊಂದಿದ್ದಾರೆ. ಬಿಜೆಪಿ ಪಕ್ಷದ ಪರವಾದ ಅಲೆ ಈಗಾಗಲೇ ಸೃಷ್ಟಿಯಾಗಿದೆ. ಹೀಗಿರುವಾಗ ಕುರುಬ ಸಮುದಾಯದ ನಾಯಕರನ್ನು ಸಂಪುಟದಲ್ಲಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು. ಜೊತೆಗೆ ಸಭಾಪತಿ ಆಗಿರುವ ಮಲ್ಕಾಪುರೆ ಅವರು ಅದೇ ಸ್ಥಾನದಲ್ಲಿ ಮುಂದುವರಿಯಬೇಕು. ನಮ್ಮ ಸಮಾಜದಲ್ಲಿ ಮೊದಲ ಸಭಾಪತಿ ಮಲ್ಕಾಪುರೆ, ಹೀಗಾಗಿ ಅವರನ್ನೇ ಸಭಾಪತಿ ಆಗಿ ಮುಂದುವರಿಸಬೇಕು ಎಂದು ಸರ್ಕಾರವನ್ನು ಟಿ.ಬಿ. ಬಳಗಾವಿ ಒತ್ತಾಯಿಸಿದರು..




