ಸಿಡ್ನಿ : ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಇಂದು ನಡೆದ ಪಂದ್ಯದಲ್ಲಿ ಐಸಿಸಿ ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಬಲಿಷ್ಠ ನ್ಯೂಜಿಲ್ಯಾಂಡ್ ತಂಡವನ್ನು ಮಣಿಸುವ ಮೂಲಕ ಪಾಕಿಸ್ತಾನ ಟಿ20 ವಿಶ್ವಕಪ್ ಫೈನಲ್ ಗೆ ಪ್ರವೇಶಿಸಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ನ್ಯೂಜಿಲ್ಯಾಂಡ್ ತಂಡ 153 ರನ್ ಗಳ ಸಾಧಾರಣ ಮೊತ್ತವನ್ನು ಕಲೆಹಾಕಿತ್ತು. ನ್ಯೂಜಿಲ್ಯಾಂಡ್ ತಂಡದ ಮೊತ್ತವನ್ನ ಬೆನ್ನಟ್ಟಿದ ಪಾಕಿಸ್ತಾನ ಇನ್ನು 5ಎಸೆತ ಬಾಕಿ ಇರುವಂತೆ 153 ರನ್ ಪೇರಿಸಿ ಗೆಲುವಿನ ನಗೆ ಬೀರಿದೆ.

ಪಾಕಿಸ್ತಾನ ಪರ ಆರಂಭಿಕರಾಗಿ ಕಣಕ್ಕಿಳಿದ ಮೊಹಮ್ಮದ್ ರಿಜ್ವಾನ್ ಮತ್ತು ಬಾಬರ್ ಅಜಾಂ ಅತ್ಯುತ್ತಮ ಆರಂಭ ಒದಗಿಸಿಕೊಟ್ಟರು. ಮೊಹಮ್ಮದ್ ರಿಜ್ವಾನ್ 57 ರನ್ ಬಾರಿಸಿದ್ದರೆ ಬಾಬರ್ ಅಜಾಂ 53 ರನ್ ಗಳಿಸಿ ಔಟಾದರು. ನಂತರ ಬಂದ ಮೊಹಮ್ಮದ್ ಹ್ಯಾರಿಸ್ 30 ಹಾಗೂ ಶಾನ್ ಮಸೂದ್ ಅಜೇಯ 3 ರನ್ ಬಾರಿಸಿದ್ದಾರೆ. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ನ್ಯೂಜಿಲ್ಯಾಂಡ್ ನಿಗದಿತ ಓವರ್ ನಲ್ಲಿ 4 ವಿಕೆಟ್ ನಷ್ಟಕ್ಕೆ 152 ರನ್ ಪೇರಿಸಿತ್ತು.

ನ್ಯೂಜಿಲ್ಯಾಂಡ್ ಪರ ಫಿನ್ ಅಲೆನ್ 4, ಡೆವೊನ್ ಕಾನ್ವೇ 21, ಕೇನ್ ವಿಲಿಯಮ್ಸನ್ 46, ಗ್ಲೆನ್ ಫಿಲಿಪ್ಸ್ 6 ಡೇರಿಲ್ ಮಿಚೆಲ್ ಅಜೇಯ 53 ಜೇಮ್ಸ್ ನೀಶಮ್ ಅಜೇಯ 16 ರನ್ ಪೇರಿಸಿದ್ದಾರೆ. ಪಾಕ್ ಪರ ಬೌಲಿಂಗ್ ನಲ್ಲಿ ಶಾಹೀನ್ ಶಾ ಆಫ್ರಿದಿ 2 ಮತ್ತು ಮೊಹಮ್ಮದ್ ನವಾಜ್ 1 ವಿಕೆಟ್ ಪಡೆದಿದ್ದಾರೆ.




