ಬೆಳಗಾವಿ: ನಿಪ್ಪಾಣಿಯಲ್ಲಿ ಜರುಗಿದ ಮಾನವ ಬಂಧುತ್ವ ವೇದಿಕೆ ಕರ್ನಾಟಕ ಕಾರ್ಯಕ್ರಮದಲ್ಲಿ ನಾನು ಮಾತನಾಡಿದ್ದ ಹಿಂದೂ ಶಬ್ದದದ ಬಳಕೆ ಕುರಿತು ನನ್ನ ತೇಜೋವಧೆ ಮಾಡಲಾಗುತ್ತಿದೆ. ನನ್ನ ಹೇಳಿಕೆ ಕುರಿತು ಸತ್ಯಾಸತ್ಯತೆ ತಿಳಿಯಲು ತನಿಖೆ ಸಮಿತಿ ರಚಿಸುವಂತೆ ಸಿಎಂ ಬಸವರಾಜ ಬೊಮ್ಮಾಯಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಪತ್ರ ಬರೆದು ಮಾನವಿ ಮಾಡಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಸತೀಶ ಜಾರಕಿಹೊಳಿ, ಹಿಂದೂ ಶಬ್ದ ಪರ್ಷಿಯನ್ ಭಾಷೆಯಿಂದ ಬಂದಿದೆ. ಇದು ಭಾರತ ದೇಶಕ್ಕೆ ಹೇಗೆ ಬಂತು? ಹಲವಾರು ಲೇಖನಗಳಲ್ಲಿ ಹಿಂದೂ ಎಂಬ ಪದದ ಅರ್ಥ ಕೆಟ್ಟದಾಗಿದೆ ಎಂದು ಬರೆದಿರುತ್ತಾರೆ ಅಂತಾ ಹೇಳಿರುತ್ತೇನೆ. ಇದು ಸಾರ್ವಜನಿಕವಾಗಿ ಚರ್ಚೆ ಆಗಬೇಕಾಗಿರುವುದು ಬಹಳ ಅವಶ್ಯಕತೆ ಇದೆ ಎಂದು ಸಹ ಹೇಳಿರುತ್ತೇನೆ.ಇದನ್ನು ನಾನು ವಿಕಿಪಿಡಿಯಾ, ಪುಸ್ತಕಗಳು, ಶಬ್ದಕೋಶಗಳು ಮತ್ತು ಇತಿಹಾಸಕಾರರ ಬರಹಗಳ ಉಲ್ಲೇಖದ ಮೇಲೆ ಈ ನನ್ನ ಭಾಷಣ ಆಧಾರಿತವಾಗಿರುತ್ತದೆ. ಕೆಲವು ಪಟ್ಟಬದ್ಧ ಹಿತಾಸಕ್ತಿಗಳು ನನ್ನನ್ನು ಹಿಂದೂ ವಿರೋಧಿ ಎಂದು ಬಿಂಬಿಸಲು ಹೊರಟಿರುತ್ತಾರೆ.

ಜೊತೆಗೆ ನನಗೆ ತೇಜೋವಧೆ ಹಾಗೂ ಹಾನಿವುಂಟು ಮಾಡುವ ವ್ಯವಸ್ಥಿತ ಪಿತೂರಿ ನಡೆಸಿದ್ದಾರೆ. ಮೇಲಿನ ಎಲ್ಲ ಅಂಶಗಳನ್ನು ಪರಿಶೀಲಿಸಲು ಮತ್ತು ನೈಜ ಸ್ಥಿತಿಯನ್ನು ವಿವರಿಸದೇ ಈ ಅವಾಂತರ ಸೃಷ್ಠಿಸಿದವರ ಮೇಲೆ ತನಿಖೆ ಮಾಡುವಂತೆ ವಿನಂತಿಸಿಕೊಳ್ಳುತ್ತೇನೆ ಸಿಎಂ ಬಸವರಾಜ ಬೊಮ್ಮಾಯಿಗೆ ಸತೀಶ ಜಾರಕಿಹೊಳಿ ಪತ್ರ ಬರೆದಿದ್ದಾರೆ. ಇದಲ್ಲದೇ ನನ್ನ ಹೇಳಿಕೆ ಕುರಿತಾದ ತನಿಖೆ ನಡೆಸಲು ತಕ್ಷಣ ತನಿಖಾ ಸಮಿತಿ ರಚಿಸಬೇಕು.
ನಿಪ್ಪಾಣಿಯಲ್ಲಿ ಜರುಗಿದ ಮಾನವ ಬಂಧುತ್ವ ವೇದಿಕೆಯ ಮನೆ ಮನೆಗೆ ಬುದ್ಧ, ಬಸವ, ಅಂಬೇಡ್ಕರ ಕಾರ್ಯಕ್ರಮದಲ್ಲಿ ನಾನು ಮಾತನಾಡಿದ ಆ ಒಂದು ಮಾತು ವಿವಾದಕ್ಕಿಡಾಗಿದೆ. ಅಲ್ಲದೇ ಅದನ್ನು ತಿರುಚಿ ಅಪಪ್ರಚಾರ ಗೊಳಿಸುತ್ತಿರುವುದರಿಂದ, ಸಾರ್ವಜನಿಕರಲ್ಲಿ ಗೊಂದಲ ಸೃಷ್ಠಿಯಾಗಬಾರದು ಎಂಬ ಸದುದ್ದೇಶದಿಂದ ಅಂದು ನಾನು ಹೇಳಿದ್ದ ಆ ಹೇಳಿಕೆಯನ್ನು ಹಿಂಪಡೆಯುತ್ತಿದ್ದೇನೆ. ಮತ್ತು ಆ ಹೇಳಿಕೆಯಿಂದ ಯಾರಿಗಾದರೂ ಮನಸ್ಸಿಗೆ ನೋವಾಗಿದ್ದಲ್ಲಿ ವಿಷಾದಿಸುತ್ತೇನೆ ಎಂದು ತಿಳಿಸಿದ್ದಾರೆ.




