Siddaramaiah in Kolar : ಕೋಲಾರ ಕ್ಷೇತ್ರದಿಂದ ಸ್ಪರ್ಧೆಮಾಡುವಂತೆ ಒತ್ತಡವಿದೆ; ಸಿದ್ದರಾಮಯ್ಯ..!

ಕೋಲಾರ: ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಇವತ್ತು ಕೋಲಾರ ನಗರಕ್ಕೆ ಭೇಟಿ ನೀಡಿ ದೇವಾಲಯ, ಚರ್ಚ್ ಹಾಗೂ ಮಸೀದಿಗೆ ಭೇಟಿ ನೀಡಿದ್ದಾರೆ. ಸಿದ್ದರಾಮಯ್ಯ ಅವರಿಗೆ ಅದ್ಧೂರಿ ಸ್ವಾಗತ ಕೋರಲಾಗಿದೆ.

ಕೋಲಾರಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ ಚರ್ಚ್ ಗೆ ಬಂದಿದ್ದ ಸಿದ್ದರಾಮಯ್ಯ ಅವರು, ನಾನು ಬದಾಮಿ ಕ್ಷೇತ್ರದ ಶಾಸಕನಾಗಿದ್ದೇನೆ. ಅಲ್ಲೂ ಮತ್ತೆ ಸ್ಪರ್ಧಿಸಬೇಕೆಂಬ ಒತ್ತಡ ಇದೆ. ಆದ್ರೆ ಕೋಲಾರದಲ್ಲಿ ಬಹಳ ತೀವ್ರವಾದ ಒತ್ತಡವಿದೆ. ಇದರ ಜೊತೆಗೆ ವರುಣಾ ಕ್ಷೇತ್ರದಿಂದಲೂ ಒತ್ತಡವಿದೆ. ಆದರೆ ನಾನು ಕೋಲಾರದ ಜನರ ಮೇಲೆ ಅಪಾರವಾದ ಪ್ರೀತಿ ಮತ್ತು ಗೌರವವನ್ನು ಹೊಂದಿದ್ದೇನೆ ಎಂದು ಹೇಳಿದ್ರು. ಕೋಲಾರದಲ್ಲಿ ಸ್ಪರ್ಧಿಸುವಂತೆ ಎಲ್ಲರೂ ಒತ್ತಾಯಿಸುತ್ತಿರುವುದರಿಂದ ಜಿಲ್ಲೆಯ ಎಲ್ಲಾ ಮುಖಂಡರು ಹಾಗೂ ಜನತೆಗೆ ಅಭಾರಿಯಾಗಿದ್ದೇನೆ. ನಾನು 5 ವರ್ಷ ಮುಖ್ಯಮಂತ್ರಿಯಾಗಿದ್ದಾಗ ಎಲ್ಲಾ ವರ್ಗದವರಿಗೆ ಕಾರ್ಯಕ್ರಮಗಳನ್ನು ಕೊಡುವ ಕೆಲಸ ಮಾಡಿದ್ದೇವೆ. ಎಂದೂ ಕೂಡ ಧರ್ಮದ ಹಾಗೂ ಜಾತಿ ಆಧಾರದ ಮೇಲೆ ರಾಜಕಾರಣ ಮಾಡಿದವರಲ್ಲ ಎಂದಿದ್ದಾರೆ.

ದೇಶದಲ್ಲಿ ಹಿಂದು, ಮುಸ್ಲಿಂ, ಕ್ರಿಶ್ಚಿಯನ್, ಬೌದ್ಧರು, ಜೈನರಿದ್ದಾರೆ. ಈ ದೇಶ ಬಹುತ್ವ ಇರುವಂತದ್ದು. ಅನೇಕ ಭಾಷೆ, ಧರ್ಮ, ಜಾತಿಗಳು ಇರುವ ಬಹುತ್ವದ ದೇಶ. ಯಾವುದೇ ಜಾತಿ, ಧರ್ಮಕ್ಕೆ ಸೇರಿದ್ರೂ ಅದಕ್ಕೂ ಮೊದಲು ನಾವು ಮನುಷ್ಯರು. ಮನುಷ್ಯ ಇನ್ನೊಬ್ಬ ಮನುಷ್ಯನನ್ನು ಪ್ರೀತಿಸಬೇಕು. ಅದೇ ಮನುಷತ್ವ.

ಬಿಜೆಪಿಯಿಂದ ಜಾತಿ, ಧರ್ಮದ ಆಧಾರದಲ್ಲಿ ವಿಭಜನೆ

ಬಿಜೆಪಿ ಮತ್ತು ಬೇರೆ ಪಕ್ಷದವರು ಧರ್ಮದ ಆಧಾರದ ಮೇಲೆ, ಜಾತಿ ಆಧಾರದ ಮೇಲೆ ಜನರನ್ನು ವಿಭಜನೆ ಮಾಡುತ್ತಾರೆ. ಕಾಂಗ್ರೆಸ್ ಮಾತ್ರ ಜಾತ್ಯಾತೀತ ಮೇಲೆ ನಂಬಿಕೆ ಇಟ್ಟುಕೊಂಡಿರುವ ಪಕ್ಷ. ಬಹುತ್ವದಲ್ಲಿ ನಂಬಿಕೆ ಇಟ್ಟುಕೊಂಡಿರುವ ಪಕ್ಷ. ಎಲ್ಲಾ ಜಾತಿ, ಧರ್ಮದವರನ್ನು ಸಮಾನವಾಗಿ ಕಾಣುವಂತ ರಾಜಕೀಯ ಪಕ್ಷ ಇದ್ದರೆ ಅದು ಕಾಂಗ್ರೆಸ್ ಪಕ್ಷ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ದೇಶದಲ್ಲಿ 135 ಕೋಟಿ ಜನ ಇದ್ದಾರೆ. ಕರ್ನಾಟಕದಲ್ಲಿ 7 ಕೋಟಿ ಜನರಿದ್ದಾರೆ. ನಾವೆಲ್ಲರೂ ಕೂಡ ಒಂದೇ ತಾಯಿಯ ಮಕ್ಕಳಂತೆ ಬದುಕುವ ವಾತಾವರಣ ನಿರ್ಮಾಣ ಮಾಡಬೇಕು. ನಾನು ಕೂಡ ಜಾತ್ಯಾತೀತದ ಮೇಲೆ ನಂಬಿಕೆ ಇಟ್ಚುಕೊಂಡಿರುವಂತವನು. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನೀಡಿರುವ ಸಂವಿಧಾನದ ಮೇಲೆ ಎಲ್ಲರೂ ನಡೆಯಬೇಕು ಎಂದರು.

ಕೆಹೆಚ್ ಮುನಿಯಪ್ಪ ಅವರು ಗುಜರಾತ್ ನಲ್ಲಿ ಇರುವುದರಿಂದ ಕೆಹೆಚ್ ಅಭಿಮಾನಿಗಳು ಕೋಲಾರದ ಅಂಬೇಡ್ಕರ್ ಪ್ರತಿಮೆ ಎದುರು ಸಿದ್ದರಾಮಯ್ಯ ಅವರನ್ನು ಸ್ವಾಗತಿಸಿದರು. ಈ ವೇಳೆ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.

ಕೆಹೆಚ್ ಮುನಿಯಪ್ಪ ಅವರ ಸೂಚನೆ ಮೇರೆಗೆ ಸಿದ್ದರಾಮಯ್ಯ ಅವರನ್ನು ಸ್ವಾಗತಿಸಲು ಇಲ್ಲಿಗೆ ಬಂದಿದ್ದೇವೆ ಎಂದು ಅವರ ಅಭಿಮಾನಿಗಳು ಹೇಳಿದ್ರು. ಕಳೆದ ಕೆಲವು ದಿನಗಳಿಂದ ಕೇಂದ್ರ ಮಾಜಿ ಸಚಿವರೂ ಆಗಿರುವ ಕೆಹೆಚ್ ಮುನಿಯಪ್ಪ ಅವರು ಸಿದ್ದರಾಮಯ್ಯ ಅವರೊಂದಿಗೆ ಅಂತರವನ್ನು ಕಾಪಾಡಿಕೊಂಡಿದ್ದರು.

More News