ಬೆಳಗಾವಿ: ಧರ್ಮ, ಜಾತಿಗಳ ಮಧ್ಯೆ ರಾಜಕಾರಣಿಗಳು ಜಗಳ ಹಚ್ಚುತ್ತಿದ್ದಾರೆ ಎಂದು ರಂಭಾಪುರಿ ಸ್ವಾಮೀಜಿ ಡಾ.ವೀರಸೋಮೇಶ್ವರ ಶಿವಾಚಾರ್ಯ ಶ್ರೀಗಳು ಆರೋಪ ಮಾಡಿದ್ದಾರೆ.
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪಟ್ಟಣದಲ್ಲಿ ಮಾತಾಡಿದ ಅವರು, ಕೆಲ ರಾಜಕಾರಣಿಗಳಿಂದ ಧರ್ಮ ಮತ್ತು ಜಾತಿಗಳ ಮಧ್ಯೆ ವ್ಯಾಪಕ ಸಂಘರ್ಷ ಹುಟ್ಟು ಹಾಕುವ ಕೆಲಸ ನಡೆಯುತ್ತಿದೆ ಎಂದು ಆರೋಪಿಸಿದರು.
‘ರಾಜಕೀಯ ಧುರೀಣರು ಸರ್ವ ಜನಾಂಗದ ಶ್ರೇಯೋಭಿವೃದ್ಧಿಗೆ ಗಮನ ಹರಿಸುತ್ತಿಲ್ಲ. ಶಾಂತಿ ಮತ್ತು ಸೌಹಾರ್ದತೆ ಬೆಳೆಸದೆ ಅಧಿಕಾರದ ಗದ್ದುಗೆಗಾಗಿ ಜಾತಿಗಳ ಮಧ್ಯೆ ವಿಷ ಬೀಜ ಬಿತ್ತುವ ಕೆಲಸ ನಡೆಯುತ್ತಿದೆ. ಜನರ ಭಾವನೆಗಳನ್ನು ಕೆರಳಿಸುವಂತ ಕೆಲಸವನ್ನು ರಾಜಕಾರಣಿಗಳು ಮಾಡುತ್ತಿದ್ದಾರೆ.

ಇಂತಹ ಕೃತ್ಯವನ್ನು ಯಾರೂ ಮಾಡಬಾರದೆಂಬ ಸಂದೇಶ ನೀಡಲು ಇಚ್ಚೀಸುತ್ತೇವೆ ಅಂತಾ ಹೇಳಿದರು. ಭಾರತೀಯ ಸಂಸ್ಕೃತಿಯಲ್ಲಿ ಎಲ್ಲರೂ ಒಂದಾಗಿ ಬಾಳಬೇಕು, ಶಾಂತಿ, ನೆಮ್ಮದಿಯಿಂದ ಬದುಕು ಕಟ್ಟಿಕೊಳ್ಳಬೇಕು. ಪ್ರತಿಯೊಬ್ಬರೂ ತಮ್ಮ, ತಮ್ಮ ಧರ್ಮಗಳಲ್ಲಿ ನಿಷ್ಠೆ ಹೊಂದಬೇಕು.
ಪರಧರ್ಮದ ಬಗ್ಗೆ ಸಂಹಿಷ್ಣತಾ ಮನೋಭಾವ ಬೆಳೆಸಿಕೊಳ್ಳಬೇಕು. ಆಗ ಮಾತ್ರ ಧರ್ಮ, ಜಾತಿಗಳ ಮಧ್ಯೆ ಸಂಘರ್ಷ ತಡೆಯಲು ಸಾಧ್ಯ. ಸ್ವಾಭಿಮಾನದ ಕೊರತೆಯಿಂದಾಗಿ ಎಲ್ಲ ರಂಗಗಳಲ್ಲಿ ಅನೇಕ ಸಂಘರ್ಷ ಉಂಟಾಗುತ್ತಿವೆ ಸ್ವಾಭಿಮಾನದ ಜೀವನ ಪ್ರತಿಯೊಬ್ಬರದ್ದಾಗಬೇಕು ಎಂದು ಸ್ವಾಮೀಜಿ ಹೇಳಿದರು.




