ಇಂಡೋನೇಷ್ಯಾದ ಬಾಲಿಯಲ್ಲಿ ನಡೆದ ಜಿ20 ಶೃಂಗಸಭೆಯ ನಾಯಕರ ಘೋಷಣೆಯ ಮಾತುಕತೆಯಲ್ಲಿ ಭಾರತವು “ಪ್ರಮುಖ ಪಾತ್ರ” ವಹಿಸಿದೆ ಎಂದು ವಿಶ್ವದ ದೊಡ್ಡಣ್ಣ ಹೇಳಿದೆ. ಮುಂದಿನ ವರ್ಷದ ಜಿ20 ಶೃಂಗಸಭೆಗೆ ಭಾರತ ಆತಿಥ್ಯ ವಹಿಸಲಿದ್ದು, ಭಾರತದ ಅಧ್ಯಕ್ಷತೆಯನ್ನು ವಾಷಿಂಗ್ಟನ್ ಸಂಪೂರ್ಣವಾಗಿ ಬೆಂಬಲಿಸುತ್ತದೆ ಎಂದು ಅಮೆರಿಕ ತಿಳಿಸಿದೆ.
ಯುಎಸ್ ಅಧ್ಯಕ್ಷ ಜೋ ಬಿಡೆನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಭೇಟಿಯ ಕುರಿತು ಪ್ರಶ್ನೆಯನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಮೋದಿ ಮತ್ತು ಇಂಡೋನೇಷ್ಯಾ ಅಧ್ಯಕ್ಷ ಜೋಕೊ ವಿಡೋಡೊ ಅವರೊಂದಿಗಿನ ಬಿಡೆನ್ ಅವರ ತ್ರಿಪಕ್ಷೀಯ ಸಭೆಯನ್ನು ಉಲ್ಲೇಖಿಸಿ, ಶ್ವೇತಭವನದ ವಕ್ತಾರೆ ಕರೀನ್ ಜೀನ್-ಪಿಯರ್ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

“ಶೃಂಗಸಭೆಯ ಘೋಷಣೆಯ ಮಾತುಕತೆಯಲ್ಲಿ ಭಾರತವು ಪ್ರಮುಖ ಪಾತ್ರವನ್ನು ವಹಿಸಿದೆ. ‘ಇಂದಿನ ಯುಗವು ಯುದ್ಧದಿಂದ ಕೂಡಿರಬಾರದು’ ಎಂದು ಪ್ರಧಾನಿ ಮೋದಿ ಸ್ಪಷ್ಟಪಡಿಸಿದ್ದಾರೆ. ಇದು ಪ್ರಧಾನಿಯವರ ನೇರ ಉಲ್ಲೇಖವಾಗಿದೆ,” ಎಂದು ಬಿಡೆನ್ ಉಲ್ಲೇಖಿಸಿ ಮಾಧ್ಯಮ ವಕ್ತಾರೆ ಕರೀನ್ ಜೀನ್-ಪಿಯರ್ ತಿಳಿಸಿದ್ದಾರೆ.
ಭಾರತವು ಮುಂಬರುವ ಜಿ20 ಶೃಂಗಸಭೆಯ ಆತಿಥ್ಯ ವಹಿಸಿಕೊಳ್ಳಲಿದೆ. ಇದೇ ಡಿಸೆಂಬರ್ 1ರಿಂದ ಭಾರತಕ್ಕೆ ಜಿ20 ಶೃಂಗಸಭೆಯ ಅಧ್ಯಕ್ಷ ಸ್ಥಾನ ದೊರಕಲಿದ್ದು, ಮುಂದಿನ ವರ್ಷದ ಜಿ20 ಶೃಂಗಸಭೆ ಜಿ20 ಸದಸ್ಯರು ಭಾರತಕ್ಕೆ ಆಗಮಿಸಲಿದ್ದಾರೆ. ಭಾರತದ ಆತಿಥ್ಯಕ್ಕಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಬಾಲಿಯಲ್ಲಿ ಜಾಗತಿಕ ನಾಯಕರನ್ನು ಆಹ್ವಾನಿಸಿದ್ದಾರೆ. ಇಂಡೋನೇಷ್ಯಾದ ಬಾಲಿಯಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಜಾಗತಿಕ ನಾಯಕರು ಪಾಲ್ಗೊಂಡಿದ್ದಾರೆ.

ಭಾರತವು ಮುಂದಿನ ಶೃಂಗಸಭೆಯನ್ನು 2023ರ ಸೆಪ್ಟೆಂಬರ್ ತಿಂಗಳಲ್ಲಿ ನವದೆಹಲಿಯಲ್ಲಿ ಆಯೋಜಿಸುತ್ತಿದೆ. ಬಹುಪಕ್ಷೀಯ ಹಣಕಾಸು ಸಂಸ್ಥೆಗಳ ಡಿಜಿಟಲ್ ಸಮಸ್ಯೆಗಳು ಮತ್ತು ಸುಧಾರಣೆಗಳು ಭಾರತದ ಜಿ20 ಆತಿಥ್ಯದ ಆದ್ಯತೆಯ ಕ್ಷೇತ್ರಗಳಾಗಿವೆ. ಮಹತ್ವದ ಶೃಂಗಸಭೆಯ ಹಿನ್ನೆಲೆಯಲ್ಲಿ ಭಾರತವು ಈ ವರ್ಷದ ಡಿಸೆಂಬರ್‌ನಿಂದಲೇ 200ಕ್ಕೂ ಹೆಚ್ಚು ಪೂರ್ವ ಸಿದ್ಧತಾ ಮತ್ತು ಇತರೆ ಸಭೆಗಳನ್ನು ನಡೆಸಲಿದೆ. ಈ ಸಭೆಗಳನ್ನು ದೇಶದ ವಿವಿಧೆಡೆ ಆಯೋಜಿಸಲು ಸೂಕ್ತವಾದ ಸ್ಥಳಗಳ ಕುರಿತು ಅನ್ವೇಷಣೆಯೂ ಆರಂಭವಾಗಿದೆ. ಅಂದರೆ ಕನ್ಯಾಕುಮಾರಿಯಿಂದ ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದವರೆಗೆ ವಿವಿಧೆಡೆ ಇಂತಹ ಸಭೆಗಳನ್ನು ಆಯೋಜಿಸಲಾಗುತ್ತದೆ.




