IND v/s NZ Series: ಇಂದು 3ನೇ T20: ಭಾರತಕ್ಕೆ ಸರಣಿ ಗೆಲುವಿನ ತವಕ: ಕಿವೀಸ್‌ಗೆ ಪ್ರತಿಷ್ಠೆಯ ಪಂದ್ಯ

ನ್ಯೂಜಿ಼ಲೆಂಡ್‌ನಲ್ಲಿ ನಡೆಯುತ್ತಿರುವ ಟಿ20 ಸರಣಿಯ ಮೂರನೇ ಹಾಗೂ ಕೊನೆಯ ಟಿ20 ಪಂದ್ಯ ಇಂದು ನಡೆಯಲಿದೆ. ನೇಪಿಯರ್‌ನಲ್ಲಿ ನಡೆಯುವ ಅಂತಿಮ ಪಂದ್ಯಕ್ಕೆ ಎರಡು ತಂಡಗಳು ಸಜ್ಜಾಗಿವೆ.
ಸರಣಿಯ ಮೊದಲ ಪಂದ್ಯ ಮಳೆಯಿಂದಾಗಿ ರದ್ದಾದರೆ. ಮೌಂಟ್‌ ಮೌಂಗನ್ಯುಯಿ ಅಂಗಳದಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸುವ ಮೂಲಕ ಸರಣಿಯಲ್ಲಿ 1-0 ಮುನ್ನಡೆ ಕಾಯ್ದುಕೊಂಡಿದೆ. ಹೀಗಾಗಿ ಇಂದು ನಡೆಯುವ ಕೊನೆಯ ಪಂದ್ಯವನ್ನು ಗೆದ್ದು ಸರಣಿ ಮುಡಿಗೇರಿಸಿಕೊಳ್ಳುವ ತವಕದಲ್ಲಿ ಟೀಂ ಇಂಡಿಯಾ ಆಟಗಾರರು ಕಾಯುತ್ತಿದ್ದಾರೆ.
ಮತ್ತೊಂದೆಡೆ ಕಳೆದ ಪಂದ್ಯದಲ್ಲಿ ನೀರಸ ಪ್ರದರ್ಶನ ನೀಡುವ ಮೂಲಕ ಸೋಲು ಕಂಡಿರುವ ಕಿವೀಸ್‌ ಅಂತಿಮ ಪಂದ್ಯವನ್ನ ಗೆದ್ದು ಸರಣಿಯಲ್ಲಿ ಸಮಬಲ ಸಾಧಿಸುವ ನಿರೀಕ್ಷೆಯಲ್ಲಿದೆ.
ಎರಡನೇ ಪಂದ್ಯದಲ್ಲಿ ಭಾರತೀಯ ಆಟಗಾರರು ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಎರಡರಲ್ಲೂ ಅತ್ಯುತ್ತಮ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದ್ದರು. ಟೀಂ ಇಂಡಿಯಾ ಪರ ಸೂರ್ಯಕುಮಾರ್‌ ಯಾದವ್‌ ಅಮೋಘ ಶತಕ ಸಿಡಿಸುವ ಮೂಲಕ ತಂಡದ ಗೆಲುವಿನ ಹೀರೋ ಆಗಿ ಮಿಂಚಿದರೆ. ಬೌಲರ್‌ಗಳು ಸಹ ಸಾಂಘಿಕ ಪ್ರದರ್ಶನದಿಂದ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಹೀಗಾಗಿ ಮೂರನೇ ಪಂದ್ಯದಲ್ಲೂ ಟೀಂ ಇಂಡಿಯಾ ಗೆಲುವಿನ ಫೇವರೆಟ್‌ ಎನಿಸಿದೆ. ಆದರೆ ಬ್ಯಾಟಿಂಗ್‌ ವಿಭಾಗದಲ್ಲಿ ಸೂರ್ಯಕುಮಾರ್‌ ಹಾಗೂ ಇಶಾನ್‌ ಕಿಶನ್‌ ಹೊರತುಪಡಿಸಿ ಉಳಿದವರಿಂದ ನಿರೀಕ್ಷಿತ ಪ್ರದರ್ಶನ ಬರಲಿಲ್ಲ. ಹೀಗಾಗಿ ಭಾರತೀಯ ಆಟಗಾರರ ಬ್ಯಾಟಿಂಗ್‌ನಲ್ಲಿ ಇನ್ನಷ್ಟು ಬಲಿಷ್ಠ ಪ್ರದರ್ಶನ ನೀಡಬೇಕಾದ ಅಗತ್ಯವಿದೆ.

ಇನ್ನೂ ನ್ಯೂಜಿ಼ಲೆಂಡ್‌ ತಂಡ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಎರಡರಲ್ಲೂ ನಿರೀಕ್ಷಿತ ಆಟವಾಡುವಲ್ಲಿ ವಿಫಲವಾಗಿದೆ. ಎರಡನೇ ಪಂದ್ಯದಲ್ಲಿ ಭಾರತದ ವಿಕೆಟ್‌ಗಳನ್ನು ಪಡೆಯುವಲ್ಲಿ ಕಿವೀಸ್‌ ಬೌಲರ್‌ಗಳು ಯಶಸ್ವಿಯಾದರು, ವಿಶ್ವ ಟಿ20 ಕ್ರಿಕೆಟ್‌ನ ನಂ.1 ಬ್ಯಾಟ್ಸ್‌ಮನ್‌ ಸೂರ್ಯಕುಮಾರ್‌ ಆಟಕ್ಕೆ ಕಡಿವಾಣ ಹಾಕಲು ಸಾಧ್ಯವಾಗಲಿಲ್ಲ. ಅಂತೆಯೇ ಬ್ಯಾಟಿಂಗ್‌ನಲ್ಲಿ ಕೇನ್‌ ವಿಲಿಯಮ್ಸನ್‌ ಹೊರತುಪಡಿಸಿ ಉಳಿದ ಬ್ಯಾಟರ್‌ಗಳು ಜವಾಬ್ದಾರಿಯಿಂದ ಆಟವಾಡದಿರುವುದು ತಂಡದ ಸೋಲಿಗೆ ಕಾರಣವಾಯಿತು.
ಹೀಗಾಗಿ ಕಿವೀಸ್‌ ಆಟಗಾರರು ಮೂರನೇ ಪಂದ್ಯದಲ್ಲಿ ಶ್ರೇಷ್ಠ ಕಮ್‌ ಬ್ಯಾಕ್‌ ಮಾಡುವ ನಿರೀಕ್ಷೆಯಲ್ಲಿದ್ದು, ಇದಕ್ಕಾಗಿ ತಯಾರಿ ಮಾಡಿಕೊಂಡಿದ್ದಾರೆ. ಆದರೆ ಗೆಲುವಿನ ಅಲೆಯಲ್ಲಿರುವ ಭಾರತೀಯ ಆಟಗಾರರು ಇಂದಿನ ಪಂದ್ಯವನ್ನು ಗೆದ್ದು ಸರಣಿ ತಮ್ಮದಾಗಿಸಿಕೊಳ್ಳುವ ಲೆಕ್ಕಾಚಾರದಲ್ಲಿದ್ದಾರೆ.

#team india #newzland #T20 #twenty twenty cricket #today #match #surya kumar yadav #series win

More News