ಬೆಂಗಳೂರು : ಬಿಜೆಪಿಯವರು ಮಾತೆತ್ತಿದ್ರೆ ಹಿಂದೂ ಪರ ಅಂತಾರೆ, ಅವರು ಬೇಕಾಗಿದ್ದೂ ಉಳಿಸಿಕೊಳ್ತಾರೆ, ಬೇಡವಾಗಿದ್ದು ಒಡಿತಾರೆ, ಇದೇನಾ ಹಿಂದೂ ಧರ್ಮದ ರಕ್ಷಣೆ ಎಂದು ಜೆಡಿಎಸ್ ನಾಯಕ ಮಾಜಿ ಸಚಿವ ಹೆಚ್ ಡಿ ರೇವಣ್ಣ ವ್ಯಂಗ್ಯವಾಡಿದ್ದಾರೆ.
ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ನಂಜನಗೂಡು ದೇವಸ್ಥಾನ ಇತಿಹಾಸ ಹೊಂದಿರುವ ಪವಿತ್ರ ಸ್ಥಳ, ನೂರಾರು ವರ್ಷದ ಇತಿಹಾಸವಿದೆ, ಸುಪ್ರೀಂ ಕೋರ್ಟ್ ಆದೇಶ ಪಾಲಿಸಬೇಕು, ಹಾಗಂತ ದೇವಸ್ಥಾನ ಕೆಡವುದು ಸರಿಯಲ್ಲ, ಬೇರೆ ದೇವಸ್ಥಾನ ಕಟ್ಟಿ, ಈ ದೇವಸ್ಥಾನ ತೆಗೆಯಬೇಕಿತ್ತು, ಸ್ಥಳೀಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿತ್ತು ಎಂದು ತಿಳಿಸಿದ್ದಾರೆ.
ಹಾಗೆಯೇ, ರಾತ್ರೋರಾತ್ರಿ ಕೆಡವಿದ್ದು ಸರಿಯಿಲ್ಲ, ಬೇರೆ ವ್ಯವಸ್ಥೆ ಮಾಡಿ ದೇವಸ್ಥಾನ ತೆರವು ಮಾಡಬೇಕಿತ್ತು, ಇದು ರಾಜ್ಯ ಸರ್ಕಾರ ಮಾಡಿಲ್ಲ ಎಂದು ರೇವಣಾಣ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಸಂಸದ ಪ್ರತಾಪ್ ಸಿಂಹ ಹೋರಾಟ ಮಾಡುವ ವಿಚಾರವಾಗಿ ಟೀಕಿಸಿದ ರೇವಣ್ಣ, ಅವರು ಯಾವ ಹೋರಾಟ ಮಾಡ್ತಾರೆ ಗೊತ್ತಿಲ್ಲ ಎಂದರು.
ಜೆಡಿಎಸ್ ಮುಗಿಸೋದಕ್ಕೆ ಯಾರಿದಂಲೂ ಸಾಧ್ಯವಿಲ್ಲ – ಹೆಚ್ ಡಿ ರೇವಣ್ಣ
ಜೆಡಿಎಸ್ ಪಕ್ಷವನ್ನ ಮುಗಿಸೋಕೆ ಯಾರಿಗೂ ಆಗಲ್ಲ, ಜೆಡಿಎಸ್ ಪಕ್ಷ ಹಡಗಲ್ಲ, ಸಬ್ ಮರಿನ್, ಯಾವಾಗ ಬೇಕಾದ್ರೂ ಮೇಲಕ್ಕೆ ಏಳುತ್ತೆ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಹೇಳಿದರು, ಜೆಡಿಎಸ್ ಮುಳಗುವ ದೋಣಿ ಎನ್ನುತ್ತಿದ್ದರು ಕೆಲವರು, ಆದ್ರೆ ಮುಳಗುವಾಗ ಹೇಗೆ ಮೇಲೆತ್ತುವುದು ಗೊತ್ತಿದೆ ಎಂದು ತಿಳಿಸಿದರು.
ಕಲಬುರಗಿ ಪಾಲಿಕೆ ಹೊಂದಾಣಿಕೆ ವಿಚಾರವಾಗಿ ಮಾತನಾಡಿದ ರೇವಣ್ಣ ಈ ವಿಚಾರವನ್ನು ದೇವೇಗೌಡರು, ಕುಮಾರಸ್ವಾಮಿ ನೋಡಿಕೊಳ್ಳುತ್ತಾರೆ, ಅವರೇ ತೀರ್ಮಾನ ಕೈಗೊಳ್ಳುತ್ತಾರೆ ಎಂದು ತಿಳಿಸಿದರು.




