ಹುಬ್ಬಳ್ಳಿ: ಉತ್ತರ ಕರ್ನಾಟಕದ ಆರಾಧ್ಯದೈವ ಎಂದೇ ಖ್ಯಾತಿ ಪಡೆದ ಸಿದ್ಧಾರೂಢರ ಮಠದಲ್ಲಿ ಕಾರ್ತೀಕ ಅಮಾವಾಸ್ಯೆ ಅಂಗವಾಗಿ ಲಕ್ಷ ದೀಪೋತ್ಸವವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಯಿತು.

ಲಕ್ಷಾಂತರ ಭಕ್ತರು ಜ್ಞಾನ ಜ್ಯೋತಿ ಬೆಳಗಿಸು ಸದ್ಗುರು ಶ್ರೀ ಸಿದ್ಧಾರೂಢ ಎಂದು ಪ್ರಾರ್ಥಿಸಿದರು. ಹಾಗೆಯೇ ಎಲ್ಲರ ಮನೆ ಮನ ಬೆಳಗು ನೀ ಎಂದು ಭೂ ಕೈಲಾಸ ಎಂದೇ ಖ್ಯಾತಿ ಪಡೆದ ಆರಾಧ್ಯದೈವರ ದೇಗುಲದಲ್ಲಿ ದೀಪಾರಾಧನೆ ವಿಜ್ರಂಭಣೆಯಿಂದ ನಡೆಯಿತು.

ಎಲ್ಲೆಡೆಯೂ ಓಂ ನಮಃ ಶಿವಾಯ ಓಂಕಾರ ನಾದ ಮಯ ಒಂದೆಡೆಯಾದರೆ, ಇನ್ನೊಂದೆಡೆ ಹುಬ್ಬಳ್ಳಿಯ ಸಿದ್ಧಾರೂಢರ ಮಠದ ಆವರಣದಲ್ಲಿ ಲಕ್ಷ ದೀಪೋತ್ಸವ ಸಂಭ್ರಮ ಮನೆ ಮಾಡಿತ್ತು. ಅಂದಕಾರವನ್ನು ದೂರ ಮಾಡು ಜ್ಞಾನದ ದೀಪವನ್ನು ಬದುಕಿನಲ್ಲಿ ಬೆಳಗಿಸು ಎಂದು ಲಕ್ಷಾಂತರ ಭಕ್ತರು ದೀಪ ಹಚ್ಚುವ ಮೂಲಕ ಭಕ್ತಿ ಸಮರ್ಪಣೆ ಮಾಡಿದರು.

ಧಾರವಾಡ, ಹಾವೇರಿ, ಗದಗ ಹಾಗೂ ಬೆಳಗಾವಿ ಸೇರಿದಂತೆ ರಾಜ್ಯದ ವಿವಿದ ಕಡೆಗಳಲ್ಲಿನ ಆಗಮಿಸಿದ ಭಕ್ತರು ಸಿದ್ಧಾರೂಡರನ್ನು ಆರಾಧಿಸಿದರು. ಮಣ್ಣಿನ ಹಣತೆಯಲ್ಲಿ ಭಕ್ತರು ಎಣ್ಣೆ ಹಾಕಿ ದೀಪ ಹಚ್ಚಿ ಓಂಕಾರ ನಾದ ಮೊಳಗಿಸಿ ಜಯಘೋಷ ಕೂಗಿದರು.
ಸದ್ಗುರು ಸಿದ್ಧಾರೂಢರ ಕೃಪಾ ಕಟಾಕ್ಷಕ್ಕೆ ಪಾತ್ರರಾದ ಜನರು, ಧಾರ್ಮಿಕ ಹಾಗೂ ಸಾಂಪ್ರದಾಯಿಕ ಕ್ಷಣಗಳಿಗೆ ಲಕ್ಷ ದೀಪೋತ್ಸವ ಸಾಕ್ಷಿಯಾಯಿತು.
#HUBBALLI #SIDDHARUDA MATT #LAKSHA DEEPOSTHSAVA #DEVOTEES #OM NAMA SHIVAYA




