Rashmika Mandanna : ಬದುಕು ಕೊಟ್ಟ ಸಂಸ್ಥೆಯ ಹೆಸರೇಳಲು ರಶ್ಮಿಕಾ ಮಂದಣ್ಣ ಹಿಂದೇಟು : ನಟಿಯ ವಿರುದ್ಧ ಭುಗಿಲೆದ್ದ ಆಕ್ರೋಶ

ಎಷ್ಟೇ ಎತ್ತರಕ್ಕೆ ಏರಿದರೂ ಬದುಕಿನ ಅಡಿಪಾಯ ಹಾಕಿದವರನ್ನು ಮರಿಯಬಾರದು.. ಆದ್ರೆ ಇತ್ತೀಚೆಗೆ ಸಂದರ್ಶನವೊಂದರಲ್ಲಿ ರಶ್ಮಿಕಾ ಅವರು ಬದುಕು ಕೊಟ್ಟ ಮೊದಲ ನಿರ್ಮಾಣ ಸಂಸ್ಥೆಯ ಹೆಸರೇಳಲು ಹಿಂದೇಟು ಹಾಕಿರುವ ಘಟನೆ ನಡೆದಿದ್ದು, ಅದರ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.

ಸದಾ ಸುದ್ದಿಯಲ್ಲಿರುವ ನಟಿ ರಶ್ಮಿಕಾ ಅವರು, ಹಲವಾರು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅದರ ನಡುವೆ ಇತ್ತೀಚಿನ ಒಂದು ಸಂದರ್ಶನದ ಸಮಯದಲ್ಲಿ ರಶ್ಮಿಕಾ ಅನ್ನ ಹಾಕಿದ ಸಂಸ್ಥೆಯ ಹೆಸರನ್ನು ಪ್ರಸ್ತಾಪ ಮಾಡಲು ಹಿಂದೆ‌ ಸರಿದಿದ್ದಾರೆ. ಕೈ ಸನ್ನೆ ಮಾಡಿ ನಿರ್ಮಾಣ ಸಂಸ್ಥೆ ಬಗ್ಗೆ ರಶ್ಮಿಕಾ ಮಾತಾಡಿದ್ದರು. ಅದು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದು, ಎಲ್ಲರ ಅಸಮಾಧಾನಕ್ಕೆ ಕಾರಣವಾಗಿದೆ.

ಇನ್ನು ಮುಂದೆ ಕರ್ನಾಟಕದಲ್ಲಿ ರಶ್ಮಿಕಾ ಅಭಿನಯದ ಸಿನಿಮಾಗಳನ್ನು ಬಿಡುಗಡೆ ಮಾಡದೆ ಇರಲು ನಿರ್ಧರಿಸಿದ್ದಾರೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಫಿಲ್ಮ್ ಚೇಂಬರ್ ಅಧ್ಯಕ್ಷ ಭಾ ಮಾ ಹರೀಶ್ ಪ್ರತಿಕ್ರಿಯೆ ನೀಡಿದ್ದು, ಯಾವಾಗಲೂ ನೆಗೆಟಿವ್ ಗಾಗಿ ಸುದ್ದಿಯಲ್ಲಿರುವ ನಟಿ ರಶ್ಮಿಕಾ ಅವರು ಇದೀಗ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ ಎಂದಿದ್ದಾರೆ.

ಇತ್ತೀಚೆಗೆ ಸಂದರ್ಶನದ ವೇಳೆನೂ ಸಿನಿಮಾ ರಂಗದಲ್ಲಿ ಬೇರೂರಲು ತಳಪಾಯ ಹಾಕಿದ ಸಂಸ್ಥೆಯನ್ನು ನೆನಪಿಸಿಕೊಳ್ಳಲು ಹಿಂದೆ ಹೋದರು. ಅವರ ಮೊದಲ ಸಿನಿಮಾ ‘ಕಿರಿಕ್ ಪಾರ್ಟಿ’ ಸಿನಿಮಾದ ನಿರ್ಮಾಣ ಸಂಸ್ಥೆಯ ಹೆಸರನ್ನು ಹೇಳುವುದಕ್ಕೆ ಹಿಂದೇಟು ಹಾಕಿದ್ದು ಬೇಸರದ ಸಂಗತಿ. ಅಷ್ಟೇ ಅಲ್ಲದೇ ಆಕೆಯು ಕೈ ಸನ್ನೆ ಮಾಡಿ ತೋರಿಸಿದ್ದು ಕನ್ನಡಿಗರಿಗೆ ಮಾಡಿದ ಅವಮಾನ ಎಂದು ಅವರು ಹೇಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಷಯದ ಬಗ್ಗೆ ಹಲವು ರೀತಿಯ ಚರ್ಚೆಗಳು ನಡೆಯುತ್ತಿವೆ. ಕೆಲವರು ರಶ್ಮಿಕಾ ಪರ ವಕಾಲತ್ತು ವಹಿಸಿದರೆ, ಅನೇಕರು ರಶ್ಮಿಕಾ ನಡೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಮುಂಬರುವ ದಿನಗಳಲ್ಲಿ ಕರ್ನಾಟಕದಾದ್ಯಂತ ರಿಲೀಸ್ ಆಗುವ ರಶ್ಮಿಕಾ ಸಿನಿಮಾಗಳನ್ನು ಬ್ಯಾನ್ ಮಾಡೋಣ ಅಂತ ಚರ್ಚೆ ಆಗುತ್ತಿದೆ.

ರಶ್ಮಿಕಾ ಮೇಲೆ ಕನ್ನಡ ಚಿತ್ರರಂಗದ ಹಲವಾರು ಜನರು ಬೇಸರಪಟ್ಟಿರುವ ಹಿನ್ನೆಲೆಯಲ್ಲಿ ಕನ್ನಡ ಚಿತ್ರಮಂದಿರದ ಮಾಲೀಕರು ಸಹ ಸಾಥ್ ನೀಡಲಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ವದಂತಿ ಹಬ್ಬಿದೆ. ಇನ್ನೂ ಫಿಲ್ಮ್ ಇಂಡಸ್ಟ್ರಿ ಯು ಸಹ ರಶ್ಮಿಕಾ ಮೇಲೆ ಕ್ರಮಕ್ಕೆ ಮುಂದಾಗಿದೆ ಎಂದು ವದಂತಿ ಹರಡಿದೆ. ರಶ್ಮಿಕಾ ಕಾರಣದಿಂದಾಗಿ ‘ಪುಷ್ಪ 2’ ಹಾಗೂ ‘ವಾರಿಸು’ ಸಿನಿಮಾ ಬಿಡುಗಡೆ ವೇಳೆಗೆ ಸಮಸ್ಯೆ ಆಗುತ್ತದೆ ಎನ್ನಲಾಗಿದೆ.

ಫಿಲ್ಮ್ ಚೇಂಬರ್ ಪ್ರತಿಕ್ರಿಯೆ ಏನು?

ಕನ್ನಡ ಚಿತ್ರರಂಗದಲ್ಲಿ ಬೆಳೆಯುವ ಅವಕಾಶವನ್ನು ಕಲ್ಪಿಸಿಕೊಟ್ಟವರನ್ನೇ ಮರೆತ ರಶ್ಮಿಕಾ ಗೆ ಬುದ್ದಿ ಕಲಿಸಲು ಮುಂದಾಗಿದ್ದಾರೆ ಎನ್ನಲಾಗಿದೆ. ಆದರೆ, ರಶ್ಮಿಕಾ ಮೇಲೆ ಇನ್ನೂ ಯಾರಿಂದಲೂ ದೂರು ಬಂದಿಲ್ಲ. ಅದಾಗ್ಯೂ ಏಕಾಏಕಿ ಬ್ಯಾನ್ ಮಾಡೋಕೆ ಕಾನೂನಲ್ಲಿ ಅವಕಾಶ ಇಲ್ಲ. ಒಂದು ವೇಳೆ ಈ ಬಗ್ಗೆ ದೂರು ಬಂದಲ್ಲಿ ಎಲ್ಲರನ್ನೂ ಕೂರಿಸಿ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ಫಿಲ್ಮ್ ಚೇಂಬರ್ ಅಧ್ಯಕ್ಷರು ಭಾ ಮಾ ಹರೀಶ್ ಪ್ರತಿಕ್ರಿಯೆ ನೀಡಿದ್ದಾರೆ.

More News