ಬೆಂಗಳೂರು: ದೇಶದ ಆರ್ಥಿಕತೆಯನ್ನು ಬಲಪಡಿಸುವ ರೈತರು, ಶ್ರಮಿಕ ವರ್ಗದವರೇ ನಿಜವಾಗಿ ನಾಡು ಕಟ್ಟುವವರು. ಈ ವರ್ಗದವರನ್ನು ಸರ್ ಎಂ ವಿಶ್ವೇಶ್ವರಯ್ಯ ಪ್ರತಿನಿಧಿಸುತ್ತಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.
ಇಂಜಿನಿಯರುಗಳ ದಿನಾಚರಣೆಯ ಅಂಗವಾಗಿ ಬೆಂಗಳೂರಿನ ಕೆ.ಆರ್.ವೃತ್ತದಲ್ಲಿ ಭಾರತರತ್ನ ಸರ್ ಎಂ.ವಿಶ್ವೇಶ್ವರಯ್ಯ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ನಮನಗಳನ್ನು ಸಲ್ಲಿಸಿದರು. ಹಾಗೂ ಬಿ.ಬಿ.ಎಂ.ಪಿ ವತಿಯಿಂದ ನಿರ್ಮಿಸಿರುವ 160 ಅಡಿ ಕಾರಂಜಿಯನ್ನು ಉದ್ಘಾಟಿಸಿ ಮುಖ್ಯಮಂತ್ರಿ ಅವರು ಮಾತನಾಡುತ್ತಿದ್ದರು.

ಪಿರಮಿಡ್ ನ ಅತ್ಯಂತ ಕೆಳಸ್ತರದಲ್ಲಿ ದುಡಿಯುವ ವರ್ಗದವರು ನಮ್ಮ ಆರ್ಥಿಕತೆಯನ್ನು ಬೆಳೆಸುವ ಮೂಲ ಪುರುಷರು ಹಾಗೂ ತಾಯಂದಿರು. ವಿಶ್ವೇಶ್ವರಯ್ಯ ಅವರು ಈ ವರ್ಗದವರನ್ನು ಪ್ರತಿನಿಧಿಸುತ್ತಾರೆ. ವಿಶ್ವೇಶ್ವರಯ್ಯ ಅವರ ಸಾಧನೆ ಅಪಾರ. ಕೆ.ಆರ್.ಎಸ್. ಅಣೆಕಟ್ಟಿನಿಂದ ಹಿಡಿದು ಪಾಲಿಟೆಕ್ನಿನ್, ಇಂಜಿನಿಯರಿಂಗ್ ಕಾಲೇಜುಗಳ ನಿರ್ಮಾಣ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಹಲವಾರು ಕಾರ್ಖಾನೆಗಳು, ಮಹಿಳೆಯರಿಗೆ ಮೀಸಲಾತಿ, ಮುಂತಾದ ಕ್ರಮಗಳ ಮೂಲಕ ಅತ್ಯಂತ ಪ್ರಗತಿಪರ ಚಿಂತನೆಗಳಿಂದ ಅವರು ನಾಡು ಕಟ್ಟಿದ್ದಾರೆ. ಅಂಥ ವ್ಯಕ್ತಿಗೆ ನಮನ ಸಲ್ಲಿಸುವ ದಿನವಿದು. ನಾವೂ ಸಹ ಅವರ ಹಾದಿಯಲ್ಲಿ ನಡೆದು, ಅವರಂತೆ ನಾಡು ಕಟ್ಟಲು ಸಣ್ಣ ಪ್ರಯತ್ನ ಮಾಡಲು ಸಂಕಲ್ಪ ಮಾಡುವ ದಿನವೆಂದು ನಾನು ಭಾವಿಸಿದ್ದೇನೆ ಎಂದು ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.
ಕೆ.ಆರ್. ವೃತ್ತದಲ್ಲಿ ವಿಶ್ವೇಶ್ವರಯ್ಯ ಪ್ಲಾಜಾ ಕಟ್ಟಲಾಗಿದೆ. ಇಲ್ಲಿ ಮಿನಿ ಗ್ರಂಥಾಲಯ ಇದೆ. ಸಾರ್ವಜನಿಕರು ಇಲ್ಲಿ ಕುಳಿತುಕೊಂಡು ಓದಬಹುದು. ಇದೇ ರೀತಿ 30 ಜಂಕ್ಷನ್ ಗಳನ್ನು ಬೆಂಗಳೂರಿನಲ್ಲಿ ಅಭಿವೃದ್ಧಿಪಡಿಸಲು ಬಿಬಿಎಂಪಿ ತೀರ್ಮಾನಿಸಿದೆ. ಬೆಂಗಳೂರನ್ನು ಅಂದವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
೧೬೦ ಅಡಿ ನೀರಿನ ಕಾರಂಜಿಯ ಉದ್ಘಾಟನೆ
ಇದೇ ಸಂದರ್ಭದಲ್ಲಿ ಬಿಬಿಎಂಪಿ ವತಿಯಿಂದ ನಿರ್ಮಿಸಲಾಗಿರುವ 160 ಅಡಿ ಎತ್ತರದ ನೀರಿನ ಕಾರಂಜಿಯನ್ನು ಅವರು ಲೋಕಾರ್ಪಣೆ ಮಾಡಿದರು. ಲೋಕೋಪಯೋಗಿ ಸಚಿವ ಸಿ ಸಿ ಪಾಟೀಲ್, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಶಾಸಕ ರಿಜ್ವಾನ್ ಅರ್ಷದ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.




