ಟೀಂ ಇಂಡಿಯಾದ ಆರಂಭಿಕ ಬ್ಯಾಟರ್ ಆಗಿ ಮಿಂಚಿರುವ ಕನ್ನಡಿಗ ಕೆ.ಎಲ್. ರಾಹುಲ್, ಮಧ್ಯಮ ಕ್ರಮಾಂಕದ ಬ್ಯಾಟ್ಸಮನ್ ಆಗಿ ಮತ್ತೊಮ್ಮೆ ಯಶಸ್ಸು ಕಂಡಿದ್ದಾರೆ.
ಬಾಂಗ್ಲಾದೇಶದ ವಿರುದ್ಧ ಭಾನುವಾರ ನಡೆದ ಮೊದಲ ಏಕದಿನ ಪಂದ್ಯದಲ್ಲಿ 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕೆ.ಎಲ್. ರಾಹುಲ್, 70 ಬಾಲ್‌ಗಳಲ್ಲಿ 5 ಬೌಂಡರಿ ಹಾಗೂ 4 ಸಿಕ್ಸರ್ ಮೂಲಕ 73 ರನ್‌ಗಳಿಸಿ ತಂಡಕ್ಕೆ ಆಸರೆಯಾದರು. ಇದರ ಪರಿಣಾಮ ಟೀಂ ಇಂಡಿಯಾ 41.2 ಓವರ್‌ಗಳಲ್ಲಿ 186 ರನ್‌ಗಳ ಗೌರವಯುತ ಮೊತ್ತ ಕಲೆಹಾಕಲು ಸಾಧ್ಯವಾಯಿತು.

ಆರಂಭಿಕನಾಗಿ ದೊಡ್ಡಮಟ್ಟದ ಸಕ್ಸಸ್ ಕಂಡಿರುವ ಕೆ.ಎಲ್.ರಾಹುಲ್, 5ನೇ ಕ್ರಮಾಂಕದಲ್ಲೂ ಉತ್ತಮ ಪ್ರದರ್ಶನ ನೀಡಿದ್ದಾರೆ. ಈವರೆಗೂ 5ನೇ ಕ್ರಮಾಂಕದಲ್ಲಿ 11 ಇನ್ನಿಂಗ್ಸ್ ಆಡಿರುವ ರಾಹುಲ್, 58.44ರ ಬ್ಯಾಟಿಂಗ್ ಸರಾಸರಿ ಹಾಗೂ 113.6ರ ಸ್ಟ್ರೈಕ್ ರೇಟ್‌ನಲ್ಲಿ 526 ರನ್‌ಗಳಿಸಿದ್ದಾರೆ. ಇದರಲ್ಲಿ 1 ಶತಕ ಹಾಗೂ 5 ಅರ್ಧಶತಕ ಒಳಗೊಂಡಿದೆ. ಅಲ್ಲದೇ 5ನೇ ಕ್ರಮಾಂಕದಲ್ಲಿ ಭಾರತದ ಪರ ಅತ್ಯುತ್ತಮ ಬ್ಯಾಟಿಂಗ್ ಸರಾಸರಿಯನ್ನ ಹೊಂದಿರುವ ಪಟ್ಟಿಯಲ್ಲಿ ರಾಹುಲ್, ಮೊದಲ ಸ್ಥಾನ ಪಡೆದಿದ್ದಾರೆ.
5ನೇ ಕ್ರಮಾಂಕಕ್ಕೆ ರಾಹುಲ್?
2023ರಲ್ಲಿ ಭಾರತದಲ್ಲಿ ನಡೆಯುವ ಏಕದಿನ ವಿಶ್ವಕಪ್ ಪಂದ್ಯಾವಳಿಗೆ ಸಜ್ಜಾಗುತ್ತಿರುವ ಟೀಂ ಇಂಡಿಯಾ, ಬಲಿಷ್ಠ ತಂಡವನ್ನ ಕಟ್ಟುವ ಲೆಕ್ಕಾಚಾರದಲ್ಲಿದೆ. ಈ ನಡುವೆ ಭಾರತದ ಬ್ಯಾಟಿಂಗ್ ಬಲಿಷ್ಠವಾಗಿದ್ದರು ಮಧ್ಯಮ ಕ್ರಮಾಂಕ ಇನ್ನಷ್ಟು ಉತ್ತಮಗೊಳ್ಳಬೇಕಾದ ಅನಿವಾರ್ಯತೆ ಇದೆ. ಆಲ್ರೌಂಡರ್‌ಗಳಾದ ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ ಅವರು ಮಧ್ಯಮ ಕ್ರಮಾಂಕದಲ್ಲಿ ಗುರುತಿಸಿಕೊಂಡಿದ್ದರು, ಇವರ ಜೊತೆಗೆ ಮತ್ತೋರ್ವ ಬ್ಯಾಟ್ಸ್‌ಮನ್ ಅವಶ್ಯಕತೆ ಇದೆ. ರಿಷಬ್ ಪಂತ್ ಮೇಲೆ ಸಾಕಷ್ಟು ನಿರೀಕ್ಷೆ ಇದ್ದರೂ, ಅದಕ್ಕೆ ತಕ್ಕಂತೆ ಆಟವಾಡುವಲ್ಲಿ ಪಂತ್ ವಿಫಲರಾಗುತ್ತಿದ್ದಾರೆ.
ಹೀಗಾಗಿ 5ನೇ ಕ್ರಮಾಂಕಕ್ಕೆ ಯಾರು ಬೆಸ್ಟ್ ಎಂಬ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಂತಿದೆ. ಆರಂಭಿಕನಾಗಿ ರೋಹಿತ್ ಶರ್ಮ ಹಾಗೂ ಶಿಖರ್ ಧವನ್ ಕಣಕ್ಕಿಳಿದರೆ ಕೆ.ಎಲ್.ರಾಹುಲ್ 5ನೇ ಕ್ರಮಾಂಕದಲ್ಲಿ ಆಡುವುದು ಫಿಕ್ಸ್ ಆಗಲಿದೆ. ಈ ನಡುವೆ ಟೀಂ ಇಂಡಿಯಾ ಆಟಗಾರ ದಿನೇಶ್ ಕಾರ್ತಿಕ್ ಸಹ ವಿಶ್ವಕಪ್‌ನಲ್ಲಿ 5ನೇ ಕ್ರಮಾಂಕದಲ್ಲಿ ಕೆ.ಎಲ್. ರಾಹುಲ್ ಆಡುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವಿಶ್ವಕಪ್ ಟೂರ್ನಿಯಲ್ಲಿ ಇದೇ ಲೆಕ್ಕಾಚಾರ ಮುಂದುವರಿದರೆ, ಕನ್ನಡಿಗ ಕೆ.ಎಲ್.ರಾಹುಲ್ ವಿಕೆಟ್ ಕೀಪರ್ ಜವಾಬ್ದಾರಿ ಜೊತೆಗೆ 5ನೇ ಕ್ರಮಾಂಕದಲ್ಲಿ ಆಡುವ ಸಾಧ್ಯತೆ ಇದೆ.
#K L RAHUL #OPENING BATTER #WICKET KEEPER #SHIKHAR DHAWAN #RISHABH PANTH #RAVINDRA JADEJA #HARDHICK PANDYA #FIFTH PLAYER




