ನವದೆಹಲಿ ಡಿ6 : ಭಾರತ ಮಹಿಳಾ ಕ್ರಿಕೆಟ್ ತಂಡದ ಬ್ಯಾಟಿಂಗ್ ಕೋಚ್ ಸ್ಥಾನದಿಂದ ಮಾಜಿ ಕ್ರಿಕೆಟಿಗ ಶಿವಸುಂದರ್ ದಾಸ್ ಹಿಂದೆ ಸರಿದ ಹಿನ್ನೆಲೆಯಲ್ಲಿ ನೂತನ ಬ್ಯಾಟಿಂಗ್ ಕೋಚ್ ಆಗಿ ಮಾಜಿ ಕ್ರಿಕೆಟಿಗ ಹೃಷಿಕೇಶ್ ಕಾನಿಟ್ಕರ್ ನೇಮಕಗೊಂಡಿದ್ದಾರೆ.
ಈ ಹಿಂದೆ ಮಹಿಳಾ ತಂಡದ ಬ್ಯಾಟಿಂಗ್ ಕೋಚ್ ಆಗಿದ್ದ ಶಿವಸುಂದರ್ ದಾಸ್ ಪಂಜಾಬ್ ತಂಡದ ಬ್ಯಾಟಿಂಗ್ ಕೋಚ್ ಆಗಿ ನೇಮಕಗೊಂಡ ಹಿನ್ನೆಲೆಯಲ್ಲಿ ಮಹಿಳಾ ತಂಡದ ಕೋಚ್ ಸ್ಥಾನದಿಂದ ಹಿಂದೆ ಸರಿದಿದ್ದರು. ಹೀಗಾಗಿ ನೂತನ ಬ್ಯಾಟಿಂಗ್ ಕೋಚ್ ಆಗಿ ಮಾಜಿ ಕ್ರಿಕೆಟಿಗ ಹೃಷಿಕೇಶ್ ಕಾನಿಟ್ಕರ್ ಅವರನ್ನ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ನೇಮಕ ಮಾಡಿದೆ. ಕೃಷಿಕೇಶ್ ಕಾನಿಟ್ಕರ್ ಡಿಸೆಂಬರ್ 9ರಿಂದ ಆಸ್ಟ್ರೇಲಿಯಾ ವಿರುದ್ಧ ಆರಂಭಗೊಳ್ಳಲಿರುವ ಐದು ಪಂದ್ಯಗಳ T20I ಸರಣಿ ವೇಳೆ ಭಾರತ ಮಹಿಳಾ ತಂಡವನ್ನ ಸೇರಿಕೊಳ್ಳಲಿದ್ದಾರೆ.

ಮಹಿಳಾ ಕ್ರಿಕೆಟ್ ತಂಡದ ಬ್ಯಾಟಿಂಗ್ ಕೋಚ್ ಆಗಿ ನೇಮಕಗೊಂಡಿರುವ ಬಗ್ಗೆ ಪ್ರತಿಕ್ರಿಯಿಸಿರುವ ಹೃಷಿಕೇಶ್ ಕಾನಿಟ್ಕರ್, ಮಹಿಳಾ ತಂಡದ ಹೊಸ ಬ್ಯಾಟಿಂಗ್ ಕೋಚ್ ಆಗಿ ನೇಮಕಗೊಂಡಿರುವುದು ಗೌರವದ ಸಂಗತಿ. ಯುವ ಹಾಗೂ ಅನುಭವಿ ಆಟಗಾರ್ತಿಯರನ್ನ ಹೊಂದಿರುವ ಮಹಿಳಾ ತಂಡದ ಮೇಲೆ ಸಾಕಷ್ಟು ನಿರೀಕ್ಷೆಗಳನ್ನು ಹೊಂದಿದ್ದೇನೆ. ಮುಂದಿನ ದಿನಗಳಲ್ಲಿ ಮಹಿಳಾ ತಂಡ ಎಲ್ಲಾ ರೀತಿಯ ಸವಾಲುಗಳನ್ನ ಎದುರಿಸಲು ಸಿದ್ಧವಾಗಿದೆ ಎಂದು ನಾನು ನಂಬಿದ್ದೇನೆ ಎಂದು ಕಾನಿಟ್ಕರ್ ಹೇಳಿದ್ದಾರೆ.

ಈ ನಡುವೆ ಭಾರತ ಮಹಿಳಾ ತಂಡದ ಮಾಜಿ ಮುಖ್ಯ ಕೋಚ್ ರಮೇಶ್ ಪೊವಾರ್ ಅವರು ಎನ್‌ಸಿಎ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಅವರನ್ನು ಎನ್‌ಸಿಎ ಸೆಟಪ್‌ನ ಹೊಸ ಸ್ಪಿನ್-ಬೌಲಿಂಗ್ ಕೋಚ್ ಆಗಿ ಸೇರಿಕೊಳ್ಳಲಿದ್ದಾರೆ. ಮಹಿಳಾ T20 ವಿಶ್ವಕಪ್‌ಗೆ ಎರಡು ತಿಂಗಳಿಗಿಂತ ಕಡಿಮೆ ಸಮಯವಿರುವ ಕಾರಣ ಮಹಿಳಾ ತಂಡದ ಮುಖ್ಯ ಕೋಚ್ ಯಾರು? ಎಂಬುದರ ಕುರಿತು ಸದ್ಯಕ್ಕೆ ಯಾವುದೇ ಅಪ್‌ಡೇಟ್ ಇಲ್ಲ.




