Gold ATM has Come to Hyderabad : ಹೈದರಾಬಾದ್ ಗೆ ಬಂದಿದೆ ಚಿನ್ನದ ಎಟಿಎಂ..! ಹಣದ ಮಾದರಿಯಲ್ಲೇ ಚಿನ್ನ ಕೂಡ ಎಟಿಎಂನಲ್ಲೇ ಸಿಗುತ್ತೆ..!

ಹೈದರಾಬಾದ್‌ ಡಿ.8:  ಹೈದರಾಬಾದ್‌ ನಲ್ಲಿ ಚಿನ್ನದ ಎಟಿಎಂ ಸ್ಥಾಪನೆ ಆಗಿರುವ ಸುದ್ದಿ ಕಳೆದ ಎರಡು ದಿನಗಳಿಂದ ದೇಶದಲ್ಲಿ ಮನೆಮಾತಾಗಿದೆ. ಇದು ಚಿನ್ನವನ್ನು ಕೊಡುವ ಎಟಿಎಂ. ಹೈದರಾಬಾದ್ ಮೂಲದ ಗೋಲ್ಡ್‌ಸಿಕ್ಕಾ ಪ್ರೈವೇಟ್ ಲಿಮಿಟೆಡ್ ಈ ಚಿನ್ನದ ಎಟಿಎಂ ಅನ್ನು ಸ್ಥಾಪಿಸಿದೆ.

ಇದು ದೇಶದ ಮೊದಲ ರಿಯಲ್‌ ಟೈಮ್‌ ಚಿನ್ನ ವಿತರಣಾ ಯಂತ್ರ ಎಂದು ಹೇಳಲಾಗುತ್ತಿದೆ. ದೇಶಾದ್ಯಂತ ಈ ಎಟಿಎಂ ಸ್ಥಾಪನೆಯಾಗುವ ನಿರೀಕ್ಷೆ ಇದೆ. ಗ್ರಾಹಕರು ನಗದು ಹಣವನ್ನು ಎಟಿಎಂನಿಂದ ಪಡೆದ ರೀತಿಯಲ್ಲೇ 24 ಕ್ಯಾರೆಟ್‌ ಅಪರಂಜಿ ಚಿನ್ನವನ್ನು ಇದರಿಂದ ಪಡೆಯಬಹುದು.

ಈಗಾಗಲೇ ಜ್ಯೂಸ್‌, ಚಾಕೊಲೇಟ್‌ ವೆಂಡಿಂಗ್‌ ಮಷಿನ್‌ಗಳನ್ನು ಗಮನಿಸಿರಬಹುದು. ಅದೇ ಮಾದರಿಯಲ್ಲಿ ಈಗ ಚಿನ್ನ ಮಾರಾಟವೂ ಶುರುವಾಗಿದೆ ಎಂದು ಹೇಳಬಹುದು. ಈ ಎಟಿಎಂನಿಂದ ಚಿನ್ನ ಖರೀದಿಸಲು ಬಯಸುವವರು ತಮ್ಮ ಕ್ರೆಡಿಟ್‌ ಅಥವಾ ಡೆಬಿಟ್‌ ಕಾರ್ಡ್‌ ಬಳಸಿ ಹಣ ಪಾವತಿಸಿದರೆ, ನಗದು ಹಣ ಬರುವ ಜಾಗದಲ್ಲಿ ಚಿನ್ನದ ಚಿಕ್ಕ ಬಿಸ್ಕೆಟ್‌ ಅಥವಾ ನಾಣ್ಯ ಬರುತ್ತದೆ. ಹೈದರಾಬಾದ್‌ನ ಬೇಗುಂಪೇಟ್‌ನ ಅಶೋಕಾ ರಘುಪತಿ ಚೇಂಬರ್ಸ್‌ನಲ್ಲಿ ಕಂಪನಿಯ ಹೆಡ್‌ ಆಫೀಸ್‌ ಇದ್ದು, ಅಲ್ಲಿಯೇ ಈ ಚಿನ್ನದ ಎಟಿಎಂ ಇದೆ. ಇದರ ಬಳಕೆ ಹೇಗೆ ಎಂಬ ಕುತೂಹಲ ಅನೇಕರದ್ದು. ಆ ಕುತೂಹಲ ತಣಿಸುವ ಪ್ರಯತ್ನ ಇದು.

ಚಿನ್ನದ ಎಟಿಎಂ ಬಳಸುವುದು ಹೇಗೆ?

ಗೋಲ್ಟ್‌ ಎಟಿಎಂಗಳು ಇತರೆ ಎಟಿಎಂಗಳಂತೆಯೇ ಇರುವ ಮಷಿನ್‌. ಬಳಕೆದಾರರು ತಮ್ಮ ಡೆಬಿಟ್‌, ಕ್ರೆಡಿಟ್‌ ಕಾರ್ಡ್ರ ಬಳಸಿಕೊಂಡು ಗೋಲ್ಡ್‌ ಎಟಿಎಂನಲ್ಲಿ ಚಿನ್ನ ಖರೀದಿ ಮಾಡಬಹುದು. ಎಟಿಎಂನ ಪರದೆಯ ಮೇಲೆ ಆ ದಿನದ ಚಿನ್ನದ ದರ ಗೋಚರಿಸುತ್ತಿರುತ್ತದೆ. ಬಳಕೆದಾರರು ತಮ್ಮ ಡೆಬಿಟ್‌ ಅಥವಾ ಕ್ರೆಡಿಟ್‌ ಕಾರ್ಡನ್ನು ನಿಗದಿತ ಪ್ರದೇಶದಲ್ಲಿ ಇನ್‌ಸರ್ಟ್‌ ಮಾಡಬೇಕು. ಬಳಿಕ ಕ್ಲಿಕ್‌ ಹಿಯರ್‌ ಟು ಬೈ ಗೋಲ್ಡ್‌ ಎಂಬ ಬರೆಹ ಇರುವ ಜಾಗವನ್ನು ಕ್ಲಿಕ್‌ ಮಾಡಬೇಕು. ಬಳಿಕ PIN ನಮೂದಿಸಬೇಕು. ಅದಾದ ಬಳಿಕ ಎಷ್ಟು ಚಿನ್ನದ ನಾಣ್ಯ ಬೇಕೋ ಅಷ್ಟಕ್ಕೆ ಇರುವ ಮೊತ್ತವನ್ನು ಪಾವತಿಸಬೇಕು. ಇಷ್ಟಾಗುತ್ತಲೇ, ಚಿನ್ನದ ನಾಣ್ಯದ ಪ್ಯಾಕ್‌ ಎಟಿಎಂನಲ್ಲಿ ಹೊರಬರುತ್ತದೆ.

05 ಗ್ರಾಂ ನಿಂದ 100 ಗ್ರಾಂ  ತನಕದ ಚಿನ್ನದ ನಾಣ್ಯ, ಬಿಸ್ಕಟ್ ಲಭ್ಯ

ಗೋಲ್ಡ್‌ ಸಿಕ್ಕಾ ಕಂಪನಿಯ ಉಪಾಧ್ಯಕ್ಷ ಪ್ರತಾಪ್‌ ಅವರು ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿರುವುದು ಇಷ್ಟು – ಪ್ರತಿಯೊಂದು ಎಟಿಎಂನಲ್ಲೂ 5 ಕಿಲೋ ಚಿನ್ನ ಇರಿಸಬಹುದು. ಇದರ ಮೌಲ್ಯ ಅಂದಾಜು 2ರಿಂದ 3 ಕೋಟಿ ರೂಪಾಯಿ. ಬಳಕೆದಾರರ ಬೇಡಿಕೆಗೆ ಅನುಗುಣವಾಗಿ ಎಟಿಎಂ 0.5 ಗ್ರಾಂನಿಂದ 100 ಗ್ರಾಂ ತನಕದ ಚಿನ್ನದ ಗಟ್ಟಿಗಳನ್ನು ನೀಡುತ್ತದೆ. 0.5 ಗ್ರಾಂ. 1 ಗ್ರಾಂ, 2 ಗ್ರಾಂ, 5 ಗ್ರಾಂ, 10 ಗ್ರಾಂ, 20 ಗ್ರಾಂ, 50 ಗ್ರಾಂ ಮತ್ತು 100 ಗ್ರಾಂಗಳ ಚಿನ್ನದ ನಾಣ್ಯ, ಬಿಸ್ಕೆಟ್‌ ಈ ಎಟಿಎಂಗಳಲ್ಲಿ ಲಭ್ಯ ಇವೆ.

ಗೋಲ್ಡ್‌ ಎಟಿಎಂ ಆದ ಕಾರಣ ಸುರಕ್ಷಾ ಫೀಚರ್ಸ್‌ ಕೂಡ ಬಹಳ ಮುಖ್ಯ. ಇದನ್ನು ವಿವರಿಸಿದ ಪ್ರತಾಪ್‌, ಮಷಿನ್‌ನಲ್ಲಿ ಕ್ಯಾಮೆರಾ ಇದೆ. ಅಲರಾಂ ಸಿಸ್ಟಂ ಅಳವಡಿಸಲಾಗಿದೆ. ಹೊರಗೆ ಕೂಡ ಸಿಸಿಟಿವಿ ಕ್ಯಾಮೆರಾಗಳಿವೆ. ಇದಲ್ಲದೆ, ಗ್ರಾಹಕರ ಅನುಕೂಲಕ್ಕಾಗಿ ಕಸ್ಟಮರ್‌ ಸಪೋರ್ಟ್‌ ಟೀಮ್‌ ಕೂಡ ಕೆಲಸ ಮಾಡುತ್ತದೆ ಎಂದು ಹೇಳಿದರು.

ಚಿನ್ನದ ನಾಣ್ಯ ಹೊರಬಾರದೇ ಇದ್ದರೇ ಏನು ಮಾಡಬೇಕು?

ಸಾಮಾನ್ಯ ಎಟಿಎಂಗಳಲ್ಲಿ ಆಗುವಂತೆ ಹಣ ನಮೂದಿಸಿ, ಪಿನ್‌ ಹಾಕಿದ ಮೇಲೆ ನಗದು ಹಣ ಹೊರಬಾರದೆ ಇರುವಂಥ ಸಮಸ್ಯೆ ಗೋಲ್ಡ್‌ ಎಟಿಎಂನಲ್ಲಿ ಇದೆಯಾ? ಅಕಸ್ಮಾತ್‌ ಗೋಲ್ಡ್‌ ಎಟಿಎಂನಲ್ಲಿ ಹಣ ಪಾವತಿಯಾದ ಬಳಿಕ ಚಿನ್ನ ಹೊರಗೆ ಬಾರದೇ ಇದ್ದರೆ ಆಗ, 24 ಗಂಟೆಯ ಒಳಗೆ ಹಣ ಬಳಕೆದಾರರ ಖಾತೆಗೆ ಮರುಪಾವತಿ ಆಗುತ್ತದೆ. ಹಾಗಾಗದೇ ಇದ್ದರೆ ಕಸ್ಟಮರ್‌ ಸಪೋರ್ಟ್‌ಗೆ ದೂರು ಸಲ್ಲಿಸಬೇಕು ಎಂದು ಪ್ರತಾಪ್‌ ವಿವರಿಸಿದ್ದಾರೆ.

ಗೋಲ್ಡ್ ಎಟಿಎಂನಲ್ಲಿ ಚಿನ್ನ ಖರೀದಿಗೆ ಇರುವ ಹಂತಗಳು

1.ಗೋಲ್ಡ್‌ ಎಟಿಎಂನಲ್ಲಿ ಡೆಬಿಟ್‌ ಅಥವಾ ಕ್ರೆಡಿಟ್‌ ಅಥವಾ ಸ್ಮಾರ್ಟ್‌ ಕಾರ್ಡ್‌ ಇನ್‌ಸರ್ಟ್‌ ಮಾಡಿ

2.ಚಿನ್ನ ಖರೀದಿಸಲು ಇರುವ ಆಪ್ಶನ್‌ ಆಯ್ಕೆ ಮಾಡಿ

3.ಬಳಿಕ ದರ ಮತ್ತು ಚಿನ್ನದ ಪ್ರಮಾಣ ಆಯ್ಕೆ ಮಾಡಿ

4.ಬಳಿಕ ಸೆಕ್ಯುರಿಟಿ ಪಿನ್‌ ನಮೂದಿಸಿ

5.ಇಷ್ಟಾದ ಬಳಿಕ ಗೋಲ್ಡ್‌ ಕಾಯಿನ್‌ ಎಟಿಎಂನಲ್ಲಿ ಹೊರಬರುತ್ತದೆ.

More News