ಇತ್ತೀಚೆಗೆ ಮುಗಿದ ಟಿ20 ವಿಶ್ವಕಪ್ ನಂತರ ಕ್ರಿಕೆಟ್ ಅಭಿಮಾನಿಗಳು ಹಾಗೂ ಪ್ರಮುಖ ತಂಡಗಳ ಕಣ್ಣು ಮುಂದಿನ ವರ್ಷ ಲಂಡನ್‌ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್(WTC) ಫೈನಲ್‌ನತ್ತ ಮುಖ ಮಾಡಿದ್ದು, ಫೈನಲ್ ಪಂದ್ಯ ಪ್ರವೇಶಿಸಲು ಹಲವು ತಂಡಗಳು ಸಾಕಷ್ಟು ಕಸರತ್ತು ನಡೆಸಲಾರಂಭಿಸಿವೆ.
ಫೈನಲ್ ತಲುಪುವ ರೇಸ್‌ನಲ್ಲಿ ಟೀಂ ಇಂಡಿಯಾ ಸಹ ಪ್ರಮುಖ ತಂಡವಾಗಿ ಗುರುತಿಸಿಕೊಂಡಿದೆ. ಈ ಅವಕಾಶ ತನ್ನದಾಗಿಸಿಕೊಳ್ಳಲು ಸದ್ಯ ಭಾರತ ತಂಡ ಎರಡು ಟೆಸ್ಟ್ ಸರಣಿಗಳನ್ನ ಆಡಲಿದೆ. ಇದೇ ಡಿ.14 ರಿಂದ ನಡೆಯುವ ಬಾಂಗ್ಲಾದೇಶ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿ ಹಾಗೂ 2023ರ ಫೆಬ್ರವರಿ-ಮಾರ್ಚ್‌ನಲ್ಲಿ ತವರಿನಲ್ಲಿ ನಡೆಯುವ ಆಸ್ಟ್ರೇಲಿಯಾ ವಿರುದ್ಧ 4 ಟೆಸ್ಟ್ ಸರಣಿಯ ಮೂಲಕ ಟೀಂ ಇಂಡಿಯಾ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಪ್ರವೇಶಿಸುವ ಅವಕಾಶ ಹೊಂದಿದೆ.
2022-23ರ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಪ್ರವೇಶಿಸುವ ಅವಕಾಶ ಪಾಕಿಸ್ತಾನ ತಂಡಕ್ಕಿತ್ತು. ಆದರೆ ತವರಿನಲ್ಲಿ ನಡೆಯುತ್ತಿರುವ ಮೂರು ಪಂದ್ಯಗಳ ಟೆಸ್ಟ್ ಸರಣಿಯ ಎರಡು ಪಂದ್ಯಗಳನ್ನು ಸೋತ ನಂತರದಲ್ಲಿ ಪಾಕಿಸ್ತಾನ ಫೈನಲ್ ರೇಸ್‌ನಿಂದ ಹೊರಬಿದ್ದಿದೆ. ರಾವಲ್ಪಿಂಡಿ ಹಾಗೂ ಮುಲ್ತಾನ್‌ನಲ್ಲಿ ನಡೆದ ಟೆಸ್ಟ್‌ನಲ್ಲಿ ಭರ್ಜರಿ ಗೆಲುವು ಸಾಧಿಸಿದ ಇಂಗ್ಲೆಂಡ್ ಆ ಮೂಲಕ ಪಾಕಿಸ್ತಾನದ ಲೆಕ್ಕಾಚಾರವನ್ನ ತಲೆಕೆಳಗಾಗಿಸಿದೆ. ಸರಣಿಯ ಕೊನೆಯ ಪಂದ್ಯ ಕರಾಚಿಯಲ್ಲಿ ನಡೆಯಲಿದೆ.

ಆದರೆ ಅತ್ಯುತ್ತಮ ಪ್ರದರ್ಶನ ನೀಡುತ್ತಾ ಬಂದಿರುವ ಆಸ್ಟ್ರೇಲಿಯಾ WTC ಫೈನಲ್ ಪ್ರವೇಶಿಸುವ ಎಲ್ಲಾ ಅವಕಾಶ ಹೊಂದಿದೆ. ವೆಸ್ಟ್ ಇಂಡೀಸ್ ತಂಡವನ್ನು ತವರಿನಲ್ಲಿ ನಡೆದ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-0 ಅಂತರದಿಂದ ಸೋಲಿಸುವ ಮೂಲಕ ಪ್ಯಾಟ್ ಕಮಿನ್ಸ್ ಸಾರಥ್ಯದ ಕಾಂಗರೂ ಪಡೆ ಫೈನಲ್ ಪ್ರವೇಶಿಸುವ ಅವಕಾಶವನ್ನ ಇನ್ನಷ್ಟು ಸುಲಭ ಮಾಡಿಕೊಂಡಿದೆ.
ಆಸ್ಟ್ರೇಲಿಯಾ ತನ್ನ ಕೊನೆಯ ಟೆಸ್ಟ್ ಸರಣಿಯಲ್ಲಿ ಭಾರತ ತಂಡವನ್ನ ಎದುರಿಸಲಿದ್ದು, ಇದಕ್ಕೂ ಮುನ್ನ ಡಿ.17 ರಿಂದ ಜನವರಿ 8ರವರೆಗೆ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ತವರಿನಲ್ಲಿ ಸೌತ್ ಆಫ್ರಿಕಾ ತಂಡವನ್ನ ಎದುರಿಸಲಿದೆ.
ಮುಲ್ತಾನ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧ ದ್ವಿತೀಯ ಟೆಸ್ಟ್‌ನಲ್ಲಿ ಪಾಕಿಸ್ತಾನ ಸೋಲುನುಭವಿಸುವ ಮೂಲಕ ಆಸ್ಟ್ರೇಲಿಯಾ, ಸೌತ್ ಆಫ್ರಿಕಾ, ಶ್ರೀಲಂಕಾ ಮತ್ತು ಭಾರತ ತಂಡಗಳಿಗೆ WTC ಫೈನಲ್ ಪ್ರವೇಶಿಸುವ ಅವಕಾಶವನ್ನು ಮುಕ್ತಗೊಳಿಸಿದೆ. ಪ್ರಶಸ್ತಿ ಸುತ್ತಿಗೆ ಎಂಟ್ರಿಕೊಡಲು ಈ ನಾಲ್ಕು ತಂಡಗಳಿಗೂ ಅವಕಾಶವಿದ್ದು, ಇದಕ್ಕಾಗಿ ನಾಲ್ಕು ತಂಡಗಳು ತಮ್ಮ ಮುಂದಿನ ಟೆಸ್ಟ್ ಸರಣಿಗಳಲ್ಲಿ ಎದುರಾಳಿ ತಂಡಗಳಿಗೆ ಸೋಲಿನ ಆಘಾತ ನೀಡುವ ಲೆಕ್ಕಾಚಾರದಲ್ಲಿವೆ.
WTC 2021-23 ಅಂಕಪಟ್ಟಿಯಲ್ಲಿ ಸದ್ಯ ಆಸ್ಟ್ರೇಲಿಯಾ 108 ಅಂಕ, ಸೌತ್ ಆಫ್ರಿಕಾ 72 ಅಂಕ, ಶ್ರೀಲಂಕಾ 64 ಅಂಕ, ಭಾರತ 75 ಅಂಕ ಹಾಗೂ ಇಂಗ್ಲೆಂಡ್ 112 ಅಂಕಗಳನ್ನ ಹೊಂದಿದ್ದು, ಆ ಮೂಲಕ ಟಾಪ್-5 ಸ್ಥಾನದಲ್ಲಿವೆ.
@BCCI @INDIAN TEAM #BANGALDESH #AUSTRELIA #TEST MATCH #CRICKET #FINAL




