ನವದೆಹಲಿ : ಡಿ.13: ಅತಿಥೇಯ ಬಾಂಗ್ಲಾದೇಶ ಹಾಗೂ ಪ್ರವಾಸಿ ಭಾರತ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯಕ್ಕೆ ಕೌಂಟ್ಡೌನ್ ಶುರುವಾಗಿದೆ. ನಾಳೆಯಿಂದ ಆರಂಭವಾಗಲಿರುವ ಮೊದಲ ಟೆಸ್ಟ್ ಪಂದ್ಯಕ್ಕಾಗಿ ಉಭಯ ತಂಡಗಳು ಭರ್ಜರಿ ತಯಾರಿ ಮಾಡಿಕೊಂಡಿದ್ದು, ಚಟ್ಟೋಗ್ರಾಮ್ನ ಜಹುರ್ ಅಹ್ಮದ್ ಚೌಧರಿ ಕ್ರೀಡಾಂಗಣದಲ್ಲಿ ಎರಡು ತಂಡಗಳು ರೆಡ್ಬಾಲ್ ಕ್ರಿಕೆಟ್ನಲ್ಲಿ ಪೈಪೋಟಿ ನಡೆಸಲಿವೆ.
ಢಾಕಾದಲ್ಲಿ ನಡೆದ ಮೊದಲ ಎರಡು ODIಗಳಲ್ಲಿ ಸೋತ ನಂತರದಲ್ಲಿ ಮೂರನೇ ಪಂದ್ಯದಲ್ಲಿ ಪ್ರಾಬಲ್ಯ ಸಾಧಿಸಿದ ಭಾರತ 227 ರನ್ಗಳ ಭರ್ಜರಿ ಜಯದೊಂದಿಗೆ ಪ್ರತ್ಯುತ್ತರ ನೀಡಿತ್ತು. ಆದರೆ ಇದೀಗ ಉಭಯ ತಂಡಗಳು ಟೆಸ್ಟ್ ಸರಣಿಗಾಗಿ ಸಜ್ಜಾಗಿದ್ದು, ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪ್ರವೇಶದ ನಿರೀಕ್ಷೆಯಲ್ಲಿರುವ ಭಾರತ, ಬಾಂಗ್ಲಾ ವಿರುದ್ಧದ ಟೆಸ್ಟ್ ಸರಣಿ ಗೆಲುವಿನ ಲೆಕ್ಕಾಚಾರದಲ್ಲಿದೆ. ಆದರೆ ಒಂದೊಮ್ಮೆ ಭಾರತ ತನ್ನ ಮುಂದಿನ ಟೆಸ್ಟ್ ಪಂದ್ಯಗಳಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚಿನ ಪಂದ್ಯಗಳನ್ನ ಸೋತಲ್ಲಿ, ಇತರೆ ತಂಡದ ಫಲಿತಾಂಶವನ್ನ ಎದುರು ನೋಡಬೇಕಾಗುತ್ತಿದೆ.

ಟೆಸ್ಟ್ ಸರಣಿಗೆ ಸಜ್ಜಾಗಿರುವ ಭಾರತ ಸಾಕಷ್ಟು ಬದಲಾವಣೆಯೊಂದಿಗೆ ಕಣಕ್ಕಿಳಿಯಬೇಕಾಗಿದೆ. ನಾಯಕ ರೋಹಿತ್ ಶರ್ಮ ಗಾಯದ ಸಮಸ್ಯೆ ಕಾರಣದಿಂದ ತಂಡದಿಂದ ಹೊರಗುಳಿದಿದ್ದು, ಇವರ ಸ್ಥಾನದಲ್ಲಿ ಅಭಿಮನ್ಯು ಈಶ್ವರನ್ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ಕನ್ನಡಿಗ ಕೆಎಲ್ ರಾಹುಲ್ ಭಾರತ ತಂಡವನ್ನ ಮುನ್ನಡೆಸಲಿದ್ದು, ಅನುಭವಿ ಆಟಗಾರ ಚೇತೇಶ್ವರ್ ಪುಜಾರ ಉಪನಾಯಕನ ಜವಾಬ್ದಾರಿಯನ್ನ ನಿರ್ವಹಿಸಲಿದ್ದಾರೆ. ಇನ್ನೂ ಸರಣಿ ಆರಂಭಕ್ಕೂ ಮುನ್ನವೇ ತಂಡದಿಂದ ಹೊರಗುಳಿದಿರುವ ರವೀಂದ್ರ ಜಡೇಜಾ ಹಾಗೂ ಮೊಹಮ್ಮದ್ ಶಮಿ ಅವರ ಸ್ಥಾನಕ್ಕೆ ನವದೀಪ್ ಸೈನಿ ಹಾಗೂ ಎಡಗೈ ಸ್ಪಿನರ್ ಸೌರಭ್ ಕುಮಾರ್ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

ಮತ್ತೊಂದೆಡೆ ಬಾಂಗ್ಲಾದೇಶ ಕೂಡ ಗಾಯಾಳುಗಳ ಸಮಸ್ಯೆಗೆ ಸಿಲುಕಿದ್ದು, ಏಕದಿನ ಸರಣಿಯಿಂದ ಹೊರಗುಳಿದಿದ್ದ ತಮೀಮ್ ಇಕ್ಬಾಲ್ ಮೊದಲ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದಾರೆ. ಏಕದಿನ ಸರಣಿಯಲ್ಲಿ ಭಾರತಕ್ಕೆ ಸೋಲಿನ ಆಘಾತ ನೀಡಿದ್ದ ಮೆಹಿದಿ ಹಸನ್ ಟೆಸ್ಟ್ ಪಂದ್ಯದಲ್ಲೂ ಕಮಾಲ್ ಮಾಡುವ ನಿರೀಕ್ಷೆಯಲ್ಲಿದ್ದಾರೆ. ಉಳಿದಂತೆ ಮೊಮಿನಲ್ ಹಕ್, ಮುಶ್ಫಿಕರ್ ರಹೀಮ್ ಅವರು ತಂಡಕ್ಕೆ ಆಸರೆಯಾಗುವ ನಿರೀಕ್ಷೆಯಲ್ಲಿ ಕಣಕ್ಕಿಳಿಯುವ ತವಕದಲ್ಲಿದ್ದಾರೆ.
ಎರಡು ತಂಡಗಳ ನಡುವಿನ ಈವರೆಗಿನ ಮುಖಾಮುಖಿ ಗಮನಿಸಿದರೆ ಭಾರತದ ಪ್ರಾಬಲ್ಯ ಹೆಚ್ಚಾಗಿದೆ. ಟೆಸ್ಟ್ ಕ್ರಿಕೆಟ್ನಲ್ಲಿ ಭಾರತ ಹಾಗೂ ಬಾಂಗ್ಲಾದೇಶ 11 ಬಾರಿ ಮುಖಾಮುಖಿ ಆಗಿದ್ದು, 9 ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿದ್ದರೆ, 2 ಪಂದ್ಯ ಡ್ರಾ ಆಗಿದೆ. ಇನ್ನೂ ಬಾಂಗ್ಲಾ ನೆಲದಲ್ಲಿ ಸಹ ಭಾರತ ಮೇಲುಗೈ ಹೊಂದಿದ್ದು, ಆಡಿರುವ 8 ಪಂದ್ಯಗಳಲ್ಲಿ ಭಾರತ 6 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.
ಸಂಭಾವ್ಯ ತಂಡಗಳು:
ಬಾಂಗ್ಲಾದೇಶ: ನಜ್ಮುಲ್ ಶ್ಯಾಂಟೊ, ಮಹಮದುಲ್ ಹಸನ್ ಜಾಯ್, ಮೊಮಿನುಲ್ ಹಕ್, ಮುಶ್ಫಿಕರ್ ರಹೀಮ್, ಶಕೀಬ್ ಅಲ್ ಹಸನ್, ಲಿಟನ್ ದಾಸ್, ನುರುಲ್ ಹಸನ್, ಮೆಹಿದಿ ಹಸನ್, ತೈಜುಲ್ ಇಸ್ಲಾಂ, ತಸ್ಕಿನ್ ಅಹ್ಮದ್, ಎಬ್ದೂತ್ ಹೊಸೈನ್.
ಭಾರತ: ಶುಭ್ಮನ್ ಗಿಲ್, ಕೆಎಲ್ ರಾಹುಲ್, ಚೇತೇಶ್ವರ್ ಪುಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಬ್ ಪಂತ್, ರವಿಚಂದ್ರನ್ ಅಶ್ವಿನ್, ಅಕ್ಸರ್ ಪಟೇಲ್, ಶಾರ್ದೂಲ್ ಥಾಕೂರ್, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್.




