DISAPPOINTMENT OF FANS ON KANTARA 2: ಸದ್ಯಕ್ಕಿಲ್ಲ ಕಾಂತಾರ 2: ಏಕಾಏಕಿ ಮನಸ್ಸು ಬದಲಾಯಿಸಿದ್ದೇಕೆ ರಿಷಬ್..?

ಕಾಂತಾರ ಸಕ್ಸಸ್ ಬೆನ್ನಲ್ಲೇ ಕಾಂತಾರ ಪಾರ್ಟ್ 2 ಸಿನಿಮಾ ತಯಾರಿ ಮಾಡಲು ಚಿಂತಿಸಿದ್ದ ರಿಷಬ್. ಏಕಾಏಕಿ ಮನಸ್ಸು ಬದಲಾಯಿಸಿದ್ದು, ಕಾಂತಾರ 2 ಯೋಚನೆ ಸದ್ಯಕ್ಕಿಲ್ಲ ಎಂದಿದ್ದಾರೆ.
ಕಳೆದೆರಡು ದಿನಗಳ ಹಿಂದೆಯಷ್ಟೇ ನಿರ್ದೇಶಕ ಹಾಗೂ ನಟ ರಿಷಬ್ ಶೆಟ್ಟಿ ಕುಟುಂಬ ಸಮೇತ ಮಂಗಳೂರಿಗೆ ಭೇಟಿ ನೀಡಿ ಪಂಜುರ್ಲಿ ದೈವದ ಅನುಮತಿ ಪಡೆಯುವ ಮೂಲಕ ಕಾಂತಾರ ಸಿನಿಮಾ ಭಾಗ 2 ಮಾಡಲು ಮುಂದಾಗಿದ್ದರು‌. ದೈವವು ಕೆಲವು ಸೂಚನೆಗಳನ್ನು ನೀಡುವ ಮೂಲಕ ಅಪ್ಪಣೆ ನೀಡಿತ್ತು.
ಅಲ್ಲದೆ, ಈ ವಿಚಾರವನ್ನು ಧರ್ಮಸ್ಥಳದ ಧರ್ಮಾಧಿಕಾರಿಗಳ ಗಮನಕ್ಕೂ ತರುವಂತೆ, ಅವರ ಪರವಾನಿಗೆ ತೆಗೆದುಕೊಳ್ಳುವಂತೆ ಸೂಚಿಸಿತ್ತು. ಅಲ್ಲದೇ, ಶ್ರದ್ಧೆ ಮತ್ತು ಭಕ್ತಿಯಿಂದ ಸಿನಿಮಾ ಮಾಡುವಂತೆ ಆಜ್ಞೆಯನ್ನು ನೀಡಲಾಗಿತ್ತು.

ಇದಾದ ಮೇಲೆ ರಿಷಬ್ ಸ್ಕ್ರಿಪ್ಟ್ ಕೆಲಸದಲ್ಲಿ ತೊಡಗುವರು ಎನ್ನಲಾಗಿತ್ತು. ಆದರೆ ಇದೀಗ ಮಾಧ್ಯಮಗಳ ಜೊತೆ ಮಾತನಾಡಿರುವ ರಿಷಬ್, ಸದ್ಯಕ್ಕೆ ಕಾಂತಾರ 2 ಸಿನಿಮಾದ ಬಗ್ಗೆ ಏನೂ ಯೋಚನೆ ಮಾಡಿಲ್ಲ ಎಂದು ಹೇಳಿದ್ದಾರೆ. ಎಲ್ಲವೂ ಸರಿಯಾಗಿ ನಡೆಯುತ್ತಿವೆ ಎಂದುಕೊಂಡಾಗಲೇ ನಿರ್ದೇಶಕರ ಈ ಮಾತು ಗೊಂದಲವನ್ನುಂಟು ಮಾಡಿದೆ.
ರಿಷಬ್ ತನ್ನ ಟೀಂ ಜೊತೆಗೆ ಸೇರಿಕೊಂಡು ಕಾಂತಾರ ಸಿನಿಮಾ 2 ಕಥೆಯನ್ನು ಮತ್ತಷ್ಟು ವಿಸ್ತರಿಸಿ, ಭಿನ್ನವಾದ ನೆಲೆಯಲ್ಲಿ ಸಿನಿಮಾವನ್ನು ಕಟ್ಟಿಕೊಡಲಿದ್ದಾರೆ ಎನ್ನಲಾಗಿತ್ತು. ಆದರೆ, ಸಿನಿಮಾ ಬಗ್ಗೆ ಏನೂ ಯೋಚನೆ ಮಾಡಿಲ್ಲ ಎಂದು ಹೇಳುವ ಮೂಲಕ ಎಲ್ಲವನ್ನೂ ನಿರಾಕರಿಸಿದ್ದಾರೆ.
ಇನ್ನೂ, ಕಾಂತಾರ 2 ಸಧ್ಯಕ್ಕೆ ಮಾಡುವುದಿಲ್ಲ ಎಂದಿರುವ ನಡುವೆಯೇ ನಟ ರಿಷಬ್ ಶೆಟ್ಟಿ, ಬೆಲ್ ಬಾಟಮ್ 2 ಮಾಡ್ತಾರೆ ಎನ್ನಲಾಗುತ್ತಿದೆ. ಇದಕ್ಕೆ ವರ್ಷದ ಹಿಂದೆಯೇ ಈ ಸಿನಿಮಾ ಮುಹೂರ್ತ ಕೂಡ ಫಿಕ್ಸ್ ಆಗಿತ್ತು.

ಆದರೆ, ಇವೆರಡರಲ್ಲಿ ಯಾವುದನ್ನು ಮಾಡ್ತಾರೆ ಎಂಬುದರ ಬಗ್ಗೆ ಸ್ಪಷ್ಟತೆಯಿಲ್ಲ ಹಾಗೂ ಬೆಲ್ ಬಾಟಮ್ ಮಾಡುವ ಬಗ್ಗೆ ಆಗಲಿ, ಸಿನಿಮಾ ನಿರ್ಮಾಪಕರಾಗಲಿ ಯಾವುದೇ ಹೇಳಿಕೆಯನ್ನು ನೀಡಿಲ್ಲ. ಆದರೆ, ಸಿನಿ ವಲಯದಲ್ಲಿ ಬೆಲ್ ಬಾಟಮ್ 2 ನಿರ್ಮಾಣ ಮಾಡ್ತಾರೆ ಎಂಬ ಚರ್ಚೆಗಳು ನಡೆಯುತ್ತಿದ್ದು, ಸಧ್ಯದವರೆಗೂ ಮುಂದಿನ ನಡೆ ಏನು ಎಂಬುದು ರಿಷಬ್ ತಿಳಿಸಿಲ್ಲ.

#RISHABH SHETTY #KANTARA 2 #BELLBOTTOM -2 #PANJURLI GOD #DHARMASTHALA DHERMADHIKARI #VEERENDRA HEGGDE #NOT IMMIDIETLY

More News