ನವದೆಹಲಿ :ಡಿ.14 :ಕೋಟ್ಯಾಂತರ ಕ್ರಿಕೆಟ್ ಅಭಿಮಾನಿಗಳ ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) 2023ರ ಆವೃತ್ತಿಗೆ ಎಲ್ಲಾ ಫ್ರಾಂಚೈಸಿಗಳು ತಯಾರಿ ಆರಂಭಿಸಿದ್ದು, 2023ರ ಐಪಿಎಲ್ ಟೂರ್ನಿಯ ಆಟಗಾರರ ಹರಾಜು ಪ್ರಕ್ರಿಯೆ ಡಿ.23ರಂದು ಕೊಚ್ಚಿಯಲ್ಲಿ ನಡೆಯಲಿದೆ.
ಪ್ರಸಕ್ತ ಐಪಿಎಲ್ ಹರಾಜಿನಲ್ಲಿ ಭಾರತದ 273 ಆಟಗಾರರ ಹಾಗೂ 132 ವಿದೇಶಿ ಆಟಗಾರರು ಸೇರಿದಂತೆ ಒಟ್ಟು 405 ಆಟಗಾರರನ್ನ ಶಾರ್ಟ್‌ಲಿಸ್ಟ್ ಮಾಡಲಾಗಿದೆ. ಆದರೆ ಈ ಬಾರಿಯ ಐಪಿಎಲ್ ಮಿನಿ ಹರಾಜಿನಲ್ಲಿ ಭಾರತದ ಹಲವು ಹಿರಿಯ ಆಟಗಾರರು ಅನ್‌ಸೋಲ್ಡ್ ಆಗುವ ಸಾಧ್ಯತೆ ಹೆಚ್ಚಿದ್ದು, ಎಲ್ಲಾ ಫ್ರಾಂಚೈಸಿಗಳು ಯುವ ಆಟಗಾರರಿಗೆ ಹೆಚ್ಚಿನ ಆದ್ಯತೆ ನೀಡುವ ನಿರೀಕ್ಷೆಯಿದೆ.

ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಭಾರತದ ಆಟಗಾರರಲ್ಲಿ ಅಂಜಿಕ್ಯಾ ರಹಾನೆ ಅನ್‌ಸೋಲ್ಡ್ ಆಗುವ ಸಾಧ್ಯತೆ ಇದೆ. ಕಳೆದ ಆವೃತ್ತಿಯಲ್ಲಿ ಕೊಲ್ಕತ್ತಾ ನೈಟ್‌ರೈಡರ್ಸ್(ಕೆಕೆಆರ್) ಪರ ಆಡಿದ್ದ ರಹಾನೆ, ಈ ಬಾರಿ ಚುಟುಕು ಕ್ರಿಕೆಟ್ ಮಹಾಸಮರದಿಂದ ಹೊರಗುಳಿಯುವ ಸಾಧ್ಯತೆ ಇದೆ. ಫಾರ್ಮ್ ವೈಫಲ್ಯದಿಂದಾಗಿ ಅಜಿಂಕ್ಯಾ ರಹಾನೆ ಈಗಾಗಲೇ ಭಾರತದ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದಾರೆ.
ಇವರ ನಂತರದಲ್ಲಿ ಭಾರತ ಮತ್ತೋರ್ವ ಆಟಗಾರ ಅಮಿತ್ ಮಿಶ್ರಾ ಸಹ ಈ ಬಾರಿ ಯಾವುದೇ ಫ್ರಾಂಚೈಸಿಗೆ ಸೇರ್ಪಡೆಯಾಗುವ ಸಾಧ್ಯತೆ ತೀರಾ ಕಡಿಮೆ. ಐಪಿಎಲ್ ಟೂರ್ನಿಯ ಹಿರಿಯ ಆಟಗಾರ ಎಂಬ ಹಣೆಪಟ್ಟಿ ಹೊಂದಿರುವ ಅಮಿತ್ ಮಿಶ್ರಾ, ಕೊನೆಯದಾಗಿ 2019ರಲ್ಲಿ ಡೆಲ್ಲಿ ತಂಡದ ಪರ ಆಡಿದ್ದರು. ಆದರೆ ನಂತರದ ಆವೃತ್ತಿಗಳಲ್ಲಿ ಯಾವುದೇ ತಂಡಗಳು ಅಮಿತ್ ಮಿಶ್ರಾ ಅವರನ್ನ ಖರೀದಿಸುವ ಆಸಕ್ತಿ ತೋರಲಿಲ್ಲ.
ಐಪಿಎಲ್‌ನಲ್ಲಿ ಅನ್‌ಸೋಲ್ಡ್ ಆಗುವ ಸಾಧ್ಯತೆ ಇರುವ ಇನ್ನೋರ್ವ ಆಟಗಾರನೆಂದರೆ ಇಶಾಂತ್ ಶರ್ಮ. ಈ ಹಿಂದಿನ 2022ರ ಆವೃತ್ತಿಯಲ್ಲಿ ಯಾವುದೇ ತಂಡಕ್ಕೂ ಖರೀದಿಯಾಗದ ಇಶಾಂತ್ ಶರ್ಮ, ಈ ಬಾರಿಯೂ ಅನ್‌ಸೋಲ್ಡ್ ಆಗುವ ಸಾಧ್ಯತೆ ಇದೆ. ಇವರ ನಂತರದಲ್ಲಿ ಪಿಯೂಷ್ ಚಾವ್ಲಾ ಸಹ ಅನ್‌ಸೋಲ್ಡ್ ಆಗುವ ಎಲ್ಲಾ ಸಾಧ್ಯತೆಗಳು ಇವೆ. 2021ರಲ್ಲಿ 2 ಕೋಟಿ ರೂ.ಗಳಿಗೂ ಅಧಿಕ ಮೊತ್ತಕ್ಕೆ ಖರೀದಿಯಾಗಿದ್ದ ಪಿಯೂಷ್ ಚಾವ್ಲಾ ನಂತರದಲ್ಲಿ ಯಾವ ತಂಡಕ್ಕೂ ಆಯ್ಕೆಯಾಗಲಿಲ್ಲ. ಇನ್ನೂ ಒಂದು ಕಾಲದಲ್ಲಿ ಚೆನ್ನೈ ಸೂಪರ್ ಕಿಂಗ್ಸ್(ಸಿಎಸ್‌ಕೆ) ತಂಡದ ಪ್ರಮುಖ ಬೌಲರ್ ಆಗಿದ್ದ ಮೋಹಿತ್ ಶರ್ಮ, ಸಹ ಅನ್‌ಸೋಲ್ಡ್ ಆಟಗಾರರ ಲಿಸ್ಟ್‌ನಲ್ಲಿ ಗುರುತಿಸಿಕೊಂಡಿದ್ದಾರೆ.

ಈ ಎಲ್ಲಾ ಆಟಗಾರರು 2023ರ ಐಪಿಎಲ್‌ನಲ್ಲಿ ಯಾವುದಾದರೋ ಫ್ರಾಂಚೈಸಿಯಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿದ್ದಾರೆ. ಇವರಲ್ಲಿ ಅಜಿಂಕ್ಯಾ ರಹಾನೆ, ಅಮಿತ್ ಮಿಶ್ರಾ ಹಾಗೂ ಮೋಹಿತ್ ಶರ್ಮ ಅವರು ತಮ್ಮ ಆರಂಭಿಕ ಮೊತ್ತ 50 ಲಕ್ಷ ರೂ. ಎಂದು ಘೋಷಿಸಿಕೊಂಡಿದ್ದಾರೆ. ಆದರೆ ಟೀಂ ಇಂಡಿಯಾದ ಈ ಅನುಭವಿ ಆಟಗಾರರಿಗೆ ಯಾವ ತಂಡಗಳು ಮಣೆ ಹಾಕುತ್ತವೆ ಎಂದು ಕಾದು ನೋಡಬೇಕಿದೆ.




