ನವದೆಹಲಿ; ಡಿ15: ಶ್ರದ್ಧಾ ವಾಕರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಕೈಗೆತ್ತಿಕೊಂಡಿರುವ ದೆಹಲಿ ಪೊಲೀಸರಿಗೆ ಮತ್ತೊಂದು ಮಹತ್ತರವಾದ ಮಾಹಿತಿ ಸಿಕ್ಕಿದೆ. ಮೆಹ್ರೌಲಿ ಅರಣ್ಯದಿಂದ ಮೂಳೆಗಳ ರೂಪದಲ್ಲಿ ಸಿಕ್ಕಿದ್ದ ಬಾಡಿ ಪೀಸ್ ಗಳನ್ನು ಡಿಎನ್ಎ ಪರೀಕ್ಷೆಯಲ್ಲಿ ಶ್ರದ್ಧಾ ಅವರ ತಂದೆಯವರ ಡಿಎನ್ಎ ಗೆ ಹೊಂದಿಕೆಯಾಗಿದೆ.
ಈಗಾಗಲೇ ಅಫ್ತಾಬ್ ನನ್ನು ಅರೆಸ್ಟ್ ಮಾಡಿದ ಮೇಲೆ ದೆಹಲಿ ಪೋಲಿಸರು ತೀವ್ರ ವಿಚಾರಣೆ ನಡೆಸಿದ್ದಾರೆ. ಆ ಸಂದರ್ಭದಲ್ಲಿ ಮೆಹ್ರೌಲಿ ಅರಣ್ಯ ಮತ್ತು ಗುರುಗ್ರಾಮ್‌ನಲ್ಲಿ ಆತ ಹೇಳಿದ ಸ್ಥಳದಿಂದ ಪೊಲೀಸರು ಮೃತದೇಹದ ಹಲವಾರು ತುಂಡುಗಳು ಮೂಳೆಗಳ ರೂಪದಲ್ಲಿ ಸಿಕ್ಕಿದ್ದವು. ಇದೇ ಸಂದರ್ಭದಲ್ಲಿ ಮಾನವ ದೇಹದ ದವಡೆಯೂ ಪತ್ತೆಯಾಗಿದೆ. ಹೀಗಾಗಿ, ಹೆಚ್ಚಿನ ತನಿಖೆಗಾಗಿ ಸಿಎಫ್‌ಎಸ್‌ಎಲ್ ಲ್ಯಾಬ್‌ಗೆ ಕಳುಹಿಸಲಾಗಿತ್ತು. ಅಲ್ಲಿ ತಂದೆಯ ಮಾದರಿಯನ್ನು ಪಡೆದು ಡಿಎನ್ಎ ಪರೀಕ್ಷೆಗೆ ಪಡೆದುಕೊಳ್ಳಲಾಗಿದೆ..

ಅಫ್ತಾಬ್ ಹಾಗೂ ಶ್ರದ್ಧಾ ಇಬ್ಬರೂ ಮುಂಬೈ ನಿವಾಸಿಗಳಾಗಿದ್ದವರು ಮೊಬೈಲ್ ಆಪ್ ಮೂಲಕ ಲೀವ್ ಇನ್ ರಿಲೇಶನ್ ಶಿಪ್ ನಲ್ಲಿ ಜೊತೆಯಾಗಿದ್ದರು. ಅದಾದ ಮೇಲೆ ಇವರ ಪ್ರೀತಿಗೆ ಮನೆಯವರ ಸಹಮತ ಸಿಗಲಿಲ್ಲವೆಂದು ಇಬ್ಬರೂ ದೆಹಲಿಗೆ ಹೋಗಿ ಒಟ್ಟಿಗೆ ಇದ್ದರು. ಇಲ್ಲಿನ ಮೆಹ್ರುಲಿ ಪ್ರದೇಶದಲ್ಲಿ ಫ್ಲಾಟ್‌ಅನ್ನು ಬಾಡಿಗೆಗೆ ತೆಗೆದುಕೊಂಡು ವಾಸ ಮಾಡುತ್ತಿದ್ದರು. ಆದರೆ, ಮದುವೆಯ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ
ಜಗಳ ನಡೆದಿತ್ತು. ಮೇ. 18 ರಂದು ಶ್ರದ್ಧಾಳ ಜೊತೆ ಜಗಳವಾಡಿದ್ದೆ ಎಂದು ಅಫ್ತಾಭ್ ವಿಚಾರಣೆ ಸಂದರ್ಭದಲ್ಲಿ ಬಾಯಿಬಿಟ್ಟಿದ್ದ. ಆಮೇಲೆ ಜಗಳ ಅತಿಯಾದ ಹಿನ್ನೆಲೆಯಲ್ಲಿ ಅಫ್ತಾಬ್ ಶ್ರದ್ಧಾಳನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದ. ಆನಂತರ ಆಕೆಯನ್ನು 35 ತುಂಡುಗಳಾಗಿ ಮಾಡಿ, ಹೊಸ ಪ್ರಿಡ್ಜ್ ತಂದು ಅದರಲ್ಲಿರಿಸಿದ್ದ. ಪ್ರತಿದಿನ ಒಂದೊಂದೆಡೆ ಪೀಸ್ ಅನ್ನು ತೆಗೆದುಕೊಂಡು ಹೋಗಿ ಕಾಡಿನಲ್ಲಿ ಬಿಸಾಡಿ ಬರುತ್ತಿದ್ದ ಎಂಬುದನ್ನು ವಿಚಾರಣೆ ವೇಳೆ ತಿಳಿಸಿದ್ದ.

ಶ್ರದ್ಧಾ ಹತ್ಯೆ ಮಾಡಿದ ಮೇಲೆಯೂ ಅಫ್ತಾಬ್ ಇದೇ ಮನೆಯಲ್ಲಿ ವಾಸ ಮಾಡುತ್ತಿದ್ದ. ಆಕೆಯು ಬದುಕು ಉಳಿದಿಲ್ಲ ಎಂಬ ಅನುಮಾನ ಬಾರದ ಹಾಗೇ ಶ್ರದ್ಧಾಳ ಸೋಶಿಯಲ್ ಮೀಡಿಯಾಗಳನ್ನು ಬಳಕೆ ಮಾಡುತ್ತಿದ್ದ. ಆದರೆ, ಆಕೆಗೆ ಕರೆ ಮಾಡಿದರೆ ಪೋನ್ ಸ್ವಿಚ್ ಆಪ್ ಆಗಿತ್ತು. ಇದರಿಂದ ಅನುಮಾನಗೊಂಡ ಆಕೆಯ ಪೋಷಕರು, ದೆಹಲಿಗೆ ಬಂದಿದ್ದರು. ಆಗ ಸತ್ಯ ಹೊರ ಬಂದಿದೆ. ಆಗ ಈ ಬಗ್ಗೆ ಮಾಹಿತಿ ಸಂಗ್ರಹಿಸಿ ಕೇಸ್ ದಾಖಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಶ್ರದ್ಧಾ ಮತ್ತು ಅಫ್ತಾಬ್ ಮೊಬೈಲ್ ಲೊಕೇಶನ್ ಮತ್ತು ಹಣ ತೆಗೆದ ವಿವರಗಳ ಸಹಾಯದಿಂದ ಪೊಲೀಸರು ಅಫ್ತಾಬ್‌ನ ಬಳಿ ಆಗಮಿಸಿ ವಿಚಾರಣೆ ಮಾಡಿ, ನವೆಂಬರ್ 12 ರಂದು ಬಂಧಿಸಿದ್ದರು.




