First Test in India’s Grip : ಗಿಲ್‌-ಪುಜಾರ ಶತಕದ ಅಬ್ಬರ : ಭಾರತದ ಹಿಡಿತದಲ್ಲಿ ಮೊದಲ ಟೆಸ್ಟ್‌

ನವದೆಹಲಿ ; ಡಿ.6: ಬೌಲಿಂಗ್‌ಗಳ ಸಂಘಟಿತ ಪ್ರದರ್ಶನದಿಂದ ದೊರೆತ ಮುನ್ನಡೆಯೊಂದಿಗೆ ಆರಂಭಿಕ ಬ್ಯಾಟ್ಸ್‌ಮನ್‌ ಶುಭ್ಮನ್‌ ಗಿಲ್‌(110) ಹಾಗೂ ಚೇತೇಶ್ವರ್‌ ಪುಜಾರ್‌(102*) ಅವರುಗಳ ಜವಾಬ್ದಾರಿಯುತ ಶತಕದ ನೆರವಿನಿಂದಾಗಿ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಭಾರತ ಸಂಪೂರ್ಣ ಹಿಡಿತ ಸಾಧಿಸಿದೆ.

ಚೆಟ್ಟೋಗ್ರಾಮ್‌ನಲ್ಲಿ ನಡೆಯುತ್ತಿರುವ ಪಂದ್ಯದ ಮೂರನೇ ದಿನವಾದ ಶುಕ್ರವಾರ ಭಾರತೀಯ ಆಟಗಾರರ ಪ್ರಾಬಲ್ಯ ಮುಂದುವರಿಯಿತು. 2ನೇ ದಿನದಂತ್ಯಕ್ಕೆ 138/8 ರನ್‌ಗಳಿಂದ 3ನೇ ದಿನದಾಟ ಆರಂಭಿಸಿದ ಬಾಂಗ್ಲಾ, 12 ರನ್‌ಗಳಿಸುವ ಮೂಲಕ 150 ರನ್‌ಗಳಿಗೆ ಆಲೌಟ್‌ ಆಯಿತು. ಇದರ ಪರಿಣಾಮ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 254 ರನ್‌ಗಳ ಬೃಹತ್‌ ಮುನ್ನಡೆ ಪಡೆಯಿತು. ಭಾರತದ ಪರ ಕುಲ್ದೀಪ್‌ ಯಾದವ್‌ 5, ಸಿರಾಜ್‌ 3, ಅಕ್ಸರ್‌ ಹಾಗೂ ಉಮೇಶ್‌ ತಲಾ 1 ವಿಕೆಟ್‌ ಪಡೆದು ಮಿಂಚಿದರು.

ಗಿಲ್‌-ಪುಜಾರ ಶತಕದ ಮಿಂಚು:

1ನೇ ಇನ್ನಿಂಗ್ಸ್‌ನಲ್ಲಿ ದೊರೆತ 254 ರನ್‌ಗಳ ಬೃಹತ್‌ ಮುನ್ನಡೆಯೊಂದಿಗೆ ದ್ವಿತೀಯ ಇನ್ನಿಂಗ್ಸ್‌ ಆರಂಭಿಸಿದ ಟೀಂ ಇಂಡಿಯಾ ಮತ್ತೊಮ್ಮೆ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿತು. ಆರಂಭಿಕನಾಗಿ ಕಣಕ್ಕಿಳಿದ ಶುಭ್ಮನ್‌ ಗಿಲ್‌(110) ಹಾಗೂ ಚೇತೇಶ್ವರ್‌ ಪುಜಾರ(102) ಅದ್ಭುತ ಆಟವಾಡಿದರು. ಅತಿಥೇಯ ತಂಡದ ಬೌಲರ್‌ಗಳ ಮೇಲೆ ಹಿಡಿತ ಸಾಧಿಸಿದ ಈ ಇಬ್ಬರು ಆಟಗಾರರು ಶತಕ ಸಿಡಿಸುವ ಮೂಲಕ ತಂಡದ ಮುನ್ನಡೆ ಮೊತ್ತವನ್ನ 500 ರನ್‌ಗಳ ಗಡಿದಾಟಿಸಿದರು. ಉಳಿದಂತೆ ನಾಯಕ ಕೆಎಲ್‌ ರಾಹುಲ್‌ 23 ಹಾಗೂ ವಿರಾಟ್‌ ಕೊಹ್ಲಿ 19 ರನ್‌ಗಳಿಸಿದರು. ಅಂತಿಮವಾಗಿ 2ನೇ ಇನ್ನಿಂಗ್ಸ್‌ನಲ್ಲಿ 258/2 ರನ್‌ಗಳಿಸಿದ್ದ ಭಾರತ 512 ರನ್‌ಗಳ ಬೃಹತ್‌ ಮುನ್ನಡೆಯೊಂದಿಗೆ ಇನ್ನಿಂಗ್ಸ್‌ ಡಿಕ್ಲೇರ್‌ ಮಾಡಿಕೊಂಡಿತು.

ಬಾಂಗ್ಲಾಕ್ಕೆ ಕಠಿಣ ಟಾರ್ಗೆಟ್‌:

ಭಾರತ ನೀಡಿದ 513 ರನ್‌ಗಳ ಬೃಹತ್‌ ಸವಾಲು ಬೆನ್ನತ್ತಿರುವ ಬಾಂಗ್ಲಾ 3ನೇ ದಿನದಂತ್ಯಕ್ಕೆ ಯಾವುದೇ ವಿಕೆಟ್‌ ನಷ್ಟವಿಲ್ಲದೇ 42 ರನ್‌ಗಳಿಸಿದೆ. ಅತಿಥೇಯ ತಂಡದ ಪರ ಆರಂಭಿಕರಾದ ಶ್ಯಾಂಟೋ(25) ಹಾಗೂ ಜಾಕಿರ್‌ ಹುಸೇನ್‌(17) 4ನೇ ದಿನಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

More News