ರಾಯಚೂರು: ರಾಯಚೂರು ಜಿಲ್ಲೆಯಲ್ಲಿ 5 ವರ್ಷದ ಬಾಲಕಿಯಲ್ಲಿ ಝೀಕಾ ವೈರಸ್ ಸೋಂಕು ಪತ್ತೆಯಾಗಿದ್ದು, ರಾಜ್ಯದ ಜನರಲ್ಲಿ ಆತಂಕ ಮನೆ ಮಾಡಿದೆ. ಕೊರೊನಾ ಸೋಂಕಿನ ಬಳಿಕ ಕಂಡುಬಂದಿರುವ ಈ ಝೀಕಾ ವೈರಸ್ ರಾಜ್ಯದ ಜನರಲ್ಲಿ ಅಲ್ಪ ಪ್ರಮಾಣದ ಭೀತಿಯನ್ನುಂಟು ಮಾಡಿದೆ.
ಆದರೆ, ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಶಂಕರ್ ಪಾಟೀಲ್ ಮುನೇನಕೊಪ್ಪ ಮಾಡಿರುವ ಒಂದು ಯಡವಟ್ಟು ಕುಟುಂಬವೊಂದರಲ್ಲಿ ಇನ್ನಷ್ಟು ಆತಂಕವನ್ನುಂಟು ಮಾಡಿದೆ. ಝೀಕಾ ವೈರಸ್ ಸೋಂಕಿತ ಬಾಲಕಿ ಮೃತಪಟ್ಟಿದ್ದಾಳೆ ಎಂದು ಹೇಳುವುದರ ಮೂಲಕ ಕೆಲ ಹೊತ್ತು ಕುಟುಂಬಸ್ಥರನ್ನು ಗಾಬರಿಗೊಳಿಸಿದರು.
ಸಚಿವರು ರಾಯಚೂರಿನಲ್ಲಿ ಸೋಂಕು ನಿಯಂತ್ರಣದ ಕುರಿತು ನಡೆದ ಅಧಿಕಾರಿಗಳ ಸಭೆಯಲ್ಲಿ ಭಾಗಿಯಾಗಿದ್ದರು. ಮೊದಲ ಸಭೆಯಲ್ಲಿಯೇ ಅವರು ಮಹಾ ಎಡವಟ್ಟು ಮಾಡಿಕೊಂಡಿದ್ದಾರೆ. ಸೋಂಕಿತ ಬಾಲಕಿ ಮೃತಪಟ್ಟಿದ್ದಾಳೆ. ಸಾವನ್ನಪ್ಪಿದ ಬಾಲಕಿಯ ಮನೆಯವರ ಸ್ಯಾಂಪಲ್ ಪಡೆಯಲಾಗಿದೆ ಎಂದು ಹೇಳಿದ್ದಾರೆ.

ಕೂಡಲೇ ಅಲ್ಲೇ ಇದ್ದ ಅಧಿಕಾರಿಗಳು, ತಕ್ಷಣವೇ ಸಚಿವರನ್ನು ಎಚ್ಚರಿಸಿ ಸಾವು ಆಗಿಲ್ಲ ಎಂದು ತಿಳಿಸಿದ್ರು. ಬಳಿಕ ಅಧಿಕಾರಿಗಳು ಹೇಳಿದ ಮೇಲೆ ಪಾಸಿಟಿವ್ ಆಗಿದೆ ಅಂತಾ ಎಡವಟ್ಟು ಹೇಳಿಕೆಗೆ ತೇಪೆ ಹಚ್ಚಲು ಮುಂದಾದರು. ಸಭೆಯಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಭಾಗಿಯಾಗಿದ್ದರು.
ಆದರೆ ಸಚಿವರ ಪಡೆದ ಅರ್ಧಂಬರ್ಧ ಮಾಹಿತಿಯಿಂದ ಬೇರೆಯವರಿಗೆ ಎಷ್ಟು ನೋವಾಗುತ್ತದೆ ಎಂಬುದರ ಅರಿವೆ ಇಲ್ಲದಂತಾಗಿದೆ. ಸಚಿವ ಮುನೇನಕೊಪ್ಪ ಅವರ ಎಡವಟ್ಟು ಪೋಷಕರನ್ನು ಇನ್ನು ಆತಂಕದಲ್ಲಿರಿಸಿದೆ.
#SHANKAR PATIL MUNENAKOPPA #RAICHURU #KDP MEETING #ZIKA VIRUS




