ಹೈದ್ರಾಬಾದ್ : ಡಿ.17: ಸೋಶಿಯಲ್ ಮೀಡಿಯಾದಲ್ಲಿ ಮೆಗಾಸ್ಟಾರ್ ಚಿರಂಜೀವಿ ಮನೆಗೆ ಹೊಸ ಅತಿಥಿ ಬರ್ತಾರೆ ಎಂಬ ನಿರೀಕ್ಷೆಯ ಸುದ್ದಿಯನ್ನು ಹಂಚಿಕೊಂಡ ಕೆಲ ದಿನಗಳ ನಂತರ ಇನ್ನೊಂದು ಸುದ್ದಿ ಹರಿದಾಡುತ್ತಿದ್ದು, ಚಿರು ಮಗ ನಟ ಚರಣ್ ಮತ್ತು ಉಪಾಸನ ಅವರು ಸರೋಗಸಿ ವಿಧಾನದ ಮೂಲಕ ಮಕ್ಕಳನ್ನು ಪಡೆಯಲಿದ್ದಾರೆ ಎನ್ನಲಾಗ್ತಿದೆ.

ನಟ ಮೆಗಸ್ಟಾರ್ ಚಿರಂಜೀವಿ ಅವರು ಇತ್ತೀಚಿಗೆ ತಮ್ಮ ಮನೆಗೆ ಹೊಸ ಅತಿಥಿ ಬರುತ್ತಿದ್ದಾರೆ ಎಂದು ಘೋಷಣೆ ಮಾಡಿಕೊಂಡಿದ್ದರು. ಅದರಂತೆ ತಮ್ಮ ಮಗ ಚರಣ್ ಹಾಗೂ ಉಪಾಸನ ಅವರಿಗೆ ಮೊದಲ ಮಗುವಾಗಲಿದೆ ಎನ್ನಲಾಗಿತ್ತು. ಈ ಸಂಬಂಧ ನಟ ಚಿರಂಜೀವಿ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದರು. ಇದನ್ನು ತಿಳಿದ ಅಭಿಮಾನಿಗಳ ಮೊಗದಲ್ಲಿ ಸಂತಸವೂ ಮೂಡಿತ್ತು. ಚರಣ್ ಮತ್ತು ಉಪಾಸನ ದಂಪತಿಗಳಾಗಿ 10 ವರ್ಷಗಳು ಕಳೆದಿವೆ. ಇದೀಗ ಈ ದಂಪತಿಗಳಿಗೆ ಮಗುವಾಗುತ್ತಿರುವ ವಿಚಾರ ವಿಶೇಷವಾದದ್ದು. ಈ ವಿಚಾರವು ಎಲ್ಲೆಡೆ ವೈರಲ್ ಆಗಿತ್ತು. ಮೆಗಾ ಕುಟುಂಬದವರು, ಅಭಿಮಾನಿಗಳು ಸಂತಸ ಪಡುತ್ತಿರುವ ಸಂದರ್ಭದಲ್ಲಿಯೇ ಮತ್ತೊಂದು ಸುದ್ದಿ ಹರಿದಾಡುತ್ತಿದ್ದು, ಚರಣ್ ಮತ್ತು ಉಪಾಸನಾ ಅವರು ಸರೋಗಸಿ ಪದ್ದತಿಯ ಮೂಲಕ ಮಕ್ಕಳನ್ನು ಪಡೆಯಲಿದ್ದಾರೆ ಎಂಬ ವದಂತಿ ಹರಿದಾಡುತ್ತಿದೆ.

ಈ ಬಗ್ಗೆ ಕೆಲವರು ಅನುಮಾನ ವ್ಯಕ್ತಪಡಿಸಿ, ತಮ್ಮದೇ ಕೆಲ ಊಹಾಪೋಹದ ಲೆಕ್ಕಾಚಾರವನ್ನು ಮುಂದಿಡುತ್ತಿದ್ದಾರೆ.
ಇತ್ತೀಚೆಗೆ ನಯನತಾರ ದಂಪತಿಗಳು ಸರೋಗಸಿ ವಿಧಾನದ ಮೂಲಕ ಮಕ್ಕಳನ್ನು ಪಡೆದುಕೊಂಡು ಸಾಕಷ್ಟು ಚರ್ಚೆಗೆ ಕಾರಣವಾಗಿದ್ದರು. ಅನೇಕರು ಅವರ ಕ್ರಮವನ್ನು ಸಮ್ಮತಿಸಿದ್ದರೂ ಕೂಡ. ಅವರಂತೆಯೇ ದೇಶದಲ್ಲಿ ಅನೇಕ ಸೆಲೆಬ್ರಿಟಿ ಗಳು ಈ ಸರೋಗಸಿ ಪದ್ದತಿ ಮೂಲಕ ಮಕ್ಕಳನ್ನು ಪಡೆಯುವುದು ಸಾಮಾನ್ಯವಾಗಿ ಬಿಟ್ಟಿದೆ. ಇನ್ನೂ, ನಟ ಚರಣ್ ಹಾಗೂ ಉಪಾಸನ ಹಿಂದಿನಿಂದಲೂ ಈ ವಿಧಾನದಲ್ಲಿ ಮಕ್ಕಳನ್ನು ಪಡೆಯುವ ಬಗ್ಗೆ ಯೋಚನೆ ಮಾಡಿದ್ದರು ಎಂಬ ಚರ್ಚೆಗಳು ಸಹ ನಡೆಯುತ್ತಿದೆ.

ಸರೋಗಸಿ ವಿಧಾನದ ಮೂಲಕ ಮಕ್ಕಳನ್ನು ಪಡೆಯಲು ಮುಂದಾಗಿದ್ದಾರೆ ಎಂದು ಚರ್ಚೆಗಳ ನಡುವೆಯೇ ಉಪಾಸನ ತಮ್ಮ ತವರು ಮನೆ ಕಡೆ ಮುಖ ಮಾಡಿದ್ದಾರೆ. ತವರು ಕಡೆಗೆ ಹೊರಟಿರುವ ಸಂಬಂಧ ಟ್ವೀಟ್ ಮಾಡಿರುವ ಉಪಾಸನ, ತನ್ನ ಅಮ್ಮ, ಅಜ್ಜಿ ಹಾಗೂ ಕುಟುಂಬದ ಆಶೀರ್ವಾದ ಪಡೆದುಕೊಂಡಿದ್ದೇನೆ. ನಾನು ಅಮ್ಮತನವನ್ನು ಅನುಭವಿಸಲು ಮುಂದಾಗಿರುವೆ ಎಂದು ಬರೆದುಕೊಂಡಿದ್ದಾರೆ.
ಸರೋಗಸಿ ವಿಧಾನ ಅಂದರೆ ಏನು?

ಅನಿವಾರ್ಯ ಕಾರಣಗಳಿಂದಾಗಿ ಮಕ್ಕಳು ಆಗದಿದ್ದ ಪಕ್ಷದಲ್ಲಿ ಬಾಡಿಗೆ ಗರ್ಭದ ಮೂಲಕ ಮಕ್ಕಳನ್ನು ಪಡೆಯುವ ಪದ್ದತಿಗೆ ಸರೋಗಸಿ ವಿಧಾನ ಅಂತಾರೆ. ಇತರ ಮಹಿಳೆ ಹಾಗೂ ಪುರುಷರಿಗೆ ಜನಿಸುವ ಮಗುವನ್ನು, ಮತ್ತೊಬ್ಬ ಹೆಣ್ಣು ತನ್ನ ಗರ್ಭದಲ್ಲಿ ಹೊತ್ತು ಹೆರುವ ವಿಧಾನವನ್ನು ಸರೋಗಸಿ ಅಂತಾರೆ. ಇದಕ್ಕೆ ಭಾರತದಲ್ಲಿ ಮಾನ್ಯವಿಲ್ಲ. ಅದಕ್ಕಾಗಿ ನಯನತಾರ ದಂಪತಿಗಳು ವಿವಾದಕ್ಕೀಡಾಗಿದ್ದರು. ಆದರೆ, ನಾವು ಕಾನೂನಾತ್ಮಕವಾಗಿ ಮಕ್ಕಳನ್ನು ಪಡೆದಿದ್ದೇವೆ ಎಂಬುದನ್ನು ಅವರು ಸಾಬೀತು ಮಾಡಿದ್ದರು. ಅದಕ್ಕೆ ಶಿಕ್ಷೆಯಿಂದ ತಪ್ಪಿಸಿಕೊಂಡರು.




