ನವದೆಹಲಿ ;ಡಿ.18: ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್ ಬಳಿಯ ವಾಸ್ತವ ಗಡಿ ನಿಯಂತ್ರಣ ರೇಖೆ(ಎಲ್‌ಎಸಿ)ಯಲ್ಲಿ ನಡೆದ ಭಾರತ-ಚೀನಾ ಯೋಧರ ಘರ್ಷಣೆ ಕುರಿತು, ಆಮ್ ಆದ್ಮಿ ಪಕ್ಷ(ಆಪ್)ದ ರಾಷ್ಟ್ರೀಯ ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಗಡಿ ಅತಿಕ್ರಮಣ ಮಾಡಿದ ಚೀನಾವನ್ನು ಶಿಕ್ಷಿಸುವ ಬದಲು, ಪ್ರಧಾನಿ ಮೋದಿ ಅವರು ಚೀನಾಗೆ ಒಳ್ಳೆಯ ಬಹುಮಾನ ನೀಡಿದ್ದಾರೆ ಎಂದು ಅರವಿಂದ್ ಕೇಜ್ರಿವಾಲ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಗಡಿಯಲ್ಲಿ ಎಲ್ಲವೂ ಸರಿಯಿದೆ ಎಂದು ಹೇಳುವ ಮೂಲಕ, ಪ್ರಧಾನಿ ಮೋದಿ ಸರ್ಕಾರ ಚೀನಾಗೆ ಉಚಿತವಾಗಿ ಉಡುಗೊರೆ ನೀಡುತ್ತಿದೆ ಎಂದು ಅರವಿಂದ್ ಕೇಜ್ರಿವಾಲ್ ಹರಿಹಾಯ್ದಿದ್ದಾರೆ.

ಕೇಂದ್ರ ಸರ್ಕಾರದ ಎಲ್ಲವೂ ಸರಿಯಿದೆ ಎಂಬ ಕಥಾಹಂದರ ಚೀನಾಗೆ ಭಾರೀ ಬಹುಮಾನವಾಗಿ ಕಾಣಿಸುತ್ತಿದೆ. ಗಡಿಯಲ್ಲಿ ತಾನು ಏನೇ ಮಾಡಿದರೂ, ಭಾರತ ಸರ್ಕಾರ ಅದನ್ನು ತನ್ನ ಜನರಿಂದ ಮುಚ್ಚಿಡುತ್ತದೆ ಎಂಬ ಸತ್ಯ ಅದಕ್ಕೆ ಗೊತ್ತಾಗಿದೆ. ಇದೇ ಕಾರಣಕ್ಕೆ ಚೀನಾ ಆಗಾಗ ಗಡಿ ಅತಿಕ್ರಮಣ ಮಾಡುತ್ತಿದೆ ಎಂದು ಅರವಿಂದ್ ಕೇಜ್ರಿವಾಲ್ ಗಂಭೀರ ಆರೋಪ ಮಾಡಿದ್ದಾರೆ.

ನಾವು ಚೀನಾದಿಂದ ಸರಕುಗಳನ್ನು ಹೆಚ್ಚಾಗಿ ಖರೀದಿಸುತ್ತಿದ್ದೇವೆ. ಕೇವಲ 2020-21ರ ಆರ್ಥಿಕ ವರ್ಷದಲ್ಲಿ ನಾವು ಚೀನಾದಿಂದ ಬರೋಬ್ಬರಿ 65 ಬಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ಸರಕುಗಳನ್ನು ಖರೀದಿಸಿದ್ದೇವೆ. ಚೀನಾದ ಆಕ್ರಮಣವು ಹೆಚ್ಚಾದ ಬಳಿಕವೂ ನಾವು ಎಚ್ಚೆತ್ತುಕೊಂಡಿಲ್ಲ. ಈಗ ನಾವು ಚೀನಾದಿಂದ 95 ಬಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ಸರಕುಗಳನ್ನು ಖರೀದಿಸಿದ್ದೇವೆ. ನಾವು ಸ್ಥಳೀಯ ಉತ್ಪಾದನೆಯನ್ನು ಹೆಚ್ಚಿಸಲು ಸಾಧ್ಯವಿಲ್ಲವೇ? ಬಿಜೆಪಿ ಸರ್ಕಾರಕ್ಕೆ ನಮ್ಮ ಸೈನಿಕರ ಪ್ರಾಣದ ಬಗ್ಗೆ ಕಾಳಜಿ ಇಲ್ಲ ಎಂದು ಕೇಜ್ರಿವಾಲ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಗಡಿ ಘರ್ಷಣೆಯಾದಾಗ ಚೀನಾ ವಸ್ತು ಬಹಿಷ್ಕರಿಸಿ ಎಂಬ ಅಭಿಯಾನ ಆರಂಭವಾಗುತ್ತದೆ. ಆದರೆ ವಿವಾದ ತಣ್ಣಗಾದ ಬಳಿಕ ಮತ್ತೆ ಚೀನಾದೊಂದಿಗೆ ನಾವು ಭಾರೀ ಪ್ರಮಾಣದಲ್ಲಿ ವ್ಯವಹಾರ ನಡೆಸುತ್ತೇವೆ. ನಮ್ಮ ಈ ದೌರ್ಬಲ್ಯವನ್ನು ಅರಿತಿರುವ ಚೀನಾ, ಆಗಾಗ ಗಡಿ ಅತಿಕ್ರಮಣ ಮಾಡಿ ನಗೆ ಬೀರುತ್ತಿದೆ ಎಂದು ದೆಹಲಿ ಸಿಎಂ ಅಸಮಾಧಾನ ಹೊರಹಾಕಿದ್ದಾರೆ.

ಮೋದಿ ಸರ್ಕಾರಕ್ಕೆ ನಿಜಕ್ಕೂ ನಮ್ಮ ಸೈನಿಕರ ಬಗ್ಗೆ ಕಾಲಜಿ ಇದ್ದರೆ, ಗಡಿಯಲ್ಲಿ ಹೂಂಕರಿಸುವ ಚೀನಾವನ್ನು ನಿಯಂತ್ರಣದಲ್ಲಿಡಬೇಕು. ಆ ದೇಶದೊಂದಿಗೆ ವ್ಯಾಪಾರ ಕಡಿಮೆ ಮಾಡುವ ಮೂಲಕ ತಕ್ಕ ಪಾಠ ಕಲಿಸಬೇಕು. ಅದನ್ನು ಬಿಟ್ಟು ಪ್ರತಿ ಬಾರಿಯೂ ಎಲ್ಲವೂ ಸರಿಯಿದೆ ಎಂದು ಕಥೆ ಹೇಳಿ ದೇಶದ ಜನರಿಗೆ ಮೋಸ ಮಾಡಬಾರದು ಎಂದು ಅರವಿಂದ್ ಕೇಜ್ರಿವಾಲ್ ಆಗ್ರಹಿಸಿದ್ದಾರೆ.
ಗಲ್ವಾನ್ ಘರ್ಷಣೆಯಲ್ಲಿ ನಾವು ನಮ್ಮ ಧೀರ ಯೋಧರನ್ನು ಕಳೆದುಕೊಂಡಿದ್ದೇವೆ. ಈಗ ತವಾಂಗ್ ಘರ್ಷಣೆ ಮೂಲಕ ಚೀನಾ ಮತ್ತೆ ಭಾರತವನ್ನು ಕೆಣಕಿದೆ. ಆದರೆ ಮೋದಿ ಸರ್ಕಾರ ಈ ಬಾರಿಯೂ ವಿವಾದವನ್ನು ತಣ್ಣಗಾಗಿಸುವ ಪ್ರಯತ್ನ ನಡೆಸಿದೆ. ಇದು ಖಂಡಿತ ದೇಶದ ಭದ್ರತೆಗೆ ಒಳ್ಳೆಯದಲ್ಲ ಎಂದು ಕೇಜ್ರಿವಾಲ್ ಕಿಡಿಕಾರಿದ್ದಾರೆ.
ಪದೇ ಪದೇ ಗಡಿ ಕ್ಯಾತೆ ತೆಗೆಯುವ ಚೀನಾಗೆ ಶಾಶ್ವತವಾಗಿ ಪೆಟ್ಟು ನೀಡಬೇಕು. ಚೀನಾ ಮತ್ತೆಂದೂ ಗಡಿಯಲ್ಲಿ ನಮ್ಮ ಸೈನಿಕರನ್ನು ಮುಟ್ಟುವ ಧೈರ್ಯ ತೋರಬಾರದು. ಇದಕ್ಕೆ ಮೋದಿ ಸರ್ಕಾರ ಕೆಲವು ಕಠಿಣ ಕ್ರಮಗಳನ್ನು ಕೈಗೊಳ್ಳುವ ಛಾತಿ ತೋರಬೇಕು ಎಂದು ಆಪ್ ರಾಷ್ಟ್ರೀಯ ಸಂಚಾಲಕ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆಗ್ರಹಿಸಿದ್ದಾರೆ




