ನಾನು ನೋಡಿದ ಆ ವಿಡಿಯೊ ಮನಸ್ಸನ್ನು ಕೆಡಿಸಿತ್ತು, ಘಟನೆಗೆ ಸಂಬಂಧವೇ ಇಲ್ಲದ ಚಿತ್ರದ ನಾಯಕಿ ಹಾಗೂ ಇನ್ನಿತರು ವೇದಿಕೆ ಮೇಲಿದ್ದರು. ಅವರನ್ನು ಅವಮಾನಿಸಿದ್ದು ಕನ್ನಡಿಗರು ಇಷ್ಟು ನ್ಯಾಯಸಮ್ಮತವಲ್ಲದ ರೀತಿ ನಡೆದುಕೊಳ್ಳುತ್ತಾರಾ ಎಂದು ನಟ ಸುದೀಪ್ ಬೇಸರ ವ್ಯಕ್ತಪಡಿಸಿದ್ದಾರೆ.
ಕ್ರಾಂತಿ ಸಿನಿಮಾ ಪ್ರಚಾರದ ವೇಳೆ ನಟ ದರ್ಶನ್ ಮೇಲೆ ಪುನೀತ್ ಅಭಿಮಾನಿ ಎನ್ನಲಾದ ವ್ಯಕ್ತಿಯೋರ್ವ ಚಪ್ಪಲಿ ಎಸೆದ ಘಟನೆ ಸಾಕಷ್ಟು ಚರ್ಚೆಗೆ ಗ್ರಾಸವಾಗ್ತಿದೆ. ಈ ಘಟನೆಯನ್ನು ವಿರೋಧಿಸಿ ಅನೇಕ ಸಿನಿಮಾ ತಾರೆಯರು ಪ್ರತಿಕ್ರಿಯೆ ನೀಡಿದ್ದರು. ಇದೀಗ ಒಂದು ಕಾಲದ ತನ್ನ ಕುಚಿಕು ಸ್ನೇಹಿತನಿಗೆ ಆದ ಅವಮಾನ ಕಂಡು ಕಿಚ್ಚ ಮರುಗಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಬರೆದುಕೊಂಡಿರುವ ಅವರು, ದರ್ಶನ್ ಕನ್ನಡ ಚಲನಚಿತ್ರರಂಗಕ್ಕೆ ಹಾಗೂ ಕನ್ನಡಕ್ಕೆ ಅಪಾರ ಕೊಡುಗೆಗಳನ್ನು ನೀಡಿದವರು. ದರ್ಶನ್ ಬಗ್ಗೆ ನನಗಿರುವ ನಿಜವಾದ ಭಾವನೆಯ ಕುರಿತು ಹೇಳುವುದನ್ನು ನಮ್ಮಿಬ್ಬರ ನಡುವಿನ ವೈಮನಸ್ಸಿನಿಂದ ತಡೆಯಲಾಗುವುದಿಲ್ಲ. ಆತನಿಗೆ ಈ ರೀತಿ ಮಾಡುವುದು ಖಂಡಿತ ತಪ್ಪು ಹಾಗೂ ಅದು ನನಗೂ ಸಹ ನೋವನ್ನು ಉಂಟುಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಕನ್ನಡ ಚಿತ್ರರಂಗ ಹಾಗು ಕನ್ನಡಿಗರು ಒಳ್ಳೆತನಕ್ಕೆ ಹೆಸರುವಾಸಿ. ಇಂತಹ ಕೃತ್ಯಗಳಿಂದ ಕೆಟ್ಟ ಸಂದೇಶವನ್ನು ರವಾನಿಸಬಾರದು. ಯಾವುದಕ್ಕೂ ರೋಷಾವೇಶದ ಪ್ರತಿಕ್ರಿಯೆಯನ್ನು ನೀಡಬಾರದು. ಪ್ರತಿ ನಟರು ಮತ್ತು ಅಭಿಮಾನಿಗಳಲ್ಲಿ ವ್ಯತ್ಯಾಸವಿರುತ್ತದೆ ಎಂಬುದು ತಿಳಿದಿದೆ ಹಾಗೂ ಇಬ್ಬರ ನಡುವೆ ಬಂದು ಮಾತನಾಡಲು ನಾನು ಯಾರೂ ಅಲ್ಲ. ಆದರೆ ಪುನೀತ್ ಹಾಗೂ ದರ್ಶನ್ ಇಬ್ಬರ ಜತೆಗೂ ಆಪ್ತತೆ ಹೊಂದಿದ್ದ ಮತ್ತು ಅವರ ಜೀವನದಲ್ಲಿ ಒಳ್ಳೆ ಸ್ಥಾನವನ್ನು ಗಳಿಸಿದ್ದ ನಾನು ಮಾತನಾಡುವ ಸ್ವಾತಂತ್ಯ ಹೊಂದಿದ್ದು, ನನ್ನ ಭಾವನೆಗಳನ್ನು ಬರೆದಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಮುಂದುವರೆದು, ಚಿತ್ರರಂಗದಲ್ಲಿ 27 ವರ್ಷದ ಪಯಣದಲ್ಲಿ ಒಂದು ವಿಷಯ ನನಗೆ ಅರ್ಥವಾಗಿದೆ. ಯಾವುದೂ ಹಾಗೂ ಯಾರೂ ಸಹ ಶಾಶ್ವತವಲ್ಲ. ಪ್ರೀತಿ ಹಾಗೂ ಗೌರವವನ್ನು ಕೊಟ್ಟು ಮರಳಿ ಪಡೆಯಿರಿ. ಇದೊಂದೇ ಯಾರನ್ನು ಬೇಕಾದರೂ ಯಾವ ಸಂದರ್ಭದಲ್ಲಾದರೂ ಗೆಲ್ಲಲು ಇರುವ ಮಾರ್ಗ ಎಂದು ತಿಳಿಸುವ ಮೂಲಕ ದರ್ಶನ್ ಮೇಲಿನ ಘಟನೆಯನ್ನು ತೀವ್ರವಾಗಿ ವಿರೋಧಿಸಿದ್ದಾರೆ.

#sudeep #kichcha sudeep #dharshan #sad #chapples #puneeth rajkumar fan




