ಪಂಜಾಬ್ ಮುಖ್ಯಮಂತ್ರಿ ಸ್ಥಾನಕ್ಕೆ ಕ್ಯಾಪ್ಟರ್ ಅಮರಿಂದರ್ ಸಿಂಗ್ ರಾಜೀನಾಮೆ

ಪಂಜಾಬ್ : ಪಂಜಾಬ್ ಮುಖ್ಯಮಂತ್ರಿ ಸ್ಥಾನಕ್ಕೆ ಕ್ಯಾಪ್ಟನ್ ಅಮರಿಂದರ್ ಸಿಂಗ್ ತಮ್ಮ ರಾಜಿನಾಮೆ ಸಲ್ಲಿಸಿದ್ದಾರೆ. ಇದರಿಂದ ಬಹಳ ದಿನಗಳಿಂದ ಉಂಟಾಗಿದ್ದ ಎಲ್ಲಾ ಉಹಾಪೋಹಗಳಿಗೆ ತೆರಬಿದ್ದಿದೆ.

ಇಂದು ಪಂಜಾಬ್ ರಾಜ್ಯಪಾಲರಾದ ಬನ್ವರಿಲಾಲ್ ಪುರೋಹಿತ್ ಅವರನ್ನು ಭೇಟಿ ಮಾಡಿ ತಮ್ಮ ರಾಜೀನಾಮೆ ಪತ್ರವನ್ನ ಸಲ್ಲಿಸಿದ್ದಾರೆ.

ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಹಾಗೂ ಪಂಜಾಬ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ನವಜೋತ್ ಸಿಂಗ್ ಸಿದ್ದು ನಡುವಿನ ಜಟಾಜಟಿಯೇ ಈಗ ಒಂದು ಹಂತ ತಲುಪಿದಂತಾಗಿದೆ. ಕಳೆದ ಹಲವಾರು ತಿಂಗಳಿಂದ ಇವರಿಬ್ಬರ ನಡುವೆ ಶೀತಲ ಸಮರ ನಡೆಯುತ್ತಿತ್ತು. ಇದು ಪಕ್ಷದ ಹೈಕಮಾಂಡ್ ಅಂಗಳಕ್ಕೆ ತಲುಪಿತ್ತು.


ಇದಕ್ಕೂ ಮುನ್ನ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ಮಗ ರನೀಂದರ್ ಸಿಂಗ್ ಅವರು ಟ್ವೀಟ್ ಮಾಡಿ, ತಮ್ಮ ತಂದೆ ರಾಜಿನಾಮೆ ಬಗ್ಗೆ ಸುಳಿವು ನೀಡಿದ್ದರು.

“ನಿಜವಾಗಿ ಈಗಲೇ ನಾನು ಹೋಗಬೇಕು. ಏಕೆಂದರೆ ನನ್ನ ತಂದೆ ರಾಜಭವನದಲ್ಲಿ ಪಂಜಾಬ್ ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವಾಗ ನಾನು ಜೊತೆಯಲ್ಲಿ ಇರಬೇಕು. ನಮ್ಮ ಕುಟುಂಬದ ಮುಖ್ಯಸ್ಥರಾಗಿ ನಮ್ಮನ್ನು ಹೊಸ ಆರಂಭಕ್ಕೆ ಅವರು ಕರೆದೊಯ್ಯುವಾಗ ನಾನು ನಿಜವಾಗಿಯೂ ಹೆಮ್ಮೆ ಪಡುತ್ತೇನೆ,” ಎಂದು ಟ್ವೀಟ್ ಮಾಡಿದ್ದರು.

ಈ ನಡುವೆಯೇ ಕಾಂಗ್ರೆಸ್ ಪಕ್ಷದ ವೀಕ್ಷಕರಾದ ಅಜಯ್ ಮಾಕೆನ್ ಮತ್ತು ಮನೀಶ್ ತಿವಾರಿ ಅವರನ್ನು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿದ್ದು ಚಂಡೀಗಢ ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡರು.

ಮುಂದಿನ ವರ್ಷ ನಡೆಯಲಿರುವ ಚುನಾವಣೆಗೆ ಮೊದಲು ಮುಖ್ಯಮಂತ್ರಿಯನ್ನು ಬದಲಿಸಬೇಕೆಂದು ಪಂಜಾಬ್ ಕಾಂಗ್ರೆಸ್ ನ 80 ಶಾಸಕರ ಪೈಕಿ 50 ಶಾಸಕರು  ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದರು ಎನ್ನಲಾಗಿದೆ. ಈ ಪತ್ರದ ಆಧಾರದ ಮೇಲೆ ಹಾಗೂ ಉಸ್ತುವಾರಿ ಅವರು ನೀಡಿರುವ ವರದಿ ಆಧಾರದ ಮೇಲೆ ಇಂದು ಬೆಳಗ್ಗೆ ಅಮರಿಂದರ್ ಸಿಂಗ್ ಅವರಿಗೆ ರಾಜಿನಾಮೆ ನೀಡಲು ಪಕ್ಷದ ಹೈಕಮಾಂಡ್ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಅವರು ಸಿಎಂ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ್ದಾರೆ.

More News