ಬೆಳಗಾವಿ : ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಕು ಅನ್ನೋದು ಬಹುದಿನಗಳ ಬೇಡಿಕೆಯಾಗಿದೆ. ಈ ಹಿಂದೆ ಸಿಎಂ ಆಗಿದ್ದ ಬಿಎಸ್ ಯಡಿಯೂರಪ್ಪ ಅವರು ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುತ್ತೇವೆ ಅನ್ನೋ ಭರವಸೆಯನ್ನು ಕೂಡ ನೀಡಿದ್ದರು.
ಆದರೆ ಕಾರಣಾಂತರಗಳಿಂದಾಗಿ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಬಳಿಕ ಸಿಎಂ ಆಗಿ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿ ಆಡಳಿತ ಶುರು ಮಾಡಿದರು. ಸಿಎಂ ಬದಲಾವಣೆ ಬಳಿಕವೂ ಕೂಡ ಪಂಚಮಸಾಲಿ ಸಮುದಾಯದ ನಾಯಕರ ಹೋರಾಟ ಮುಂದುವರೆದಿತ್ತು.

ಈಗ ಚುನಾವಣೆ ಹೊಸ್ತಿಲಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಸಮುದಾಯದ ಮತಗಳ ಮೇಲೆ ಕಣ್ಣಿಟ್ಟಿದ್ದು ಎಚ್ಚರಿಕೆಯ ನಡೆ ಮೂಲಕ ಮೀಸಲಾತಿ ಬಗ್ಗೆ ಮಹತ್ವದ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.
ಮತ್ತೊಂದು ಕಡೆ ಇದೇ ಸರಿಯಾದ ಟೈಂ ಅಂತಾ ಅರಿತ ಒಕ್ಕಲಿಗರು ಕೂಡ ನಮಗೂ ಮೀಸಲಾತಿ ಹೆಚ್ಚಳ ಮಾಡಿ ಅಂತಾ ಸಿಎಂ ಬೊಮ್ಮಾಯಿಗೆ ದುಂಬಾಲು ಬಿದ್ದಿದ್ದರು. ಈಗ ಎರಡು ಸಮುದಾಯದಗಳಿಗೆ ಮೀಸಲಾತಿ ನೀಡುವ ಬಗ್ಗೆ ಗಂಭೀರವಾಗಿ ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗುತ್ತಿದೆ.
ಇಂದು ಬೆಳಗಾವಿಯ ಸುವರ್ಣಸೌಧದಲ್ಲಿ ತುರ್ತು ಸಚಿವ ಸಂಪುಟ ಸಭೆ ನಡೆಯಲಿದ್ದು, ಪಂಚಮಸಾಲಿ ಮತ್ತು ಒಕ್ಕಲಿಗ ಮೀಸಲಾತಿ ಬಗ್ಗೆ ಮಹತ್ವದ ತೀರ್ಮಾನ ಸಾಧ್ಯತೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಪ್ರತ್ಯೇಕ ಪ್ರವರ್ಗ ರಚಿಸಿ ಮೀಸಲಾತಿ ನೀಡಲು ಚಿಂತನೆ ನಡೆಸಲಾಗಿದೆ ಅಂತೆ.
ಹಾಲಿ ಒಬಿಸಿ 3A ಮತ್ತು 3B ರದ್ದುಗೊಳಿಸಿ 2C ಮತ್ತು 2D ರಚನೆಗೆ ತೀರ್ಮಾನ ಸಾಧ್ಯತೆ ಇದೆ. 3A ಅಡಿಯಲ್ಲಿ ಒಕ್ಕಲಿಗ, ರೆಡ್ಡಿ, ಬಲಿಜ, ಬಂಟ, ಕೊಡವ ಸೇರಿ 12 ಜಾತಿಗಳು, 3B ಅಡಿಯಲ್ಲಿ ವೀರಶೈವ ಮತ್ತು ಲಿಂಗಾಯತ ಸಮುದಾಯಗಳು ಮತ್ತು ಉಪಜಾತಿಗಳನ್ನು ಶಿಫ್ಟ್ ಮಾಡುವ ಚಿಂತನೆ ಮಾಡಲಾಗಿದೆ.

ಇಡಬ್ಲ್ಯುಎಸ್ ಅಡಿ ರಾಜ್ಯಗಳಿಗೆ ಇರುವ ಅಧಿಕಾರ ಚಲಾಯಿಸಿ ಪಂಚಸಾಲಿಗಳಿಗೆ ಶೇ 4 ಮತ್ತು ಒಕ್ಕಲಿಗರಿಗೆ ಶೇ 3 ಮೀಸಲು ಮರು ಹಂಚಿಕೆ ಮಾಡಲು ನಿರ್ಧಾರ ಮಾಡಲಾಗಿದೆ ಎನ್ನಲಾಗಿದೆ. ಎಸ್ಸಿಎಸ್ಟಿ ಮೀಸಲಾತಿ ಹೆಚ್ಚಳದಿಂದ ಶೇ ೫% ಕಡಿತವಾದ ಪ್ರಮಾಣವನ್ನು ಇಡಬ್ಯ್ಲುಎಸ್ ಅಡಿಯಲ್ಲಿ ಹಂಚಿಕೆ ಮಾಡುವ ಸಾಧ್ಯತೆಯಿದೆ.
ಅಂತೆಯೇ ಮೀಸಲಾತಿ ಮರು ಹಂಚಿಕೆಯಿಂದಲೂ ರಾಜ್ಯದಲ್ಲಿ ಮೀಸಲಾತಿ ಪ್ರಮಾಣ ಶೇ. 66% ಕ್ಕೆ ಹೆಚ್ಚಳವಾಗಲಿದೆ. ಇಡಬ್ಲ್ಯುಡಿ ಬ್ರಾಹ್ಮಣ, ಆರ್ಯ,ವೈಶ್ಯ ನಾಯರ್, ಮೊದಲಿಯಾರ್ ಗಳ ಮೀಸಲಾತಿ ಶೇ 3 ಕ್ಕೆ ಕಡಿತವಾಗಲಿದೆ. ಒಂದು ವೇಳೆ ಸರ್ಕಾರ ಈ ತೀರ್ಮಾನದಂತೆ ಮೀಸಲಾತಿ ಹೆಚ್ಚಳ ಮಾಡಿದ್ರೆ ಯಾವ ಸಮುದಾಯಕ್ಕೆ ಎಷ್ಟು ಮೀಸಲಾತಿ ಸಿಗಲಿದೆ ಅನ್ನೋದರ ಮಾಹಿತಿ ಇಲ್ಲಿದೆ.
ಎಸ್ ಸಿ- ಶೇ 17
ಎಸ್ ಟಿ – ಶೇ 7
ಪ್ರವರ್ಗ 1 : ಶೇ 4
ಪ್ರವರ್ಗ 2 ಎ : ಶೇ 15
ಪ್ರವರ್ಗ 2 ಬಿ : ಶೇ 4
ಪ್ರವರ್ಗ 2 ಸಿ : ಶೇ 7
ಪ್ರವರ್ಗ 2 ಡಿ : ಶೇ 7
ಸರ್ಕಾರ ಏನೋ ಸದ್ಯಕ್ಕೆ ಮೀಸಲಾತಿ ಅನ್ನೋ ಕುಣಿಕೆಯಿಂದ ಸದ್ಯಕ್ಕೆ ಪಾರಾಗೋ ಯತ್ನ ಮಾಡುತ್ತಿದೆ. ಆದ್ರೆ ಕಾನೂನಿ ಪ್ರಕಾರ ಶೇಕಡಾ 50ಕ್ಕಿಂತ ಹೆಚ್ಚಿನ ಮೀಸಲಾತಿ ನೀಡಲು ಸಾಧ್ಯವಿಲ್ಲ. ಸರ್ಕಾರದ ಈ ಐಡಿಯಾ ವರ್ಕೌಟ್ ಆಗುತ್ತಾ ಅನ್ನೋದೆ ಯಕ್ಷ ಪ್ರಶ್ನೆ ಆಗಿದೆ.
#CABINET MEETING #CHIEFMINISTER #BASAVARAJBOMMAI #CMBOMMAI #BSYEDIYURAPPA #FORMERCM #RESERVATION #PANCHAMASALI #LINGAYUTHS




