ನವದೆಹಲಿ : ಅತಿಥೇಯ ಭಾರತ ಹಾಗೂ ಪ್ರವಾಸಿ ಶ್ರೀಲಂಕಾ ನಡುವಿನ ವೈಟ್ ಬಾಲ್ ಕ್ರಿಕೆಟ್ ಸರಣಿಗೆ ವೇದಿಕೆ ಸಜ್ಜಾಗಿದ್ದು, ಉಭಯ ತಂಡಗಳ ನಡುವಿನ ಮೂರು ಪಂದ್ಯಗಳ T20I ಸರಣಿ ನಾಳೆಯಿಂದ(ಜನವರಿ 3) ಆರಂಭವಾಗಲಿದೆ.
ಟೀಂ ಇಂಡಿಯಾ ವಿರುದ್ಧ ಸೀಮತ ಓವರ್‌ಗಳ ಸರಣಿ ಆಡಲು ಶ್ರೀಲಂಕಾ ತಂಡ ಈಗಾಗಲೇ ಭಾರತಕ್ಕೆ ಆಗಮಿಸಿದೆ. ಎರಡು ತಂಡಗಳಿಗೂ ಇದು ಈ ವರ್ಷದ ಮೊದಲ ಸರಣಿಯಾಗಿದ್ದು, ಜಯದ ನಿರೀಕ್ಷೆಯೊಂದಿಗೆ ಸರಣಿ ಆರಂಭಿಸಲು ಸಜ್ಜಾಗಿವೆ.

ಜ.3ರಿಂದ ಟಿ20 ಸರಣಿ ಆರಂಭಗೊಂಡರೆ, ಬಳಿಕ ಜ.10ರಿಂದ ಜ.15ರವರೆಗೆ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದೆ.
ವೈಟ್ ಬಾಲ್ ಸರಣಿಗಾಗಿ ಈಗಾಗಲೇ ಎರಡು ತಂಡಗಳ ಆಟಗಾರರ ಪಟ್ಟಿಯನ್ನ ಬಿಡುಗಡೆ ಮಾಡಲಾಗಿದೆ. ಕಳೆದ ವರ್ಷದಲ್ಲಿ ವೈಟ್ ಬಾಲ್ ಕ್ರಿಕೆಟ್‌ನಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಭಾರತ ಈ ಬಾರಿ ತವರಿನಲ್ಲಿ ನಡೆಯುವ ODI ವಿಶ್ವಕಪ್ ಸೇರಿದಂತೆ ಮುಂದಿನ ವರ್ಷ ನಡೆಯಲಿರುವ T20I ವಿಶ್ವಕಪ್ ಪಂದ್ಯಾವಳಿಗೆ ಬಲಿಷ್ಠ ತಂಡವನ್ನ ರೂಪಿಸಲು ತಯಾರಿ ಮಾಡಿಕೊಳ್ಳುತ್ತಿದೆ. ಹೀಗಾಗಿ ಟೀಂ ಇಂಡಿಯಾದ ಹಿರಿಯ ಹಾಗೂ ಕಿರಿಯ ಆಟಗಾರರು ಸಹ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆ ಹೊಂದಿದ್ದಾರೆ.

ಮತ್ತೊಂದೆಡೆ ಶನಕಾ ನೇತೃತ್ವದಲ್ಲಿ ಭಾರತ ಪ್ರವಾಸ ಕೈಗೊಂಡಿರುವ ಶ್ರೀಲಂಕಾ ತಂಡ ಸಹ ಉತ್ತಮ ಆರಂಭದ ಲೆಕ್ಕಾಚಾರದಲ್ಲಿದೆ. ಅನುಭವಿ ಹಾಗೂ ಯುವ ಆಟಗಾರರ ಪಡೆಯನ್ನ ಹೊಂದಿರುವ ಲಂಕಾ ತಂಡ ದೊಡ್ಡಮಟ್ಟದ ಯಶಸ್ಸಿನ ನಿರೀಕ್ಷೆಯಲ್ಲಿದೆ. ದುಷ್ಮಾಂತಾ ಚಾಮೀರಾ ತಂಡದಿಂದ ಹೊರಗುಳಿದಿದ್ದರೆ, ಮಿಸ್ಟ್ರಿ ಸ್ಪಿನ್ನರ್ ವನಿಂದು ಹಸರಂಗ ಅವರನ್ನು ತಂಡದ ಉಪನಾಯಕನಾಗಿ ನೇಮಿಸಲಾಗಿದೆ. ಏಕದಿನ ಕ್ರಿಕೆಟ್ ತಂಡಕ್ಕೆ ಕುಸಾಲ್ ಮೆಂಡಿಸ್ ಅವರನ್ನ ಉಪನಾಯಕನಾಗಿ ಆಯ್ಕೆ ಮಾಡಲಾಗಿದೆ.
ಭಾರತ v ಶ್ರೀಲಂಕಾ ಸರಣಿಯ ವೇಳಾಪಟ್ಟಿ
1ನೇ ಟಿ20 – ಜನವರಿ 3, ಮುಂಬೈ
2ನೇ ಟಿ20 – ಜನವರಿ 5, ಪುಣೆ
3ನೇ ಟಿ20 – ಜನವರಿ 7, ರಾಜ್ಕೋಟ್
1ನೇ ODI – ಜನವರಿ 10, ಗುವಾಹಟಿ
2ನೇ ODI – ಜನವರಿ 12, ಕೊಲ್ಕತ್ತಾ
3ನೇ ODI – ಜನವರಿ 15, ತಿರುವನಂತಪುರಂ
#INDIAN TEAM #T20 CRICKET #SRILANKA TEAM #MUMBAI #HARDIK PANDYA #SHANAKA #WHITEBALL




