ಬೆಂಗಳೂರು ; ಜ.02: ಪ್ರೀತಿ ವಿಚಾರಕ್ಕೆ ‘ಭಗ್ನ ಪ್ರೇಮಿ’ಯೋರ್ವ ಕಾಲೇಜಿನಲ್ಲೇ ಯುವತಿಗೆ ಚಾಕು ಇರಿದು ಕೊಂದು ಹಾಕಿರುವ ಘಟನೆ ಮಂಗಳವಾರ ಬೆಂಗಳೂರಿನಲ್ಲಿ ನಡೆದಿದೆ. ಯಲಹಂಕದ ಕಾಲೇಜೊಂದರಲ್ಲಿ ಬೆಚ್ಚಿಬೀಳಿಸುವ ಆತಂಕಕಾರಿ ಘಟನೆಯೊಂದು ಇಂದು ನಡೆದಿದೆ. ಪ್ರೆಸಿಡೆನ್ಸಿ ಕಾಲೇಜಿನಲ್ಲಿ ವಿದ್ಯಾರ್ಥಿನಿಗೆ ಚಾಕು ಇರಿದ ಪರಿಣಾಮ ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.ವಿದ್ಯಾರ್ಥಿನಿಗೆ ಚಾಕು ಇರಿದ ಬಳಿಕ ವಿದ್ಯಾರ್ಥಿ ತಾನೂ ಸಹ ಚಾಕುವಿನಿಂದ ಇರಿದುಕೊಂಡಿದ್ದಾನೆ.
ಬೇರೊಬ್ಬ ಹುಡುಗನ ಜೊತೆ ಓಡಾಡುತ್ತಿದ್ದ ಕಾರಣಕ್ಕೆ ಯುವತಿಗೆ ಚಾಕು ಇರಿದ
ಬೇರೊಬ್ಬ ಹುಡುಗನ ಜೊತೆ ಓಡಾಡುತ್ತಿದ್ದ ಕಾರಣಕ್ಕೆ ಯುವತಿಗೆ ಚಾಕುವಿನಿಂದ ಇರಿದ ಯುವಕ ನಂತರ ತಾನೂ ಚಾಕುವಿನಿಂದ ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಯುವತಿ ಸಾವನ್ನಪ್ಪಿದ್ದು, ಯುವಕನ ಸ್ಥಿತಿ ಚಿಂತಾಜನಕವಾಗಿದೆ.

ಯಲಹಂಕ ತಾಲೂಕಿನ ರಾಜಾನುಕುಂಟೆ ಬಳಿಯ ಪ್ರೆಸಿಡೆನ್ಸಿ ಕಾಲೇಜ್ ಬಳಿ ಇಂದು ಮಧ್ಯಾಹ್ನ 12:30ರ ಸಮಯದಲ್ಲಿ ಘಟನೆ ನಡೆದಿದೆ. ಘಟನೆಯಲ್ಲಿ ಎಂ.ಟೆಕ್ ಮೊದಲ ಸೆಮಿಸ್ಟರ್ ವಿದ್ಯಾರ್ಥಿನಿ ಲಯಸ್ಮಿತಾ (20) ಚಾಕು ಇರಿತಕ್ಕೆ ಒಳಗಾಗಿ ಆಸ್ಪತ್ರೆ ಸಾಗಿಸುವ ದಾರಿ ಮಧ್ಯೆಯೇ ಸಾವನ್ನಪ್ಪಿದ್ದಾಳೆ. ಯುವತಿಗೆ ಚಾಕು ಇರಿದ ಪವನ್ ಕಲ್ಯಾಣ್ ಕೂಡ ಚಾಕುವಿನಿಂದ ಇರಿದು ಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೃತ ಸ್ಮಿತಾ ಮತ್ತು ಪವನ್ ಕಲ್ಯಾಣ್ ಕೋಲಾರ ಮೂಲದವರು. ಸ್ಮಿತಾಳನ್ನ ಪವನ್ ಪ್ರೀತಿ ಮಾಡುತ್ತಿದ್ದ. ಆದರೆ ಸ್ಮಿತಾ, ಪವನ್ ಪ್ರೀತಿಗೆ ಒಪ್ಪಿಗೆ ಕೊಟ್ಟಿರಲಿಲ್ಲ. ಇತ್ತೀಚಿಗೆ ಸ್ಮಿತಾ ಬೇರೊಬ್ಬ ಹುಡುಗನ ಜೊತೆ ಓಡಾಡುತ್ತಿದ್ದ ವಿಷಯ ತಿಳಿದ ಪವನ್ ಇಂದು ಕಾಲೇಜ್ ಗೆ ಬಂದು ಚಾಕುವಿನಿಂದ ಇರಿದಿದ್ದಾನೆ.
ಪವನ್ ಕಲ್ಯಾಣ್ ಬೇರೆ ಕಾಲೇಜಿನ ವಿದ್ಯಾರ್ಥಿಯಾಗಿದ್ದು, ಆತ ಕಾಲೇಜಿನ ತರಗತಿ ಬಳಿ ಹೇಗೆ ಬಂದ ಎಂಬ ಪ್ರಶ್ನೆ ಕಾಡುತ್ತಿದೆ. ಕಾಲೇಜ್ ಆಡಳಿತ ಮಂಡಳಿಯ ಭದ್ರತಾ ವೈಫಲ್ಯವೇ ಘಟನೆಗೆ ಕಾರಣವಾಯ್ತಾ ಅನ್ನುವ ಸಂಶಯ ಕಾಡುತ್ತಿದೆ. ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಈ ಸಂಬಂಧ ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




