ಬೆಂಗಳೂರು : ರಾಜ್ಯದಲ್ಲಿ ಇನ್ನೇನು ವಿಧಾನ ಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ರಾಜಕೀಯ ಪಕ್ಷಗಳು ನಾನಾ ರೀತಿಯಲ್ಲಿ ತಯಾರಿ ಆರಂಭಿಸಿವೆ. ಅದೇ ರೀತಿಯಲ್ಲಿ ಆಡಳಿತರೂಢ ಬಿಜೆಪಿ ಪಕ್ಷ ನಾನಾ ರೀತಿಯ ಆರೋಪಗಳ ಹೊರತಾಗಿಯೂ ಪ್ರಚಾರವನ್ನು ಆರಂಭಿಸಿದೆ.
ಈ ಹಿನ್ನೆಲೆಯಲ್ಲಿ ಈಗಾಗಲೇ ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕಾಗಮಿಸಿ ಬಹಿರಂಗ ಸಭೆಗಳನ್ನು ನಡೆಸಿದ ಮೇಲೆ ಇದೀಗ ರಾಷ್ಟ್ರೀಯ ಅಧ್ಯಕ್ಷರ ಸರದಿ. ನಾಳೆಯಿಂದ ರಾಜ್ಯದಲ್ಲಿ ಜೆಪಿ ನಡ್ಡಾ ಪ್ರವಾಸ ಕೈಗೊಳ್ಳಲಿದ್ದು, ಮಠ, ಮಂದಿರಗಳಿಗೆ ಭೇಟಿ ನೀಡಲಿದ್ದಾರೆ.

ಇದುವರೆಗೂ ಹಿಂದುತ್ವದ ಆಧಾರದಲ್ಲಿ ಚುನಾವಣೆಗಳನ್ನು ಎದುರಿಸುತ್ತಿರುವ ಬಿಜೆಪಿ ಈ ಬಾರಿಯೂ ಹಿಂದುತ್ವ ಮತ್ತು ಪ್ರಧಾನಿ ಮೋದಿಯವರನ್ನು ಬಳಸಿಕೊಳ್ಳಲಿದೆ. ರಾಜ್ಯಕ್ಕಾಗಮಿಸುವ ನಡ್ಡಾರವರು ಗುರುವಾರ ಮತ್ತ ಶುಕ್ರವಾರ ಎರಡು ದಿನ ತುಮಕೂರು, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳಿಗೆ ಭೇಟಿ ನೀಡಲಿದ್ದಾರೆ.
ಎರಡು ದಿನಗಳಲ್ಲಿ ಲಿಂಗಾಯತ, ವಾಲ್ಮೀಕಿ, ಮಾದಾರ, ಸಾಧರ ಮಠಗಳಿಗೆ ಭೇಟಿ ನೀಡಲಿದ್ದಾರೆ. ಸಿದ್ದಗಂಗಾ ಮಠ, ಸಿರಿಗೆರೆ ತರಳಬಾಳುಮಠ, ಹರಿಹರದ ರಾಜನಹಳ್ಳಿ ವಾಲ್ಮೀಕಿ ಪೀಠ, ಮಾದಾರ ಚೆನ್ನಯ್ಯ ಪೀಠ ಹಾಗೂ ಒನಕೆ ಓಬಬ್ಬ, ವೀರಮದಕರಿ ನಾಯಕರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.

ಜೊತೆಗೆ ತುಮಕೂರು ಮತ್ತು ಮಧುಗಿರಿಯಲ್ಲಿ ಶಕ್ತಿ ಕೇಂದ್ರದ ಪ್ರಮುಖರ ಸಭೆ ನಡೆಸಲಿರುವ ಅವರು, ಚಿತ್ರದುರ್ಗದಲ್ಲಿ ಎಸ್ಸಿ/ಎಸ್ಟಿ, ಒಬಿಸಿ ಕಾರ್ಯಕರ್ತರ ಸಮಾವೇಶ ಬಳಿಕ ದಾವಣಗೆರೆಯಲ್ಲಿ ವಿಭಾಗ ಮಟ್ಟದ ಸಂಸದರು, ಶಾಸಕರು, ಜನಪ್ರತಿನಿಧಿಗಳ ಸಭೆಯನ್ನು ನಡೆಸಲಿದ್ದಾರೆ.
ಆಮೂಲಕ ಚುನಾವಣಾ ಅಖಾಡಕ್ಕೆ ಅಧಿಕೃತ ಎಂಟ್ರಿ ಕೊಡಲಿರುವ ಅವರು ರಾಜ್ಯ ನಾಯಕರನ್ನು ಚುನಾವಣೆಯಲ್ಲಿ ತೊಡಗಿಸಿಕೊಳ್ಳಲು ಸೂಚನೆ ನೀಡಲಿದ್ದಾರೆ.
#JP NADDA #BJP NATIONAL PRESIDENT #SHAKTI KENDRA #TUMKURU #DAVANAGERE #CHITHRADURGA #MATH #STATUE #GARLANDING #TWO DAY VISIT




